ಚನ್ನೆರಾಯಪಟ್ಟಣದಲ್ಲಿ ‘ಹುಯ್ಯಪ್ಪ ಮಳೆರಾಯ’ ಪಠ್ಯ ಆಧಾರಿತ ನಾಟಕದ ಸಮಾರೋಪ

| Published : Feb 27 2024, 01:33 AM IST

ಚನ್ನೆರಾಯಪಟ್ಟಣದಲ್ಲಿ ‘ಹುಯ್ಯಪ್ಪ ಮಳೆರಾಯ’ ಪಠ್ಯ ಆಧಾರಿತ ನಾಟಕದ ಸಮಾರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನರಾಯಪಟ್ಟಣದಲ್ಲಿ ಕಲಾ ಅಂತರ್ಗತ ಪ್ರಯೋಗ ಯೋಜನೆಯಡಿ ‘ಹುಯ್ಯಪ್ಪ ಮಳೆರಾಯ’ ಎಂಬ ಪಠ್ಯ ಆಧಾರಿತ ನಾಟಕದ ಸಮಾರೋಪ ಸಮಾರಂಭ ಜರುಗಿತು.

ಸಮಾರಂಭ । ಕಲಾ ಅಂತರ್ಗತ ಪ್ರಯೋಗ ಯೋಜನೆಯಡಿ ನಾಟಕ । ಕಲ್ಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್ ಬೆಂಗಳೂರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಕಲಾ ಅಂತರ್ಗತ ಪ್ರಯೋಗ ಯೋಜನೆಯಡಿ ‘ಹುಯ್ಯಪ್ಪ ಮಳೆರಾಯ’ ಎಂಬ ಪಠ್ಯ ಆಧಾರಿತ ನಾಟಕದ ಸಮಾರೋಪ ಸಮಾರಂಭ ಜರುಗಿತು.

ತಾಲೂಕಿನ ಕಲ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಸ್ತಾವಿಕ ಮಾತನಾಡಿದ ಕಲಾವಿದ ಸಂತೋಷ್ ದಿಂಡಗೂರ್, ಐಎಸ್‌ಎ ಸಂಸ್ಥೆಯ ಯೋಜನೆಗಳ ಬಗ್ಗೆ ಹಾಗೂ ಸರ್ಕಾರಿ ಶಾಲೆಯಲ್ಲಿ ಅದರ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಾ ಅಂತರ್ಗತ ಪ್ರಯೋಗ ಕಳೆದ ಒಂದು ವರ್ಷದಿಂದ ನಡೆಯುತ್ತ ಬಂದಿದ್ದು ಈಗ ಇಂದು ಅದರ ಮುಕ್ತಾಯ ಸಮಾರಂಭ ಮಾಡುತ್ತಿದ್ದೇವೆ. ಅದರ ಭಾಗವಾಗಿ ‘ಹುಯ್ಯಪ್ಪ ಮಳೆ ರಾಯ’ ಎಂಬ ನಾಟಕವನ್ನು ಪಠ್ಯದ ಪಾಠ, ಪದ್ಯಗಳನ್ನು ಇಟ್ಟುಕೊಂಡು ರಚಿಸಿ ನಿರ್ದೇಶನ ಮಾಡಿದ್ದು ಇದರ ಪರಿಕಲ್ಪನೆಯ ನಾಟಕದಲ್ಲಿ ಐದರಿಂದ ಏಳನೇ ತರಗತಿಯ ಮಕ್ಕಳು ಅಭಿನಯಿಸಿದ್ದಾರೆ ಎಂದರು.

ಹಿಂದಿನ ಕಾಲದಲ್ಲಿ ಊರಿಗೆ ಮಳೆ ಬಾರದೆ ಇದ್ದಾಗ ಊರಿನವರೆಲ್ಲ ಸೇರಿ ತಿಂಗಳು ಮಾವನ ಹಬ್ಬವನ್ನು ಮಾಡುತ್ತಿದ್ದರು. ಈ ಆಚರಣೆಯಲ್ಲಿ ಸೋಬಾನೆ, ಕೋಲಾಟ, ಭಜನೆ, ವೀರಗಾಸೆ, ಸೋಮನ ಕುಣಿತ, ಕಥೆ, ಹಾಡು ನಾಟಕಗಳು ಜರುಗುತ್ತಿದ್ದವು. ಇಂತಹ ಆಚರಣೆಯ ಬೆನ್ನುಹತ್ತಿ ಅದನ್ನು ಐಎಸ್‌ಎ ಸಂಸ್ಥೆಯೊಂದಿಗೆ ಈ ಕಾರ್ಯಕ್ರಮವನ್ನು ಮಾಡಲಾಯಿತು ಎಂದರು.

