ವಿವಾಹವೆಂದರೆ ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಬಾಂಧವ್ಯವಲ್ಲ, ಅದು ಎರಡು ಕುಟುಂಬಗಳನ್ನು ಬೆಸೆಯುವಂತಹ ಪವಿತ್ರ ಸಂಬಂಧವಾಗಿದೆ. ದಾಂಪತ್ಯ ಜೀವನದಲ್ಲಿ ಪ್ರೀತಿ, ವಿಶ್ವಾಸ, ಪರಸ್ಪರ ಗೌರವ ಹಾಗೂ ಹೊಂದಾಣಿಕೆಗೆ ಆದ್ಯತೆ ನೀಡಬೇಕು. ಆಗ ಸುಖಮಯ ಸಂಸಾರ ಸಾಧ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.
- ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ನಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ವಿವಾಹವೆಂದರೆ ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಬಾಂಧವ್ಯವಲ್ಲ, ಅದು ಎರಡು ಕುಟುಂಬಗಳನ್ನು ಬೆಸೆಯುವಂತಹ ಪವಿತ್ರ ಸಂಬಂಧವಾಗಿದೆ. ದಾಂಪತ್ಯ ಜೀವನದಲ್ಲಿ ಪ್ರೀತಿ, ವಿಶ್ವಾಸ, ಪರಸ್ಪರ ಗೌರವ ಹಾಗೂ ಹೊಂದಾಣಿಕೆಗೆ ಆದ್ಯತೆ ನೀಡಬೇಕು. ಆಗ ಸುಖಮಯ ಸಂಸಾರ ಸಾಧ್ಯ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.ನಗರದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್ನಿಂದ ಗುರುವಾರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನವದಂಪತಿಗಳಿಗೆ ಶುಭ ಹಾರೈಸಿ ಅವರು ಮಾತನಾಡಿದರು. ಶಕ್ತಿದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಕೃಪಾಶೀರ್ವಾದ ಸದಾ ಎಲ್ಲ ಭಕ್ತಾದಿಗಳ ಮೇಲಿರಲಿ ಎಂದರು.
ದೇವಿ ಸನ್ನಿಧಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನವಜೋಡಿಗಳು ಪರಸ್ಪರರ ಭಾವನೆಗಳು, ಆಸೆ-ಆಕಾಂಕ್ಷೆಗಳನ್ನು ಗೌರವಿಸುತ್ತ, ಕುಟುಂಬದ ಜವಾಬ್ದಾರಿಗಳನ್ನು ಸಮಾನವಾಗಿ ನಿಭಾಯಿಸಬೇಕು. ಪರಸ್ಪರ ತಿಳಿವಳಿಕೆ ಹಾಗೂ ಹೊಂದಾಣಿಕೆಯಿಂದ ಜೀವನ ನಡೆಸಿದಾಗ ಕುಟುಂಬದಲ್ಲಿ ನೆಮ್ಮದಿ, ಸಂತೋಷ ನೆಲೆಸುತ್ತದೆ ಎಂದು ಹೇಳಿದರು.ಹಿರಿಯರಾದ ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ, ಶ್ರೀಮತಿ ಪಾರ್ವತಮ್ಮ ಶಿವಶಂಕರಪ್ಪ ಅವರ ಸ್ಮರಣಾರ್ಥ 35 ವರ್ಷದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವ ಜೊತೆಗೆ ಸಾಮಾಜಿಕ ಸಾಮರಸ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ತಿಳಿಸಿದರು.
ಕಳೆದ ಮೂರೂವರೆ ದಶಕದಿಂದಲೂ ದಾನಿಗಳ ಸಹಕಾರದೊಂದಿಗೆ ಅನ್ನ ದಾಸೋಹ ಸೇರಿದಂತೆ ವಿವಿಧ ಸೇವಾ ಕಾರ್ಯಗಳು ಇಲ್ಲಿ ನಡೆಯುತ್ತಿವೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಈ ಸೇವಾ ಕಾರ್ಯಗಳ ಜವಾಬ್ದಾರಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಮಾಜಮುಖಿ ಕಾರ್ಯಗಳಿಗೆ ದಾನಿಗಳ ಸಹಕಾರವೇ ಅತ್ಯಂತ ಪ್ರಮುಖ ಶಕ್ತಿಯಾಗಿದೆ ಎಂದು ಸ್ಮರಿಸಿದರು.ಸಾಮೂಹಿಕ ವಿವಾಹ ಸಂಘಟಿಸುವುದು ನೋಡಿದಷ್ಟು ಸುಲಭವಲ್ಲ. ಇದರ ಯಶಸ್ಸಿಗೆ ತನು, ಮನ, ಧನದಿಂದ ಸಹಕರಿಸಿದ ದಾನಿಗಳು, ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳ ಸೇವೆ ಸ್ಮರಣೀಯವಾದುದು. ಇವರೆಲ್ಲರ ಸಹಕಾರದಿಂದ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಶಾಮನೂರು ಕುಟುಂಬ ಹಾಗೂ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಂಸದೆ ಹೇಳಿದರು.
