ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ ಪತಿಯೇ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಪಟ್ಟಣದ ರೇಣುಕಾ ಬಾರ್ ಸಮೀಪದ ಮನೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ
ಪತಿಯೇ ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಪಟ್ಟಣದ ರೇಣುಕಾ ಬಾರ್ ಸಮೀಪದ ಮನೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮದ ಮಹಿಳೆ ಕಾವ್ಯ(28) ಕೊಲೆಯಾದ ಮಹಿಳೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಣಿಪುರದ ನಿವಾಸಿ ಶಿವಾನಂದ್ ಅಲಿಯಾಸ್ ದಿಲೀಪ್ (34) ಕೊಲೆ ಮಾಡಿರುವ ಆರೋಪಿ.
ಕಳೆದ 7 ವರ್ಷಗಳ ಹಿಂದೆ ಇವರ ಮದುವೆಯಾಗಿದ್ದು, ಆರೋಪಿ ಕೈಗಾರಿಕಾ ಪ್ರದೇಶದಲ್ಲಿರುವ ಟಿಡಿಪಿಎಸ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಾವ್ಯ ಬ್ಯೂಟಿಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ 3 ವರ್ಷದ ಹೆಣ್ಣು, 5 ವರ್ಷದ ಗಂಡು ಮಕ್ಕಳಿದ್ದಾರೆ. ಐದು ವರ್ಷಗಳಿಂದ ಪಟ್ಟಣದಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಐದು ವರ್ಷಗಳ ಅನ್ಯೋನ್ಯ ದಾಂಪತ್ಯದಲ್ಲಿ ಇತ್ತೀಚೆಗೆ ಕಲಹವೇರ್ಪಟ್ಟು, ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಶಿವಾನಂದ್ ಅನಾರೋಗ್ಯದ ಕಾರಣ 6 ತಿಂಗಳ ಹಿಂದೆ ಸ್ವಯಂ ನಿವೃತ್ತಿ ಪಡೆದು, ಬೇರೆ ಯಾವುದೇ ಕೆಲಸ ಮಾಡದೆ ಆ ಹಣದಲ್ಲಿ ನಿತ್ಯ ಕುಡಿದು ಜಗಳ ಮಾಡುತ್ತಿದ್ದನೆನ್ನಲಾಗಿದೆ. ಆ.17ರಂದು ಮಧ್ಯಾಹ್ನ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಕೊಲೆ ಅಂತ್ಯ ಕಂಡಿದೆ.ಆ.17ರಂದು ಬೆಳಿಗ್ಗೆ ಕಾವ್ಯಳ ಜೊತೆ ಆಕೆಯ ಅಕ್ಕ ಪೋನಿನಲ್ಲಿ ಮಾತನಾಡಿದ್ದರು. ಮಧ್ಯಾಹ್ನ ಕಾವ್ಯಳಿಗೆ ಹಲವು ಕರೆ ಮಾಡಿದಾಗ ಆಕೆಯ ಮೊಬೈಲ್ ಸ್ವಿಚ್ ಆಫ್ ಬಂದಿದ್ದು, ನಂತರ ಆರೋಪಿಗೆ ಕರೆಮಾಡಿ ವಿಚಾರಿಸಿದಾಗ ನಿಮ್ಮ ತಂಗಿ ನಿಮ್ಮ ಅಮ್ಮನ ಮನೆಗೆ ಹೋಗುತ್ತೇನೆಂದಳು. ನಾನೇ ಬಸ್ ಹತ್ತಿಸಿ ಕಳುಹಿಸಿದೆ ಎಂದಿದ್ದಾನೆ. ತಾಯಿ ಮನೆಗೆ ಬರಲಿಲ್ಲವೆಂದು ಅನುಮಾನಗೊಂಡ ಕಾವ್ಯಳ ಕುಟುಂಬಸ್ಥರು ಆ.19ರಂದು ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆಯ ಬಚ್ಚಲು ಮನೆಯಲ್ಲಿ ಮೃತದೇಹ ಸುಟ್ಟು ಕರಕಲಾಗಿರುವುದು ಬೆಳಕಿಗೆ ಬಂದಿದೆ. ಕಾವ್ಯಳ ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಡಿವೈಎಸ್ ಪಿ ಜಗದೀಶ್.ಕೆ.ಎಸ್, ಇನ್ಸ್‌ಪೆಕ್ಟರ್‌ಗಳಾದ ರಾಜು, ರಂಜನ್ ಕುಮಾರ್, ಪಿಎಸ್ ಐ ವಿಜಯಕುಮಾರಿ ಭೇಟಿ ನೀಡಿ ಪರಿಶೀಲಿಸಿದರು. ಘಟನೆಗೆ ಸಂಬಂಧಿಸಿದಂತೆ ದಾಬಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.