ಸಾರಾಂಶ
ಶೇ.80 ಉನ್ನತ ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗಾಗಿ ಆಗ್ರಹಿಸಿ ಕದಂಬ ಸೈನ್ಯ ಕನ್ನಡ ಸಂಘಟನೆಯವರು ಮೈಸೂರಿನ ಡಾ. ರಾಜ್ ಕುಮಾರ್ ಉದ್ಯಾನವನದಲ್ಲಿ ಶನಿವಾರ ಪ್ರತಿಭಟಿಸಿದರು.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯಲ್ಲಿರುವಂತೆ ಖಾಸಗಿ ವಲಯದ ಡಿ ಮತ್ತು ಸಿ ದರ್ಜೆ ನೌಕರರಿಗೆ ಶೇ.100 ಕನ್ನಡಿಗರ ನೇಮಕ ಮಾಡಬೇಕು. ಶೇ.80 ಉನ್ನತ ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.
ಕನ್ನಡ ಸಂಕಷ್ಟದ ಸಮಯವನ್ನು ಎದುರಿಸುತ್ತಿದೆ. ಹಿಂದಿ ಹೇರಿಕೆ, ಕಾವೇರಿ, ಮಹಾದಾಯಿ ಸಂಕಷ್ಟದ ಸಮಯದಲ್ಲಿ ಕನ್ನಡಿಗರು ಒಂದಾಗಿ ಹೋರಾಡುವ ಅಗತ್ಯವಿದೆ. ರಾಜ್ಯದ ಎಲ್ಲಾ ಬ್ಯಾಂಕ್ ಗುಮಾಸ್ತರ ಹುದ್ದೆ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡಬೇಕು. 10ನೇ ತರಗತಿಯಲ್ಲಿ ಕನ್ನಡ ಭಾಷೆ ವ್ಯಾಸಂಗ ಮಾಡದವರು ರಾಜ್ಯ ಭಾಷೆ ಪರೀಕ್ಷೆ ಕಡ್ಡಾಯವಾಗಿ ಪಾಸ್ ಮಾಡಬೇಕು ಎಂದು ಅವರು ಆಗ್ರಹಿಸಿದರು.ಸ್ಥಳೀಯರೆಂದು ಪರಿಗಣಿಸಲು ರಾಜ್ಯದಲ್ಲಿ 15 ವರ್ಷ ವಾಸವಿರಬೇಕು. ಕನ್ನಡ ಭಾಷ ಜ್ಞಾನ ಇರಬೇಕು. ಅಲ್ಲದೆ ಎಸ್‌ಎಸ್‌ಎಲ್ಸಿ ಸರ್ಟಿಫಿಕೇಟ್, ಪಡಿತರ ಚೀಟಿ, ಜನ್ಮ ದಾಖಲೆ, ಆಧಾರ್ ಕಾರ್ಡ್ ದಾಖಲೆ ಹೊಂದಿರಬೇಕೆಂಬ ಕಾನೂನು ಜಾರಿಯಾಗಬೇಕು ಎಂದು ಅವರು ಒತ್ತಾಯಿಸಿದರು.
ಕದಂಬ ಸೈನ್ಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ, ಮುಖಂಡರಾದ ಬಿ. ಶಿವಕುಮಾರ್, ನಾ. ಮಹದೇವಸ್ವಾಮಿ ಮೊದಲಾದವರು ಇದ್ದರು.