ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಹೈಕಶಿ ಸಂಸ್ಥೆ)ಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ 13 ಸದಸ್ಯರ ಆಯ್ಕೆಗಾಗಿ ಶನಿವಾರ ಮತದಾನ ನಡೆಯಲಿದೆ.ಮತದಾನಕ್ಕಾಗಿ ಇಲ್ಲಿನ ರಾಂಪೂರೆ ವೈದ್ಯ ವಿದ್ಯಾಲಯದ ವಿದ್ಯಾರ್ಥಿ ಚಟುವಟಿಕೆ ಕೇಂದ್ರ (ಸ್ಟೂಡೆಂಟ್ ಎಕ್ಟಿವಿಟಿ ಸೆಂಟರ್- ಸ್ಯಾಕ್ ಬಿಲಡಿಂಗ್) ಕಟ್ಟಡದಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣಾಧಿಕಾರಿ ಡಾ. ಪಿ.ಎಸ್ ಶಂಕರ್ ಉಸ್ತುವಾರಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
ಶನಿವಾರ ಬೆ.8 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಒಟ್ಟು ಸಂಸ್ಥೆಯ 1, 458 ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಶನಿವಾರವೇ ಕಲಬುರಗಿಗೆ ಭೇಟಿ ನೀಡುತ್ತಿರೋದರಿಂದ ಮತಗಟ್ಟೆಗಳಿರುವ ಸ್ಯಾಕ್ ಬಿಲ್ಡಿಂಗ್ ತಲುಪಲು ಸಂಸ್ಥೆಯವರು ಭವಾನಿ ಕನ್ವೆನ್‌ಶನ್ ಹಾಲ್‌ನಿಂದ ಪಕ್ಕದಲ್ಲೇ ಆವರಣ ಗೋಡೆ ಒಡೆದು ದಾರಿ ಕಲ್ಪಿಸಿದ್ದಾರೆ. ಮತದಾರರು ಇದೇ ದಾರಿಯಿಂದ ಮತದಾನಕ್ಕೆ ಆಗಮಿಸಬೇಕು.262 ರಿಂದ 300 ಮತಗಳಿರುವಂತೆ ಮತಗಟ್ಟೆಗಳನ್ನು ರಚಿಸಲಾಗಿದೆ. ಇದಲ್ಲದೆ ಪ್ರತಿ ಮತಗಟ್ಟೆಯಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಎಲ್ಲಾ ಮತಗಟ್ಟೆಗಳಿಂದ ವೆಬ್ ಕ್ಯಾಸ್ಟಿಂಗ್ ಸವಲತ್ತು ಇರಲಿದೆ. ಕಲಬುರಗಿಯಲ್ಲಿ ಕುಳಿತುಕೊಂಡೇ ಬೀದರ್, ಕಲಬುರಗಿ, ರಾಯಚೂರು ಮತದಾನ ಪ್ರಕ್ರಿಯೆ ವೀಕ್ಷಣೆ ಮಾಡಬಹುದಗಿದೆ ಎಂದು ಚುನಾವಣಾಧಿಕಾರಿ ಡಾ. ಶಂಕರ್ ಮಾಹಿತಿ ನೀಡಿದ್ದಾರೆ.
ಹೊಲೋಗ್ರಾಮ್ ಇರುವ ಮತಪತ್ರ ಬಳಕೆ: ಹೈಕಶಿ ಸಂಸ್ಥೆಯ ಚುನಾವಣೆಯಲ್ಲಿ ಹೊಲೋಗ್ರಾಮ್ ಇರುವಂತಹ ಮತಪತ್ರ (ಬ್ಯಾಲಟ್ ಪೇಪರ್) ಬಳಕೆ ಮಾಡಲಾಗುತ್ತಿದೆ. ಪ್ರತಿಯೊಂದು ಮತಪತ್ರಕ್ಕೂ ಮತಗಟ್ಟೆ ಅಧಿಕಾರಿಯ ಸಹಿ, ನಂಬರಿಂಗ್ ಕಡ್ಡಾಯ. ಯಾವುದೇ ಹಂತದಲ್ಲಿ ಮತಪತ್ರಗಳ ನಕಲಿಗೆ ಅವಕಾಶ ಇರದಂತೆ ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗಿದೆ.ಕೆಲವರು ಸದಸ್ಯರು ಬಿಸಿಲು ಇರುವುದರಿಂದ ಹಾಗೂ ಮತದಾನ ಕೇಂದ್ರದ ಸ್ಥಳ ಬದಲಾಗಿರೋದರಿಂದ ಮತದಾನದ ಸಮಯ ಬೆಳಗಿನ 8 ರಿಂದ ಸಂಜೆ 5 ರ ಬದಲು 6 ಗಂಟೆಯವರೆಗೂ ವಿಸ್ತರಿಸುವಂತೆ ಕೋರಿದ್ದಾರೆ. ಆದರೆ ನಾವು ಇದನ್ನು ತಕ್ಷಣಕ್ಕೆ ಒಪ್ಪಿಲ್ಲ. ನಾಳಿನ ಮತದಾನ ಪ್ರಕ್ರಿಯೆಯನ್ನು ಅವಲೋಕಿಸಿ ಹಾಗೇನಾದರೂ ಅಗತ್ಯ ಕಂಡು ಬಂದಲ್ಲಿ ಮತದಾನ ಅವಧಿಯನ್ನು ವಿಸ್ತರಿಸುವ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆಂದು ಡಾ. ಶಂಕರ್ ಹೇಳಿದ್ದಾರೆ.
