ಹುಣಸೂರು ಸಂಪೂರ್ಣ ಕೇಸರಿಮಯ: ಅದ್ಧೂರಿ ಹನುಮ ಜಯಂತಿ

| Published : Dec 16 2024, 12:46 AM IST

ಹುಣಸೂರು ಸಂಪೂರ್ಣ ಕೇಸರಿಮಯ: ಅದ್ಧೂರಿ ಹನುಮ ಜಯಂತಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ಮೆರವಣಿಗೆಯಲ್ಲಿ ಪ್ರಖರ ಹಿಂದೂವಾದಿ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಜರಾಗುವ ಮೂಲಕ ಹಿಂದೂ ಯುವಕರ ಉತ್ಸಾಹವನ್ನು ಇನ್ನಷ್ಟು ಇಮ್ಮಡಿಗೊಳಿಸಿದ್ದು ವಿಶೇಷ. ಪುಟಾಣಿ ಮಕ್ಕಳಿಂದ ಆರಂಗೊಂಡು ವೃದ್ಧರಾದಿಯಾಗಿ ಎಲ್ಲರೂ ಕೇಸರಿ ಶಾಲು, ರುಮಾಲು, ಪೇಟ ಧರಿಸಿ ಆಂಜನೇಯ ಸ್ಮರಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಹುಣಸೂರು

ಹುಣಸೂರಿನಲ್ಲಿ ಭಾನುವಾರ ಆಯೋಜನೆಗೊಂಡಿದ್ದ 30ನೇ ವರ್ಷದ ಹನುಮಜಯಂತಿಯ ಭವ್ಯ ಮೆರವಣಿಗೆಯಲ್ಲಿ 25 ಸಾವಿರಕ್ಕೂ ಹೆಚ್ಚು ಹನುಮ ಭಕ್ತರು ಒಟ್ಟಾಗಿ ಸೇರಿ ಇಡೀ ಪಟ್ಟಣವನ್ನು ಕೇಸರಿಮಯವಾಗಿಸಿದರು. ಹನುಮ ಭಾವಚಿತ್ರವಿದ್ದ ಹೊಂದಿದ ಕೇಸರಿಧ್ವಜಗಳು ರಾರಾಜಿಸಿದವು.

ಈ ಬಾರಿಯ ಮೆರವಣಿಗೆಯಲ್ಲಿ ಪ್ರಖರ ಹಿಂದೂವಾದಿ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಜರಾಗುವ ಮೂಲಕ ಹಿಂದೂ ಯುವಕರ ಉತ್ಸಾಹವನ್ನು ಇನ್ನಷ್ಟು ಇಮ್ಮಡಿಗೊಳಿಸಿದ್ದು ವಿಶೇಷ. ಪುಟಾಣಿ ಮಕ್ಕಳಿಂದ ಆರಂಗೊಂಡು ವೃದ್ಧರಾದಿಯಾಗಿ ಎಲ್ಲರೂ ಕೇಸರಿ ಶಾಲು, ರುಮಾಲು, ಪೇಟ ಧರಿಸಿ ಆಂಜನೇಯ ಸ್ಮರಣೆ ಮಾಡಿದರು.

