ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಬಾಲಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದಿಲೀಪ್ ಹೆಗ್ಡೆಯನ್ನು ಅಜೆಕಾರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪತ್ನಿ ಪ್ರತಿಮಾಳನ್ನು 14 ದಿನಗಳ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.ಬಾಲಕೃಷ್ಣ ಅವರಿಗೆ ಆಹಾರದಲ್ಲಿ ಬೆರೆಸಿದ್ದ ವಿಷ ಪದಾರ್ಥದ ಜಾಡು ಹಿಡಿದು ಹೊರಟಿರುವ ಪೊಲೀಸರು ಪ್ರತಿಮಾಳಿಗೆ ವಿಷ ಪದಾರ್ಥ ಪೂರೈಕೆ ಮಾಡಿದ್ದ ಪ್ರಿಯಕರ ಕೊಲೆ ಆರೋಪಿ ದಿಲೀಪ್ ಹೆಗ್ಡೆಯನ್ನು ಮಣಿಪಾಲಕ್ಕೆ ಕರೆದೊಯ್ದಿದ್ದಾರೆ.ಮಧ್ಯರಾತ್ರಿಯೇ ಕೊಲೆಗೆ ಸ್ಕೆಚ್:
ಬೆಂಗಳೂರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಂದಿದ್ದ ಬಾಲಕೃಷ್ಣ ಅವರನ್ನು ನೋಡಲು ದೆಪ್ಪುತ್ತೆಯ ಮನೆಗೆ ಆಗಮಿಸಿದ್ದ ಸಂಬಂಧಿಕರನ್ನು ಪ್ರತಿಮಾ ಬೇರೆ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಳು. ಮಕ್ಕಳನ್ನು ಅಜ್ಜಿಮನೆಗೆ ಕಳುಹಿಸಿದ್ದಳು. ಅ.20ರ ರಾತ್ರಿ 2 ಗಂಟೆ ವೇಳೆಗೆ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಮನೆಗೆ ಕರೆಸಿದ್ದಳು. ಆತ ಮನೆಯಿಂದ 100 ಮೀ. ದೂರದಲ್ಲಿ ಬೈಕ್ ನಿಲ್ಲಿಸಿ ಹಿಂಬಾಗಿಲಿನಿಂದ ಮನೆ ಪ್ರವೇಶಿಸಿದ್ದ. ಗಾಢ ನಿದ್ರೆಯಲ್ಲಿದ್ದ ಬಾಲಕೃಷ್ಣ ಅವರನ್ನು ದಿಲೀಪ್ ಹೆಗ್ಡೆ, ಬೆಡ್‌ಶೀಟ್‌ನಲ್ಲಿ ಉಸಿರು ಗಟ್ಟಿಸಿದ್ದು, ಈ ವೇಳೆ ಪತ್ನಿ ಪ್ರತಿಮಾ ಸಹಕರಿಸಿದ್ದಳು ಎಂದು ತಿಳಿದುಬಂದಿದೆ. ಕೊಲೆ ಮಾಡಿದ ನಂತರ ದಿಲೀಪ್ ಹೆಗ್ಡೆ ಮನೆಯಿಂದ ಕಾಲ್ಕಿತ್ತಿದ್ದ.ಮೃತ ಬಾಲಕೃಷ್ಣ ಅವರ ಶವದ ಮೇಲೆ, ತುಟಿಯ ಭಾಗ ಹಾಗೂ ಗಲ್ಲದ ಭಾಗಗಳಲ್ಲಿ ಉಗುರಿನ ಗುರುತುಗಳಿದ್ದು, ಮೂಗಿನ ಭಾಗ ಕೆಂಪಗಾಗಿತ್ತು. ಇದರಿಂದ ಅನುಮಾನಗೊಂಡ ಪ್ರತಿಮಾಳ ಅಣ್ಣ ಸಂದೀಪ್, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಾಲಕೃಷ್ಣ ಶವವನ್ನು ಮಣಿಪಾಲ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಿದ್ದು, ರಿಪೋರ್ಟ್ ಇನ್ನೂ ತಲುಪಿಲ್ಲ. ಅದಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.ಮುಂಬೈಯಲ್ಲೂ ಅಕ್ರಮ ಸಂಬಂಧ:
ಪ್ರತಿಮಾ ಒಂದೂವರೆ ವರ್ಷದ ಹಿಂದೆ ಮುಂಬೈ ಯುವಕನ ಜೊತೆ ಸಲ್ಲಾಪದ ವೇಳೆ ತನ್ನ ಅಣ್ಣನ ಕೈಗೆ ಸಿಕ್ಕಿಬಿದ್ದು, ದೈವದ ಎದುರು ಆಣೆ ಪ್ರಮಾಣ ಮಾಡಿದ್ದಳು. ಆ ಪ್ರೇಮ ಕೊನೆಯಾದ ಬಳಿಕ, ದಿಲೀಪ್ ಹೆಗ್ಡೆ ಪರಿಚಯವಾಗಿ ಆತನ ಸಂಪರ್ಕ ಬೆಳೆಸಿದ್ದಳು ಎಂದು ಆಕೆಯ ಕುಟುಂಬಿಕರೇ ಮಾಹಿತಿ ನೀಡಿದ್ದಾರೆ.ನಾಟಕವಾಡಿದ ಪತ್ನಿ: ಬಾಲಕೃಷ್ಣ ಅನಾರೋಗ್ಯ ಪೀಡಿತನಾಗಿದ್ದ ಸಂದರ್ಭದಲ್ಲಿ ಪತ್ನಿ ಪ್ರತಿಮಾ, ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆ ಖರ್ಚುವೆಚ್ಚಗಳಿಗಾಗಿ ಸಾರ್ವಜನಿಕರಿಂದ ಸಹಾಯ ಕೋರಿದ್ದಳು. ಸ್ಥಳೀಯರಿಂದ ಒಟ್ಟು ನಾಲ್ಕು ಲಕ್ಷಕ್ಕೂ ಹೆಚ್ಚು ಹಣವನ್ನು ಒಟ್ಟು ಗೂಡಿಸಿದ್ದಳು.ಇಬ್ಬರು ಮಕ್ಕಳಿಗೆ ಆಸರೆಯಾದ ಅಣ್ಣ: ಕೊಲೆಯಾದ ಬಾಲಕೃಷ್ಣ ಹಾಗೂ ಕೊಲೆ ಆರೋಪಿ ಪ್ರತಿಮಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಸದ್ಯ ಪ್ರತಿಮಾಳ ಅಣ್ಣ ಆಸರೆಯಾಗಿದ್ದಾರೆ. ಕೊಲೆ ಆರೋಪಿಗಳಿಬ್ಬರಿಗೂ ಜೀವಾವಧಿ ಶಿಕ್ಷೆಯಾಗಬೇಕು, ಬಾಲಕೃಷ್ಣ ಅವರ ಸಾವಿಗೆ ನ್ಯಾಯ ಸಿಗಬೇಕು, ಅಣ್ಣ ತಂಗಿಗಿಂತ ಮೊದಲು ನ್ಯಾಯಕ್ಕೆ ಬೆಲೆನೀಡುವುದು ನನ್ನ ಕರ್ತವ್ಯ. ಇಬ್ಬರು ಮಕ್ಕಳಿಗೆ ನಾನೇ ಆಸರೆಯಾಗುತ್ತೇನೆ ಸಂದೀಪ್ ತಿಳಿಸಿದ್ದಾರೆ.