ಇಂತಹ ಆಚರಣೆಯನ್ನು ಪಠ್ಯದ ಜತೆಗೆ ಬೆಸೆದು ಕಲಾ ಅಂತರ್ಗತ ಪ್ರಯೋಗವನ್ನು ಮಾಡಲಾಯಿತು. ನಮ್ಮ ಸುತ್ತಮುತ್ತ ಇರುವ ಕಲಾ ಪ್ರಕಾರಗಳ ಹಾಗೂ ಸಂಪನ್ಮೂಲ ವ್ಯಕ್ತಿಗಳ ಸದ್ಬಳಕೆ ಈ ಕಾರ್ಯಕ್ರಮದ ಮೂಲಕವಾಯಿತು. ಸರ್ಕಾರಿ ಶಾಲೆಯಲ್ಲಿ ಪೋಷಕರು ಹಾಗೂ ಸಮುದಾಯದ ಪಾತ್ರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಐಎಸ್‌ಎ ಸಂಸ್ಥೆ ಪ್ರೋತ್ಸಾಹವನ್ನು ನೀಡುತ್ತದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಂತಿ ಮಾತನಾಡಿ, ‘ಸಂತೋಷ್ ರಂತಹ ಕಲಾವಿದರು ನಮ್ಮ ಶಾಲೆಯನ್ನು ಆಯ್ಕೆ ಮಾಡಿದ್ದಕ್ಕೆ ನಾವು ಅವರನ್ನು ಅಭಿನಂದಿಸುತ್ತೇವೆ, ಯಾಕೆಂದರೆ ಶಾಲೆಯ ಕಡೆ ಪೋಷಕರಾಗಲೀ, ಗ್ರಾಮಸ್ಥರಾಗಲೀ ಬರದೆ ಇರುವ ಇಂತಹ ಕಾಲದಲ್ಲಿ ಈ ಕಾರ್ಯಕ್ರಮದ ಮೂಲಕ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಗತಿಗಳನ್ನು ನೆಡೆಸಿ ಶಾಲೆ ಎಂದರೆ ನಮ್ಮೆಲ್ಲರ ಜವಾಬ್ದಾರಿ ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಈ ನಾಟಕದಲ್ಲಿ ನಮ್ಮ ಸಹ ಶಿಕ್ಷಕರ ಪಾತ್ರ ಕೊಟ್ಟು ಪಾಠ ಮಾಡುತ್ತಿದ್ದ ನಮ್ಮನ್ನು ನಾಟಕದ ಕಲಾವಿದರನ್ನಾಗಿ ಮಾಡಿದ್ದಾರೆ. ಹಾಗಾಗಿ ಸಂತೋಷ್ ಈ ಕೆಲಸ ನಮ್ಮ ಶಾಲೆಗೆ ಕೀರ್ತಿ ತಂದಿದೆ’ ಎಂದರು.

ನಾಟಕ ನೋಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಪ್ರೌಢಶಾಲೆಯ ದೈಹಿಕ ಶಿಕ್ಷಕ ಈ ಶಾಲೆಯ ಹಳೆಯ ವಿದ್ಯಾರ್ಥಿಯಾದ ರಂಗನಾಥ್ ಮಾತನಾಡಿ, ‘ಈ ನಾಟಕದ ಮೂಲಕ ನನ್ನ ಹಳೆಯ ಬಾಲ್ಯದ ನೆನಪು ಮಾಡಿಕೊಂಡೆ. ಅದರಲ್ಲೂ ಈ ಆಚರಣೆಯನ್ನು ತೋರಿಸುತ್ತ ಪಾಠ, ಪದ್ಯವನ್ನು ಬಳಸಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯುವ ಕೆಲಸವನ್ನು ಸಂತೋಷ ರವರು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ’ ಎಂದರು.

ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಚಂದ್ರಮೌಳಿ, ಸಹಶಿಕ್ಷಕಿ ಜಯಶ್ರೀ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಶಾ, ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳ, ಭೈರೇಗೌಡ, ಪ್ರಕಾಶ್ ಇದ್ದರು.ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ ಗ್ರಾಮ ಸರ್ಕಾರಿ ಶಾಲೆಯಲ್ಲಿ ‘ಹುಯ್ಯಪ್ಪ ಮಳೆರಾಯ’ ಎಂಬ ಪಠ್ಯ ಆಧಾರಿತ ನಾಟಕದ ಸಮಾರೋಪ ಸಮಾರಂಭ ಜರುಗಿತು.