ಮಾ.17ರಂದು ಮತ ಎಣಿಕೆ: ಮತದಾನದ ನಂತರ ಮತ ಪೆಟ್ಟಿಗಳನ್ನೆಲ್ಲ ಭದ್ರವಾಗಿ ಪೊಲೀಸ್ ಕಾವಲಲ್ಲಿ ಇರಿಸಲಾಗತ್ತಿದೆ. ಮಾ.17ರ ಭಾನುವಾರ ಬೆ. 8ರಿಂದಲೇ ಮತಗಳ ಎಣಿಕೆ ಶುರುವಾಗಲಿದೆ. ಆದ್ಯತೆಯ ಮತಗಳಿರೋದರಿಂದ, ಮತಗಳ ಎಣಿಕೆ ಶುರುವಾಗಿ ಪ್ರತಿ 400 ಮತಗಳ ಕಟ್ಟಿಗೆ 1 ಸುತ್ತೆಂದು ಪರಿಗಣಿಸಿ ಅಭ್ಯರ್ಥಿಗಳಿಗೆ ಬರುವ ಮತಗಳ ಮಾಹಿತಿ ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತಿದೆ. ರಾತ್ರಿ 9 ಗಂಟೆಗೆ ಚುನಾಯಿತರಾದವರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಡಾ. ಪಿಎಸ್ ಶಂಕರ್ ಹೇಳಿದ್ದಾರೆ.ಅಧ್ಯಕ್ಷ ಸ್ಥಾನ ಕಣದಲ್ಲಿರುವವರು: ಶಶಿಲ್ ನಮೋಶಿ, ಡಾ. ಶರಣಬಸಪ್ಪ ಕಾಮರೆಡ್ಡಿ, ಸಂತೋಷ ಬಿಲಗುಂದಿ, ರಾಜಶೇಖರ ನಿಪ್ಪಾಣಿ (ಸ್ವತಂತ್ರ) ಉಪಾಧ್ಯಕ್ಷ ಸ್ಥಾನ ಕಣದಲ್ಲಿರುವವರು: ರಾಜಾ ಭೀಮಳ್ಳಿ, ನಿತೀನ್ ಜವಳಿ, ಆರ್ ಎಸ್ ಹೊಸಗೌಡ ಇದ್ದಾರೆ. ಈ ಎರಡೂ ಸ್ಥಾನಗಳನ್ನು ಹೊರತು ಪಡಿಸಿ ಹೈಕಶಿ ಸಂಸ್ಥೆಯ ಆಡಳಿತ ಮಂಡಳಿಯ 13 ಸದಸ್ಯ ಸ್ಥಾನಗಳಿಗಾಗಿ ಚುನಾವಣೆ ನಡೆಯುತ್ತಿದ್ದು ಕಣದಲ್ಲಿ ಒಟ್ಟು 39 ಸದಸ್ಯರು ತಮ್ಮ ಅದೃಷ್ಟ ಪರೀಕ್ಷೆಗೊಡ್ಡಿದ್ದಾರೆ.
ಜಿಲ್ಲಾವಾರು ಮತದಾರರು, ಮತಗಟ್ಟೆಗಳ ನೋಟ:1) ಕಲಬುರಗಿ ಜಿಲ್ಲೆ- ಒಟ್ಟು ಮತದಾರರು- 1, 327, ಮತಗಟ್ಟೆಗಳು 5
2) ರಾಯಚೂರು ಜಿಲ್ಲೆ- ಒಟ್ಟು ಮತದಾರರು- 73, ಮತಗಟ್ಟೆಗಳು- 13) ಬೀದರ್ ಜಿಲ್ಲೆ- ಒಟ್ಟು ಮತದಾರರು- 58, ಮತಗಟ್ಟೆಗಳು- 1