ಸಾರಾಂಶ
ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡಿದ ಪತ್ನಿ ಬಳಿಕ ನಾಪತ್ತೆ ನಾಟಕ ಆಡಿದ ಘಟನೆ ಚಾಮರಾಜನಗರ ತಾಲೂಕಿನ ಜನ್ನೂರು ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡಿದ ಪತ್ನಿ ಬಳಿಕ ನಾಪತ್ತೆ ನಾಟಕ ಆಡಿದ ಘಟನೆ ಚಾಮರಾಜನಗರ ತಾಲೂಕಿನ ಜನ್ನೂರು ಗ್ರಾಮದಲ್ಲಿ ನಡೆದಿದೆ.ಜನ್ನೂರು ಗ್ರಾಮದ ರಮೇಶ್ (45) ಮೃತ ದುರ್ದೈವಿಯಾಗಿದ್ದು ಪತ್ನಿ ಗೀತಾ (38) ಹಾಗೂ ಈಕೆಯ ಪ್ರಿಯಕರ ಗುರುಪಾದಸ್ವಾಮಿ (40) ಬಂಧಿತ ಆರೋಪಿಗಳು. ಈ ದಂಪತಿಗೆ ಎರಡು ಮಕ್ಕಳಿದ್ದು ಕೊಲೆಗೆ ವಿವಾಹೇತರ ಸಂಬಂಧ ಕಾರಣವಾಗಿದೆ.ಮಚ್ಚಿನಿಂದ ಕೊಲೆ: ಬೈಕ್‌ನಲ್ಲಿ ಸಾಗಾಟ:
ಪತಿ ರಮೇಶ್‌ನನ್ನು ಮಚ್ಚಿನ ಹಿಂಭಾಗದಿಂದ ಬಲವಾಗಿ ತಲೆಗೆ ಹೊಡೆದು ಬಳಿಕ ದಿಂಬಿನಲ್ಲಿ ಉಸಿರುಗಟ್ಟಿಸಿ ಇಬ್ಬರು ಸಾಯಿಸಿದ್ದಾರೆ. ಶವವನ್ನು ಬೆಡ್ ಶೀಟ್ ನಲ್ಲಿ ಸುತ್ತಿ, ಪ್ಲಾಸ್ಟಿಕ್ ಟಾರ್ಪಲ್ ನಿಂದ ತುಂಬಿಕೊಂಡು ಬೈಕ್ ನಲ್ಲಿ ಹೊತ್ತು ಕುಪ್ಪೇಗಾಲ ಸಮೀಪ ಕಬಿನಿ ನಾಲೆಗೆ ಬಿಸಾಡಿದ್ದಾರೆ. ಜ.14 ರಂದೇ ಆರೋಪಿಗಳಿಬ್ಬರು ಕೃತ್ಯ ಎಸಗಿದ್ದು ಜ.21 ರಂದು ಕುದೇರು ಪೊಲೀಸ್ ಠಾಣೆಗೆ ಪತಿ ಮನೆಯಿಂದ ಹೊರಹೋದವರು ಕಾಣೆಯಾಗಿದ್ದಾರೆಂದು ನಾಪತ್ತೆ ಪ್ರಕರಣ ದಾಖಲಿಸಿದ್ದರು.ಗೀತಾ ಮತ್ತು ಪ್ರಿಯಕರ ಗುರುಪಾದಸ್ವಾಮಿಯನ್ನು ಪೊಲೀಸರು ಭಾನುವಾರದಂದು ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ. ಕುದೇರು ಠಾಣೆ ಪೊಲೀಸರು ನಾಪತ್ತೆ ನಾಟಕ ಆಡಿದ್ದ ಪತ್ನಿ ಹಾಗೂ ಪ್ರಿಯಕರನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ಎಸ್ಪಿ ಹೇಳಿದ್ದೇನು?:
ಈ ಕುರಿತು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾತನಾಡಿ, ಜ.14 ರಂದು ರಮೇಶ್ ಕುಡಿದು ಬಂದು ಗೀತಾ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಇದರಿಂದ ಭಯಗೊಂಡ ಗೀತಾ, ಮನೆಯ ಹೊರಗಡೆ ಮಲಗಿದ್ದಳು. ಇದಾದ ನಂತರ, ತಡರಾತ್ರಿ ಪ್ರಿಯಕರ ಗುರುಪಾದಸ್ವಾಮಿ ಜೊತೆ ಸೇರಿಕೊಂಡು ಮಚ್ಚಿನ ಹಿಂಭಾಗದಿಂದ ತಲೆಗೆ ಹೊಡೆದು ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದರು. 25 ಕಿಮೀ ದೂರದ ಕುಪ್ಪೇಗಾಲ ನಾಲೆಗೆ ಶವವನ್ನು ಎಸೆದು ಜ.21 ರಂದು ಕುದೇರು ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರಿಂದ ಪೊಲೀಸರು ತನಿಖೆ ಕೈಗೊಂಡಿದ್ದರು.ಫೆ.2ರಂದು ಮೃತ ರಮೇಶನ ಅಕ್ಕ ಸುವರ್ಣ ಠಾಣೆಗೆ ಬಂದು ಅನೈತಿಕ ಸಂಬಂಧದ ಕಾರಣದಿಂದ ತಮ್ಮನನ್ನು ಪತ್ನಿಯೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ದೂರು ಕೊಟ್ಟಿದ್ದರಿಂದ ಇಬ್ಬರನ್ನು ಕರೆತಂದು ವಿಚಾರಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.