ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸವಿನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಕನ್ನಡ ಭವನ ನಿರ್ಮಾಣ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಕ್ರೀಡಾ ಸಮುಚ್ಛಯದಲ್ಲಿ ಕನ್ನಡ ಭವನ ನಿರ್ಮಿಸುವುದರಿಂದ ಕ್ರೀಡಾ ಚಟುವಟಿಕೆಗಳಿಗೆ ತೊಂದರೆ ಉಂಟಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸವಿನೆನಪಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಕನ್ನಡ ಭವನ ನಿರ್ಮಾಣ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಕ್ರೀಡಾ ಸಮುಚ್ಛಯದಲ್ಲಿ ಕನ್ನಡ ಭವನ ನಿರ್ಮಿಸುವುದರಿಂದ ಕ್ರೀಡಾ ಚಟುವಟಿಕೆಗಳಿಗೆ ತೊಂದರೆ ಉಂಟಾಗಲಿದೆ ಎಂದು ಕ್ರೀಡಾಪಟುಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ವಾಲಿಬಾಲ್ ಅಸೋಸಿಯೇಷನ್‌ನವರ ವಿರೋಧದ ನಡುವೆಯೂ ಕನ್ನಡ ಭವನ ನಿರ್ಮಾಣಕ್ಕೆ ಮಂಡ್ಯದ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಜಿಲ್ಲಾಡಳಿತ ಸ್ಥಳ ಗುರುತಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು. ಅದರಂತೆ ಕನ್ನಡ ಭವನವನ್ನು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ಜಿಲ್ಲಾಡಳಿತ ಮುಂದಾಗಿತ್ತು.

ಕಾಮಗಾರಿಯ ಭಾಗವಾಗಿ ವಾಲಿಬಾಲ್ ಅಂಗಳದಲ್ಲಿದ್ದ ಬೃಹತ್ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಹಾಗೂ ಗುತ್ತಿಗೆದಾರರು ಮುಂದಾಗಿದ್ದರು. ಈ ಸಮಯದಲ್ಲಿ ಮರಗಳನ್ನು ಕಡಿಯುವ ಕಾರ್ಯಕ್ಕೆ ವಾಲಿಬಾಲ್ ಕ್ರೀಡಾಪಟುಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದು ಕ್ರೀಡೆಗೆ ಮೀಸಲಿರುವ ಜಾಗ. ಕ್ರೀಡಾ ಚಟುವಟಿಕೆಗೆ ವಿಶಾಲವಾದ ಜಾಗವಿದ್ದರೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಅನುಕೂಲವಾಗಲಿದೆ. ಕಿಷ್ಕಿಂಧೆ ಜಾಗವಾದರೆ ಅಭ್ಯಾಸಕ್ಕೆ ತೊಂದರೆಯಾಗಲಿದೆ. ಕನ್ನಡ ಭವನವನ್ನು ಕ್ರೀಡಾ ಸಮುಚ್ಛಯದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಪಡಿಸಿದರು.

ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಕನ್ನಡ ಭವನ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಕ್ರೀಡಾ ಸಮುಚ್ಛಯದೊಳಗೆ ಬೇಡ ಎನ್ನುವುದಷ್ಟೇ ನಮ್ಮ ಒತ್ತಾಯವಾಗಿದೆ. ಕನ್ನಡ ಭವನ, ಕ್ರೀಡಾ ಸಮುಚ್ಚಯ ಎರಡೂ ಅತಿ ಅವಶ್ಯಕವಾಗಿವೆ. ಕ್ರೀಡಾ ಸಮುಚ್ಚಯದಲ್ಲಿ ಕನ್ನಡ ಭವನ ನಿರ್ಮಿಸುವ ಬದಲು ಇಲ್ಲಿನ ಗಾಂಧಿ ನಗರದಲ್ಲಿರುವ ನೀರು ಶುದ್ಧೀಕರಣದ ಪಂಪ್‌ಹೌಸ್ ಈಗ ನಿಷ್ಕ್ರಿಯವಾಗಿದೆ. ಅಲ್ಲಿ ಎಂಟು ಎಕರೆ ಭೂಮಿ ಲಭ್ಯವಿದೆ. ಅದನ್ನು ಬಳಸಿಕೊಂಡು ಮೈಸೂರಿನ ರಂಗಾಯಣ ಮಾದರಿಯಲ್ಲಿ ಕನ್ನಡ ಭವನ ನಿರ್ಮಿಸುವುದು ಒಳ್ಳೆಯದು. ಅಲ್ಲಿ ಸದಾ ಸಾಹಿತ್ಯಿಕ ಚಟುವಟಿಕೆ, ರಂಗ ತರಬೇತಿ, ನಾಟಕ ಎಲ್ಲ ಚಟುವಟಿಕೆಗಳು ಒಂದೇ ಸೂರಿನಡಿ ನಡೆಸಲು ಸಾಧ್ಯವಾಗಲಿದೆ.

ಆ ಜಾಗವೂ ಸೂಕ್ತವಲ್ಲದಿದ್ದರೆ ಹಳೇ ತಾಲೂಕು ಕಚೇರಿ ಆವರಣವನ್ನು ಬಳಸಿಕೊಳ್ಳಬಹುದು. ಶಂಕುಸ್ಥಾಪನೆ ದಿನವೇ ವಾಲಿಬಾಲ್ ಅಸೋಸಿಯೇಷನ್‌ನವರು ಈ ಜಾಗದಲ್ಲಿ ಕನ್ನಡ ಭವನ ನಿರ್ಮಿಸುವುದು ಬೇಡ ಎಂದಾಗ, ಸಚಿವ ಎನ್.ಚಲುವರಾಯಸ್ವಾಮಿ ಅವರು ಮುಂದಿನ ದಿನಗಳಲ್ಲಿ ಸಭೆ ಕರೆದು ನಿಮ್ಮೊಂದಿಗೂ ಚರ್ಚಿಸುವುದಾಗಿ ಭರವಸೆ ನೀಡಿದ್ದರು.

ಆ ನಂತರ ಯಾರೊಬ್ಬರೊಂದಿಗೂ ಚರ್ಚೆಯನ್ನು ನಡೆಸಲೇ ಇಲ್ಲ. ಉದ್ದೇಶಿತ ಜಾಗದಲ್ಲಿ ಕನ್ನಡ ಭವನ ನಿರ್ಮಾಣ ಮಾಡಿದರೆ ಕ್ರೀಡಾ ಚಟುವಟಿಕೆ ಹಾಗೂ ಕ್ರೀಡಾಪಟುಗಳಿಗೆ ತೀವ್ರ ತೊಂದರೆ ಉಂಟಾಗಲಿದೆ. ಇದಕ್ಕಾಗಿ ಜಿಲ್ಲಾಡಳಿತ ಕ್ರೀಡಾಪಟುಗಳು ಹಾಗೂ ಜಿಲ್ಲೆಯ ಸಂಘಟನೆಗಳ ಸಭೆ ಆಯೋಜಿಸಿ ಒಮ್ಮತದ ತೀರ್ಮಾನ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಕೊನೆಗೆ ಅಧಿಕಾರಿಗಳು ಮರಗಳ ಕಡಿತವನ್ನು ಅರ್ಧಕ್ಕೆ ನಿಲ್ಲಿಸಿ ತೆರಳಿದರು.