- - -ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, 35 ವರ್ಷಗಳಿಂದ ಅಮ್ಮನ ಸನ್ನಿಧಿಯಲ್ಲಿ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ನಿಂದ ಸಾಮೂಹಿಕ ವಿವಾಹ ನಡೆಯುತ್ತಿದೆ. ಈವರೆಗೆ ಸಾವಿರಾರು ಕುಟುಂಬಗಳ ಆರ್ಥಿಕ ಹೊರೆ ಇಳಿಸಿ, ಬದುಕು, ಜೀವನ ಕಟ್ಟಿಕೊಡುವಂತಹ ಕೆಲಸವನ್ನು ಟ್ರಸ್ಟ್ ಮಾಡುತ್ತಿದೆ. ದುಗ್ಗಮ್ಮ ಸನ್ನಿಧಿಯಲ್ಲಿ ಮದುವೆಯಾದ ಜೋಡಿಗಳು ತಮ್ಮ ಮಕ್ಕಳು ಪರಿವಾರದೊಂದಿಗೆ ತಮ್ಮ ಮದುವೆಯ ದಿನವೆಂದು ಗುಡಿಗೆ ಆಗಮಿಸಿ ದೇವಿ ದರ್ಶನ ಮಾಡುತ್ತಿದ್ದಾರೆ. ದೇವಸ್ಥಾನದ ಹಿರಿಯ ಟ್ರಸ್ಟಿ, ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಕುಟುಂಬದವರು, ಎಂಜಿಎಸ್ ಜ್ಯೂಯಲರ್ಸ್ ಮಾಲೀಕರು, ದಾನಿಗಳ ಸಹಕಾರದಿಂದ ಸಾಮೂಹಿಕ ವಿವಾಹ ಸೇವೆ ಮುಂದುವರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರವಚನಕಾರ ಡಾ.ಎನ್.ಬಿ.ನಾಗರಳ್ಳಿ, ದೇವಸ್ಥಾನದ ಕಮಿಟಿ ಪದಾಧಿಕಾರಿಗಳಾದ ಟ್ರಸ್ಟ್ ಧರ್ಮದರ್ಶಿ, ಮಾಜಿ ಮೇಯರ್ ಎಚ್.ಬಿ.ಗೋಣೆಪ್ಪ, ಉಮೇಶ ರಾವ್ ಸಾಳಂಕಿ, ಬಡಗಿ ರಾಮಕೃಷ್ಣ, ಗೌಡರ ಸುರೇಶ, ಹನುಮಂತ ರಾವ್ ಜಾಧವ್, ಹನುಮಂತ ರಾವ್ ಸಾಳಂಕಿ, ಕರಿಗಾರ ಬಸಪ್ಪ, ಬಿ.ಎಚ್.ವೀರಭದ್ರಪ್ಪ, ಕವಿರಾಜ, ಕರಿಬಸಪ್ಪ, ಕುಮಾರ, ದೇವರಮನಿ ಚೌಡಪ್ಪ, ಆಲೂರು ಪ್ರಕಾಶ, ಶ್ರೀನಿವಾಸ, ಗೌಡರ ಬಸವರಾಜಪ್ಪ, ಆನಂದ ಇಟ್ಟಿಗುಡಿ, ಬಸವಕಲಾ ಲೋಕದ ಅರುಣಕುಮಾರ, ವಾಗೀಶ ಇತರೆ ಕಲಾವಿದರು, ಬಾಬುದಾರರು, ಪದಾಧಿಕಾರಿಗಳು, ಸದಸ್ಯರು, ಭಕ್ತರು ಭಾಗವಹಿಸಿದ್ದರು.ಅನಂತರ ದುಗ್ಗಮ್ಮನ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಕ್ಕಳು, ಜೋಗಮ್ಮನವರು, ತಾಯಂದಿರು, ಟ್ರಸ್ಟ್ ಸದಸ್ಯರು ಭಾಗವಹಿಸಿದ್ದರು. ಮಹಾಪ್ರಸಾದ ನೆರವೇರಿತು.
- - -(ಕೋಟ್)
ನಾಡಹಬ್ಬ ದಸರಾ ಅಂಗವಾಗಿ 9 ದಿನಗಳಿಂದ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಶ್ರದ್ಧಾಭಕ್ತಿಯಿಂದ ಆಚರಿಸಲಾಗಿದೆ. ನವದುರ್ಗೆಯ ವಿವಿಧ ಸ್ವರೂಪಗಳಲ್ಲಿ ದೇವಿಯನ್ನು ಆರಾಧಿಸುವ ಮೂಲಕ ಭಕ್ತರು ಧಾರ್ಮಿಕ ಪರಂಪರೆಯನ್ನು ಶ್ರದ್ಧಾಭಕ್ತಿಯಿಂದ ಮುಂದುವರಿಸಿದ್ದಾರೆ. ದೇವಿಯ ವಿಶೇಷ ಅಲಂಕಾರ, ಪೂಜಾ ವ್ಯವಸ್ಥೆ ಹಾಗೂ ಭಕ್ತರಿಗೆ ಕಲ್ಪಿಸಿದ ಸೌಲಭ್ಯಗಳು ಮೆಚ್ಚುಗೆಗೆ ಪಾತ್ರವಾಗಿವೆ.- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ.
- - --22ಕೆಡಿವಿಜಿ1, 2:
ದಾವಣಗೆರೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದಲ್ಲಿ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಇತರ ಗಣ್ಯರು ನವದಂಪತಿಗೆ ಆಶೀರ್ವದಿಸಿ, ಶುಭ ಹಾರೈಸಿದರು.