ಮಾಟಗಾತಿಯ ಮಾತು ನಂಬಿ, ಪತ್ನಿಯ ತಲೆ ಕೂದಲಿಗೆ ಪತಿಯೇ ಕತ್ತರಿ ಹಾಕಿದ ಅಮಾನವೀಯ ಘಟನೆ ತಾಲೂಕಿನ ಹೊನ್ನುಟಗಿ ಗ್ರಾಮದಲ್ಲಿ ನ.25ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪತ್ನಿಗೆ ಗಾಳಿಯಾಗಿದೆ (ಭೂತ ಮೆಟ್ಟಿಕೊಂಡಿದೆ) ಎಂಬ ಮಾಟಗಾತಿಯ ಮಾತು ನಂಬಿ, ಪತ್ನಿಯ ತಲೆ ಕೂದಲಿಗೆ ಪತಿಯೇ ಕತ್ತರಿ ಹಾಕಿದ ಅಮಾನವೀಯ ಘಟನೆ ತಾಲೂಕಿನ ಹೊನ್ನುಟಗಿ ಗ್ರಾಮದಲ್ಲಿ ನ.25ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೂವರು ಹೆಣ್ಣುಮಕ್ಕಳನ್ನು ಹೆತ್ತಳೆಂದು ಹಿಂಸೆ ನೀಡಿದ ಗಂಡ ಹಾಗೂ ಆತನ ಕುಟುಂಬಸ್ಥರು ಗೃಹಿಣಿ ಮೇಲೆ ಪೈಶಾಚಿಕ ಕೃತ್ಯ ನಡೆಸಿದ್ದಾರೆ.

ಮಾಟಗಾತಿಯ ಮಾತಿನಂತೆ ಮಹಿಳೆಯ ತಲೆಯ ಮಧ್ಯಭಾಗದಲ್ಲಿನ ಕೂದಲು ಕತ್ತರಿಸಿ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ. ಗ್ರಾಮದ ಮಹಿಳೆ ಮೇಲೆ ಆಕೆಯ ಪತಿ ದುಂಡೇಶ ದಳವಾಯಿ ಹಾಗೂ ಆಕೆಯ ಅತ್ತೆ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ.

ಘಟನೆ ಹಿನ್ನೆಲೆ ಏನು?:

ಕಳೆದ 8 ವರ್ಷಗಳ ಹಿಂದೆ ಹೊನ್ನುಟಗಿ ಗ್ರಾಮದ ದುಂಡೇಶ ದಳವಾಯಿ ಜೊತೆ ಮದುವೆಯಾಗಿತ್ತು. ದಂಪತಿಗೆ ಈಗಾಗಲೇ ಮೂವರು ಹೆಣ್ಣು ಮಕ್ಕಳಿದ್ದಾರೆ. ಹೀಗಾಗಿ ನಾಲ್ಕನೇ ಮಗು ಗಂಡು ಬೇಕು ಎಂದು ಕೊಲ್ಹಾರ ತಾಲೂಕಿನ ಮುಳವಾಡ ಗ್ರಾಮದ ಮಾಟಗಾತಿ ಮಂಗಳಾ ಕೋಲಕಾರ ಬಳಿಗೆ ಹೋಗಿ ಕೇಳಿದ್ದಾರೆ. ನಿನ್ನ ಪತ್ನಿ ಮೈಯಲ್ಲಿ ದೆವ್ವ ಇದೆ. ಅದನ್ನು ಬಿಡಿಸಿ ಆಗ ಗಂಡುಮಗು ಆಗುತ್ತದೆ ಎಂದು ಆಕೆ ಹೇಳಿದ್ದಾಳೆ. ಅದಕ್ಕಾಗಿ ನಿನ್ನ ಹೆಂಡತಿಯ ತಲೆಯಲ್ಲಿ ರಕ್ತ ಬರುವಂತೆ ತಲೆಯ ಕೂದಲನ್ನು ಕತ್ತರಿಸಿಕೊಂಡುಬಂದು ಅದನ್ನು ಸ್ಮಶಾನದಲ್ಲಿ ಸುಡಲು ಸೂಚಿಸಿದ್ದಾಳೆ. ಮಾಟಗಾತಿಯ ಮಾತಿನಂತೆ ಪತ್ನಿಯ ತಲೆ ಕೂದಲನ್ನು ಕತ್ತರಿಸಿ ಗಂಡ ಹಾಗೂ ಆತನ‌ ಕುಟುಂಬಸ್ಥರು ಗ್ರಾಮದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ಗೃಹಿಣಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತವರು ಮನೆಗೆ ಹೋಗಿದ್ದಾಳೆ.

