ಸಾರಾಂಶ
ಕನ್ನಡಪ್ರಭ ವಾರ್ತೆ ಬನ್ನೂರುನಾಲೆಯ ತುಂಬ ಜೊಂಡು ಬೆಳೆದು ನೀರು ಮುಂದಕ್ಕೆ ಚಲಿಸದಂತೆ ಆಗಿದ್ದು, ವ್ಯವಸಾಯಕ್ಕೆ ರೈತರು ನೀರಿಲ್ಲದೆ ಶ್ರಮ ಪಡುವಂತೆ ಆಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹೋಬಳಿ ಅಧ್ಯಕ್ಷ ಹುಚ್ಚೇಗೌಡ ಹೇಳಿದರು.ಪಟ್ಟಣದ ಸಮೀಪದ ಗೊರವನಹಳ್ಳಿ ಗ್ರಾಮದಲ್ಲಿ ಹಾದು ಹೋಗಿರುವಂತ ನಾಲೆ ಮತ್ತು ರಸ್ತೆಯ ದುಸ್ಥಿತಿ ಬಗ್ಗೆ ಮಾತನಾಡಿದ ಅವರು, ಈ ಭಾಗದಲ್ಲಿ ಸುಮಾರು 700 ಎಕರೆ ವ್ಯವಸಾಯ ಪ್ರದೇಶವಿದ್ದು, ಇಲ್ಲಿಯ ನಾಲೆ ಮಾತ್ರ ಸಮರ್ಪಕವಾಗಿಲ್ಲದ ಪರಿಣಾಮ ನೀರು ನಾಲೆಯಲ್ಲಿ ಸಾಗದೆ ರೈತರ ಭೂಮಿ ಬಂಜರಾಗುತ್ತಿದೆ ಎಂದು ತಿಳಿಸಿದರು.ಇಲ್ಲಿ ಹೆಸರಿಗೆ ಮಾತ್ರ ನಾಲೆ ಇದ್ದು, ಜೊಂಡು ಬೆಳೆದು ನಾಲೆಯೇ ಕಾಣದಂತ ಪರಿಸ್ಥಿತಿ ಆಗಿದೆ. ಸುಮಾರು 40 ವರ್ಷದಿಂದ ಪರಿಸ್ಥಿತಿ ಹೀಗೆ ಇದ್ದು, ಸಂಭಂದಿಸಿದ ನೀರಾವರಿ ಇಲಾಖೆಗೆ ತಿಳಿಸಿದರು ಇದುವರೆಗು ಯಾವುದೇ ಪರಿಹಾರ ಕಂಡಿಲ್ಲ ಎಂದು ಅವರು ಹೇಳಿದರು.ನಂತರ ಮಾತನಾಡಿದ ಗ್ರಾಮದ ರೈತ ಮುಖಂಡ ಮಹದೇವಶೆಟ್ಟಿ, ಇದು ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮತ್ತು ಸಂಸದ ಸುನಿಲ್ ಬೋಸ್ ವ್ಯಾಪ್ತಿಗೆ ಬರುವಂತ ಕ್ಷೇತ್ರವಾಗಿದ್ದು, ಇದುವರೆಗೂ ಈ ಭಾಗದ ರೈತರ ಸಮಸ್ಯೆ ಮಾತ್ರ ಇವರು ಪರಿಹರಿಸಿಲ್ಲ ಎಂದು ಕಿಡಿಕಾರಿದರು. ಹಲವಾರು ಬಾರಿ ತಿಳಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದರು.ಗೊರವನಹಳ್ಳಿ, ಮಾರಗೌಡನಹಳ್ಳಿ, ಹನುಮನಾಳು ಗ್ರಾಮದ ರೈತರು ಎಲ್ಲರು ಸೇರಿ ನೀರಾವರಿ ಇಲಾಖ ಅಧಿಕಾರಿಗಳನ್ನು ಸಂಪರ್ಕಿಸಿ, ಮುಂದಿನ ದಿನದಲ್ಲಿ ಉಗ್ರ ಹೋರಾಟವನ್ನು ಬನ್ನೂರು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಪ್ರಕಾಶ್, ಮಹದೇವು, ವೆಂಕಟೇಶ್, ಪ್ರಸನ್ನ, ಶಿವು, ದೇವರಾಜು, ರಾಮಕೃಷ್ಣ, ಮಹದೇವಶೆಟ್ಟಿ, ಮಾದಿಗಳ್ಳಿ ಮಹೇಶ್ ಇದ್ದರು.