ಕಲ್ಕುಣಿಕೆ ರಂಗನಾಥ ಬಡಾವಣೆಯಲ್ಲಿ 11.30ರ ವೇಳೆಗೆ ವಾಡಿಕೆಯಂತೆ ಗಾವಡಗೆರೆ ಶ್ರೀ ಗುರುಲಿಂಗಜಂಗಮದೇವರ ಮಠದ ಶೀ ನಟರಾಜ ಸ್ವಾಮಿಗಳು ಮತ್ತು ಮಾದಳ್ಳಿ ಉಕ್ಕಿನಕಂತ ಮಠದ ಶ್ರೀ ಸಾಂಬಸದಾಶಿವ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಮತ್ತಿತರ ಗಣ್ಯರು ಶ್ರೀರಾಮ, ಸೀತಾಮಾತೆ, ಲಕ್ಷ್ಮಣರನ್ನೊಳಗೊಂಡು ಆಂಜನೇಯನ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ಎತ್ತರದ ವಾಹನದಲ್ಲಿ ಎಲ್ಲ ಗಣ್ಯರೂ ನಿಂತು ಆಂಜನೇಯನ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆ ಆರಂಭಗೊಂಡಿತು. ಪ್ರಮೋದ್ ಮುತಾಲಿಕ್ ಜೈಶ್ರೀರಾಮ್ ಘೋಷಣೆಗೆ ಯುವಪಡೆ ಹುಚ್ಚೆದ್ದು ಕುಣಿದು ಪ್ರತಿಸ್ಪಂದನೆ ನೀಡಿದರು.

ರಂಗನಾಥ ಬಡಾವಣೆಯಿಂದ ಹೊರಟ ಮೆರವಣಿಗೆ ಕಲ್ಕುಣಿಕೆ ವೃತ್ತವನ್ನು ಹಾದು, ಶಬರಿಪ್ರಸಾದ್, ಸೇತುವೆಯ ಮೂಲಕ ಸಂವಿಧಾನ ವೃತ್ತವನ್ನು ತಲುಪಿತು. ಈ ಹೊತ್ತಿಗಾಗಲೇ ರಸ್ತೆೆಯುದ್ದಕ್ಕೂ ಯುವಕರು ಕೇಸರಿ ಬಾವುಟವನ್ನು ಹಿಡಿದು ಶ್ರಿರಾಮ, ಆಂಜನೇಯನ ಘೋಷಣೆಗಳನ್ನು ಕೂಗುತ್ತಾ ಸಾಗಲು ಆರಂಭಿಸಿದರು. ಕ್ಷಣಕ್ಷಣಕ್ಕೂ ವಾಯುಪುತ್ರನ ಅಭಿಮಾನಿಗಳ ಸಂಖ್ಯೆೆ ಹೆಚ್ಚುತ್ತಲೇ ಹೋಯಿತು. . ನಾವಲ್ಲೆೆ ಹಿಂದೂ ನಾವೆಲ್ಲ ಒಂದು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು. ಎಸ್ ಜೆ ರಸ್ತೆಯನ್ನು ಹಾದು ಜೆಎಲ್ಬಿ ರಸ್ತೆ ತಲುಪುವ ವೇಳೆ ಸಂಜೆ ನಾಲ್ಕರ ಸಮಯದ ದಾಟಿತ್ತು.

ಸಂಜೆ ನಾಲ್ಕರ ವೇಳೆಗೆ ಬಜಾರ್ ರಸ್ತೆಯಲ್ಲಿ ಮಾರುತಿ ಭಕ್ತರು ಉದ್ಘೋಷಗಳನ್ನು ಮೊಳಗಿಸಿದರು. ಪೊಲೀಸರು ಮೆರವಣಿಗೆ ಎಲ್ಲೂ ನಿಲ್ಲದಂತೆ ಕ್ರಮವಹಿಸಿ ಶೀಘ್ರ ಮುನ್ನಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಮೆರವಣಿಗೆಯು ಅಕ್ಷಯ ಭಂಡಾರ್ ಮೂಲಕ, ಬಸ್ ನಿಲ್ದಾಣದ ಹಾದು ಮೈಸೂರು-ಹುಣಸೂರು ಮುಖ್ಯರಸ್ತೆೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯ ಆವರಣ ತಲುಪುವ ಮೂಲಕ ಮೆರವಣಿಗೆ ಶಾಂತಿಯುತವಾಗಿ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ತಾಲೂಕು ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷರಾದ ಎಚ್.ವೈ.ಮಹದೇವ್, ಚಂದ್ರಶೇಖರ್, ನಗರಸಭಾ ಅಧ್ಯಕ್ಷ ಎಸ್.ಶರವಣ, ಸದಸ್ಯ ಕೃಷ್ಣರಾಜ ಗುಪ್ತ, ವಿವೇಕಾನಂದ, ದೇವರಾಜ್, ಮುಖಂಡರಾದ ಬಿ.ಎಸ್.ಯೋಗಾನಂದಕುಮಾರ್, ಇತರರು ಭಾಗವಹಿಸಿದ್ದರು.

