ಕಡೇ ಶ್ರಾವಣ ಶನಿವಾರ ನಿಮಿತ್ತ ಮೊಳಗಿದ ಶಂಖನಾದ

| Published : Sep 01 2024, 01:56 AM IST

ಸಾರಾಂಶ

ಕಿಕ್ಕೇರಿ ಪಟ್ಟಣದ ಕೋಟೆ ಆಂಜನೇಯ, ನರಸಿಂಹಸ್ವಾಮಿ ದೇಗುಲ, ಸಿದ್ದಾರೂಢಸ್ವಾಮಿ ಮಠ, ಮಾದಾಪುರ, ತೆಂಗಿನಘಟ್ಟ, ಮಂದಗೆರೆ, ಗದ್ದೆಹೊಸೂರು, ಕಾಳೇನಹಳ್ಳಿ, ಆನೆಗೊಳ ಆಂಜನೇಯದೇಗುಲ, ಗದ್ದೆಹೊಸೂರು ಅಭಯವೆಂಕಟೇಶ್ವರ, ಗೂಡೆಹೊಸಹಳ್ಳಿ ಶ್ರೀನಿವಾಸ ಸೇರಿದಂತೆ ವಿವಿಧೆಡೆ ವಿಜೃಂಭಣೆಯಿಂದ ಪೂಜೆಗಳು ಜರುಗಿದವು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹೋಬಳಿಯಾದ್ಯಂತ ಶ್ರೀಮದ್ ರಮಾರಮಣಗೋವಿಂದ ನಾಮಸ್ಮರಣೆ ಆಸ್ತಿಕರಲ್ಲಿ ಮೊಳಗಿ ಶ್ರಾವಣ ಮಾಸದ ಕೊನೇ ಶನಿವಾರದ ಪೂಜೆ, ಆಧ್ಯಾತ್ಮಿಕ ಭಾವನೆ ಮೂಡಿಸಿತು.

ದಾಸಪ್ಪಧಾರಿಗಳು ಕೈಯಲ್ಲಿ ಶಂಕು, ಬುವನಾಸಿ ಹಿಡಿದು ಮನೆಮನೆಗೆ ತೆರಳಿ ದೇವರಿಗೆ ಪ್ರಿಯವಾದ ಉಪದಾನ ಮಾಡಿದರು. ಶಂಖು, ಕಹಳೆ ಊದಿ ಗ್ರಾಮ, ಮನೆಗಳಲ್ಲಿ ಶಾಂತಿ ನೆಮ್ಮದಿ ಲಭಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಮಕ್ಕಳಿಗೆ ಬಲು ಸಂತಸ ನೀಡುವ ಮಾಸವಾದ ಶ್ರಾವಣ ಮಾಸದ ಶನಿವಾರ ಮಕ್ಕಳು ಕೈಯಲ್ಲಿ ಚೊಂಬು, ಲೋಟ ಹಿಡಿದು ಉಪಧನ(ಭಿಕ್ಷಾಟನೆ) ಮಾಡಿದರು.

ಅಂಗಡಿ, ಬೇಕರಿ, ಮನೆಗಳಲ್ಲಿ ನೀಡಿದಚಾಕೊಲೇಟ್, ಕೇಕ್, ಜಿಲೇಬಿ, ಪೇಡ, ಬಿಸ್ಕತ್, ಬಾಳೆಹಣ್ಣು ತಿಂದು ಖುಷಿಪಟ್ಟರು.ಮನೆಗಳಲ್ಲಿ ಅಕ್ಕಿ, ರಾಗಿ ಹಿಟ್ಟನ್ನು ಮಹಿಳೆಯರು ಚೊಂಬು, ಲೋಟಕ್ಕೆ ಹಾಕಿ, ಮಕ್ಕಳ ಮುಖಕ್ಕೆ ಹಿಟ್ಟು ಬಳಿದು ಖುಷಿಪಟ್ಟರು.

ವಿಷ್ಣು ದೇಗುಲಗಳಲ್ಲಿ ಶಂಖನಾದ, ಜಾಗಟೆಗಳಿಂದ ಪೂಜಾರಾಧನೆ ನಡೆಯಿತು. ಪಟ್ಟಣದ ಕೋಟೆ ಆಂಜನೇಯ, ನರಸಿಂಹಸ್ವಾಮಿ ದೇಗುಲ, ಸಿದ್ದಾರೂಢಸ್ವಾಮಿ ಮಠ, ಮಾದಾಪುರ, ತೆಂಗಿನಘಟ್ಟ, ಮಂದಗೆರೆ, ಗದ್ದೆಹೊಸೂರು, ಕಾಳೇನಹಳ್ಳಿ, ಆನೆಗೊಳ ಆಂಜನೇಯದೇಗುಲ, ಗದ್ದೆಹೊಸೂರು ಅಭಯವೆಂಕಟೇಶ್ವರ, ಗೂಡೆಹೊಸಹಳ್ಳಿ ಶ್ರೀನಿವಾಸ, ಬೋಳಮಾರನಹಳ್ಳಿ, ಚಿಕ್ಕಳಲೆ ಲಕ್ಷ್ಮೀನರಸಿಂಹಸ್ವಾಮಿ, ಕೃಷ್ಣಾಪುರ ಚಲುವನಾರಾಯಣಸ್ವಾಮಿ ದೇಗುಲ, ಗೊಲ್ಲರಕೊಪ್ಪಲು ಅಂಗರತಿಮ್ಮಪ್ಪ ಸೇರಿದಂತೆ ವಿವಿಧೆಡೆ ವಿಜೃಂಭಣೆಯಿಂದ ಪೂಜೆಗಳು ಜರುಗಿದವು.

ವಿಷ್ಣು ದೇಗುಲಗಳಲ್ಲಿ ದೇವರಿಗೆ ವಿಶೇಷವಾಗಿ ಪುಷ್ಪ, ವಸ್ತ್ರಾಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿಯೊಂದಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.