ಘಟನೆ ಕುರಿತು ಮಹಿಳೆಯ ತವರು ಮನೆಯವರು ಡಿಸೆಂಬರ್ 1 ರಂದು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಂದೆ ಇಲ್ಲದೆ ದೊಡ್ಡಪ್ಪನ ಮನೆಯಲ್ಲೇ ಬೆಳೆದ ಮಹಿಳೆ ಇದೀಗ ತನ್ನ ಮಕ್ಕಳ ಜೊತೆಗೆ ತವರು ಮನೆ ಸೇರಿದ್ದಾಳೆ. ದೂರು ದಾಖಲಾದ ಬಳಿಕ ಆಕೆಯ ಪತಿ ಹಾಗೂ ಕುಟುಂಬಸ್ಥರನ್ನು ಪೊಲೀಸರು ವಿಚಾರಿಸುತ್ತಿದ್ದಾರೆ. ನನ್ನ ಮಗಳಿಗೆ ಯಾವುದೇ ದೆವ್ವ ಇಲ್ಲ. ಮಾಟಗಾತಿ ಮಾತು ಕೇಳಿ ಚಿತ್ರಹಿಂಸೆ ನೀಡಿದ್ದಾರೆ. ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳೆ ತಂದೆ ಆಗ್ರಹಿಸಿದ್ದಾರೆ. ಆಧುನಿಕ ಸಮಾಜದಲ್ಲೂ ಈ ರೀತಿ ಅನಾಗರಿಕ ಕೃತ್ಯ ನಡೆದಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಾಟಗಾತಿ ಹಾಗೂ ಪತಿಯ ಕುಟುಂಬಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ನನಗೆ ಏನೂ ಸಮಸ್ಯೆ ಇಲ್ಲದಿದ್ದರೂ ನನಗೆ ಗಾಳಿಯಾಗಿದೆ ಎಂದು ಚಿತ್ರಹಿಂಸೆ ಕೊಟ್ಟಿದ್ದಾರೆ. ಪತಿ ಪಾನಮತ್ತರಾಗಿ ಹಲ್ಲೆ ಮಾಡಿದರೆ, ಅತ್ತೆ-ಮಾವ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ನಾನು ಒಪ್ಪದಿದ್ದರೂ ಬಲವಂತವಾಗಿ ಹೊಡೆದು ನನ್ನ ಕೈಗಳನ್ನು ಹಿಡಿದು ಬ್ಲೇಡ್‌ನಿಂದ ಕೂದಲು ಕತ್ತರಿಸಿಕೊಂಡಿದ್ದಾರೆ. ಇದರಿಂದಾಗಿ ನನ್ನ ಮನಸಿಗೆ ನೋವಾಗಿದೆ.

ಅನ್ಯಾಯಕ್ಕೊಳಾದ ನೊಂದ ಮಹಿಳೆ

ಘಟನೆ ಕುರಿತು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದಲ್ಲಿರುವ ಮಾಟಗಾತಿ ಹಾಗೂ ಮಹಿಳೆಯ ಗಂಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಅವರಿಂದ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ. ಯಾರೂ ಇಂತಹ ಮೂಢನಂಬಿಕೆಗಳನ್ನು ನಂಬಬಾರದು. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ 7 ವರ್ಷಗಳಿಗಿಂತ ಕಡಿಮೆ ಅವಧಿಯ ಅಪರಾಧಗಳಿಗೆ ಬಂಧಿಸುವ ಅಗತ್ಯವಿಲ್ಲ. ಪೊಲೀಸರು ನೋಟಿಸ್ ನೀಡಿ ಹೇಳಿಕೆಗಳನ್ನು ತೆಗೆದುಕೊಳ್ಳಬಹುದಾಗಿದೆ. ಹೀಗಾಗಿ ನಮ್ಮ ಪೊಲೀಸರು ಈಗಾಗಲೇ ನೋಟಿಸ್ ನೀಡಿದ್ದು ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.

ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