ಪವನಸುತನ ಸ್ಮರಣೆಯಲ್ಲಿ ಧನ್ಯತೆ ಪಡೆದರು:

ಮೆರವಣಿಗೆಯುದ್ದಕ್ಕೂ ಯುವಪಡೆ ಶ್ರೀರಾಮಚಂದ್ರ, ಆಂಜನೇಯರ ಗುಣಗಾನಮಾಡುತ್ತಲೇ ಸಾಗಿದರು. ರಸ್ತೆಯ ಇಕ್ಕೆಲಗಳಲ್ಲು ಸ್ಥಳೀಯ ಜನರು ಆಸಕ್ತಿಯಿಂದ ಕೇಸರಿ ಬಂಟಿಂಗ್ಸ್ ಗಳನ್ನು, ಪವನಸುತ ವಿವಿಧ ಭಂಗಿಗಳ ಭಾವಚಿತ್ರವನ್ನು ಅಳವಡಿಸಿದ್ದರು. ಯುವಕರು ಬೈಕ್ನಲ್ಲಿ ಬಾವುಟ ಕಟ್ಟಿಕೊಂಡು ಹೆಮ್ಮೆಯಿಂದ ಓಡಾಡಿದರು. ಮೆರವಣಿಗೆಯಲ್ಲಿ 10ಕ್ಕೂ ಹೆಚ್ಚು ಶ್ರೀ ಆಂಜನೇಯನ ಮೂರ್ತಿಗಳು ಪಾಲ್ಗೊಂಡಿದ್ದವು. ಝಾನ್ಸಿ ಲಕ್ಷ್ಮೀ ಬಾಯಿ ಜಾಗೃತ ನಾಗರಿಕರ ವೇದಿಕೆ ವತಿಯಿಂದ ಕೃಷ್ಣಸುಂದರನಾದ ಆಂಜನೇಯ ಎಲ್ಲರ ಗಮನ ಸೆಳೆಯಿತು. ಪಂಚಲೋಹದಿಂದ 5 ಅಡಿ ಎತ್ತರದ ತಯಾರಿಸಿದ ಪವನಸುತನ ಮೂರ್ತಿ, 15 ಅಡಿ ಎತ್ರದ ಬೃಹತ್ ಮೂರ್ತಿಗಳು ಎಲ್ಲರಲ್ಲೂ ಭಕ್ತಿಯ ಪರಾಕಾಷ್ಠೆಯನ್ನು ತಲುಪುವಂತೆ ಮಾಡಿದವು ಶಿವಜ್ಯೋತಿ ನಗರದ ಗರಡಿಮನೆ, ಕಲ್ಕುಣಿಕೆ ನಾಯಕರ ಗರಡಿಮನೆ, ಮುತ್ತುಮಾರಮ್ಮ ಗರಡಿಮನೆಯ ಆಂಜನೇಯಮೂರ್ತಿಗಳು, ದತ್ತಾಾತ್ರೇಯ ಮೂರ್ತಿ ಮುಂತಾದವುಗಳು ಮೆರವಣಿಗೆಯಲ್ಲಿ ಪಾಲ್ಗೊೊಂಡಿದ್ದವು.

