ಸಾರಾಂಶ
ಅರೆಭಾಷೆ ಗೌಡ ಸಮಾಜದ ವತಿಯಿಂದ ಹುತ್ತರಿ ಹಬ್ಬವನ್ನು ಆಚರಿಸಲಾಯಿತು. ಕದಿರು ತೆಗೆಯುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಸಮೀಪದ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವತಿಯಿಂದ ಶನಿವಾರ ರಾತ್ರಿ ಹುತ್ತರಿ ಹಬ್ಬವನ್ನು ಆಚರಿಸಲಾಯಿತು.ಅರೆಭಾಷೆ ಗೌಡ ಸಮಾಜದ ಬಾಂಧವರು ಆಲೂರುಸಿದ್ದಾಪುರ ಬೈಮನ ಕಾಂತಿ ಅವರಿಗೆ ಸೇರಿದ ಬತ್ತದ ಗದ್ದೆಯಲ್ಲಿ ಹುತ್ತರಿ ಹಬ್ಬದ ಸಂಪ್ರದಾಯದಂತೆ ಪೂಜೆ ಸಲ್ಲಿಸಿದ ಬಳಿಕ ರಾತ್ರಿ 8.45 ಕ್ಕೆ ಕದಿರು ತೆಗೆಯುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ನಂತರ ಅರೆಭಾಷೆ ಗೌಡ ಸಮುದಾಯದ ಬಾಂಧವರು ಗದ್ದೆಯಿಂದ ತಂದ ಬತ್ತದ ಕದಿರನ್ನು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನೆರೆ ಕಟ್ಟಲಾಯಿತು. ತದನಂತರ ಬತ್ತದ ನೆರೆಯನ್ನು ಅಕ್ಕಪಕ್ಕದ ಬಾಂಧವರಿಗೆ ವಿತರಿಸಲಾಯಿತು. ಹುತ್ತರಿ ಹಬ್ಬದ ಕದಿರು ತೆಗೆಯುವ ಮೆರವಣಿಗೆಯಲ್ಲಿ ಸಮುದಾಯದ ಹಿರಿಯರು, ಪುರುಷರು, ಮಹಿಳೆಯರು, ಯುವಕ, ಯುವತಿಯರು ಪಾಲ್ಗೊಂಡಿದ್ದರು.
ಈ ಸಂದರ್ಭ ಅರೆಭಾಷೆ ಗೌಡ ಸಮಾಜದ ಪ್ರಮುಖರಾದ ಪರ್ಲಕೋಟಿ ಸತೀಶ್, ಎಡಕೇರಿ ಜಯರಾಮ, ಕರಕರನ ಪೆಮ್ಮಯ್ಯ, ಹೊಸೂರು ಪ್ರಕಾಶ್, ಬೈಮನ ಮಹೇಶ್, ಕೆಮ್ಮರನ ದೇವಿಕಾಂತ, ಕೈಬಿಲಿ ಬೇಬಿ ಮುಂತಾದವರು ಹಾಜರಿದ್ದರು.---------------------------------------------------
ಕಾಡು ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಹುತ್ತರಿ ಸಂಭ್ರಮಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿಗೆ ಸಮೀಪದ ಕಕ್ಕುಂದ ಕಾಡು ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಹುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಗದ್ದೆಯಿಂದ ಬತ್ತದ ಕದಿರು ತಂದ ಬಳಿಕ ದೇವಾಲಯದ ನಮಸ್ಕಾರ ಮಂಟಪದಲ್ಲಿ ಇರಿಸಿ ಧಾನ್ಯಲಕ್ಷ್ಮಿ ಪೂಜೆಯನ್ನು ಮುಖ್ಯ ಅರ್ಚಕ ಸುಧೀರ ಅವರು ನಡೆಸಿ ತೀರ್ಥ ಪ್ರಸಾದ ಹಾಗೂ ಕದಿರನ್ನು ಭಕ್ತಾದಿಗಳಿಗೆ ವಿತರಿಸಲಾಯಿತು. ಈ ವೇಳೆ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನವರು, ಪರವೂರಿನ ಭಕ್ತರು ಕೂಡಾ ಪಾಲ್ಗೊಂಡಿದ್ದರು.