ಜಾನಪದ ಕಲೆಗಳ ಅನಾವರಣ:

ಮೆರವಣಿಗೆಯಲ್ಲಿ ಕೇರಳದ ಚಂಡೆವಾದನ, ಎಚ್.ಡಿ.ಕೋಟೆ ಬಸವನಮಟ್ಟಿ ಹಾಡಿಯ ಸೋಲಿಗರ ಕುಣಿತ, ಗಾವಡಗೆರೆಯ ಯುವಕ ತಂಡದಿಂದ ತಮಟೆವಾದನ, ಸರಸ್ವತಿಪುರಂನ ಡೊಳ್ಳುಕುಣಿತ, ವೀರಗಾಸೆಕುಣಿತ, ಕೀಲುಕುದುರೆಗಳು, ಮಂಗಳವಾದ್ಯ ಮೆರವಣಿಗೆಯ ಅಂದವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಸಫಲವಾದವು.

ಪ್ರತಿಬಾರಿ ಶಾಸಕ, ಸಂಸದರು ಮೆರವಣಿಗೆ ಆರಂಭಗೊಂಡ ನಂತರ ಜನರ ನಡುವೆ ನಡೆದು ಬರುವ ವೇಳೆ ಆಯಾ ನಾಯಕರ ಅಬಿಮಾನಿಗಳು ಅವರನ್ನು ಹೊತ್ತು ಮೆರವಣಿಗೆ ಮಾಡುತ್ತಿದ್ದರು. ಆದರೆ ಈ ಬಾರಿ ನಾಯಕರೆಲ್ಲರನ್ನೂ ತೆರೆದ ವಾಹನದಲ್ಲಿ ಏರಲು ಹೇಳಿ ಮೆರವಣಿಗೆಯಲಿ ಸಾಗಿ ಬರಲು ಪೊಲೀಸರು ಸೂಚಿಸಿದರು. ಅದರಂತೆ ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತಿತರರು ವಾಹನದ ಮೂಲಕವೇ ಮೆರವಣಿಗೆಯಲ್ಲಿ ಸಾಗಿ ಬಂದರು. ಬೆಳಗ್ಗೆೆ ಮೆರವಣಿಗೆಗೆ ಚಾಲನೆ ನೀಡುವ ವೇಳೆ ಗೈರಾಗಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಧ್ಯಾಹ್ನದ ವೇಳೆಗೆ ಸಂವಿದಾನ ವೃತ್ತದಲ್ಲಿ ಮೆರವಣಿಗೆಯನ್ನು ಸೇರಿಕೊಂಡರು.

ನಿರೀಕ್ಷೆಗೂ ಮೀರಿದ ಭಕ್ತಸಾಗರ:

ಮಧ್ಯಾಹ್ನ 2 ಗಂಟೆಯಾದರೂ ಮೆರವಣಿಗೆಗೆ ಸೇರಿಕೊಳ್ಳುವ ಉದ್ದೇಶದಿಂದ ಗ್ರಾಮಾಂತರ ಭಾಗಗಳಿಂದ ಯುವಕರ ಪಡೆ ದಂಡುದಂಡಾಗಿ ಬರುತ್ತಿದ್ದುದು ಕಂಡು ಬರುತ್ತಿತ್ತು ಗಡಿಭಾಗಗಳಲ್ಲಿ ಪೊಲೀಸರು ಯುವಕರನ್ನು ತಡೆದು ವಿಚಾರಿಸುತ್ತಿದ್ದುದು ಕಂಡುಬಂತು. 10 ಸಾವಿರ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಳ್ಳಬಹುದೆಂಬ ನಿರೀಕ್ಷೆ ಆಯೋಜಕರು ಮತ್ತು ಪೊಲೀಸರು ಹೊಂದಿದ್ದರು. ಆದರೆ ಎಲ್ಲರ ನಿರೀಕ್ಷೆ ಮೀರಿ 25 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ಮೆರವಣಿಗೆಯನ್ನು ಅಂದಗಾಣಿಸಿದ್ದು ಎಲ್ಲರ ಮೆಚ್ಚುಗಗೆ ಪಾತ್ರವಾಯಿತು.