ವಿದೇಶದ ಡ್ರಗ್ಸ್ ಕಳ್ಳ ಸಾಗಾಣಿಕೆ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ದಿನದಲ್ಲೇ 23.42 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದೇಶದ ಡ್ರಗ್ಸ್ ಕಳ್ಳ ಸಾಗಾಣಿಕೆ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ದಿನದಲ್ಲೇ 23.42 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬ್ಯಾಕಾಂಕ್‌, ವಿಯೆಟ್ನಾಂ ಹಾಗೂ ಮಲೇಷಿಯಾದಿಂದ ಬಂದ ಆರು ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು, ಆರೋಪಿಗಳ ಬಳಿ 23.42 ಕೋಟಿ ರು. ಮೌಲ್ಯದ 62 ಕೇಜಿ ಹೈಡ್ರೋ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ವಿಮಾನ ನಿಲ್ದಾಣಕ್ಕೆ ಶನಿವಾರ ಆಗಮಿಸಿದ ಬ್ಯಾಂಕಾಕ್‌ ಪ್ರವಾಸಿಗನ ಬಳಿ 35 ಲಕ್ಷ ರು. ಮೌಲ್ಯದ 1 ಕೆಜಿ, ಮತ್ತೊಬ್ಬ ಬ್ಯಾಂಕಾಂಕ್‌ ಪ್ರವಾಸಿಗನಿಂದ 2.10 ಕೋಟಿ ರು. ಬೆಲೆಯ 6 ಕೆಜಿ, ಮಲೇಷಿಯಾದ ಕೌಲಾಂಪುರದ ಪೆಡ್ಲರ್‌ನಿಂದ 2.77 ಕೋಟಿ ರು. ಮೌಲ್ಯದ 7.90 ಕೆಜಿ, ಮತ್ತೊಬ್ಬ ಬ್ಯಾಂಕಾಕ್‌ ಪ್ರವಾಸಿಗನ ಬಳಿ 4.20 ಕೋಟಿ ರು. ಮೌಲ್ಯದ 12 ಕೆಜಿ, ವಿಯೆಟ್ನಾಂನ ಪ್ರವಾಸಿಗನಿಂದ 10.43 ಕೋಟಿ ರು.ಬೆಲೆಯ 29.80 ಕೆಜಿ ಹಾಗೂ ಕೊನೆಗೆ ಬ್ಯಾಕಾಂಕ್‌ ಪ್ರವಾಸಿಗನ ಬಳಿ 4.20 ಕೋಟಿ ರು. ಮೌಲ್ಯದ 12 ಕೆಜಿ ಸೇರಿದಂತೆ ಒಟ್ಟು 23.42 ಕೋಟಿ ರು. ಬೆಲೆಯ 62 ಕೆಜಿ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ವಿದೇಶದಿಂದ ಕಳ್ಳ ಮಾರ್ಗದಲ್ಲಿ ಡ್ರಗ್ಸ್ ಸಾಗಾಣಿಕೆ ಜಾಲದ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಲಾಯಿತು. ಅಂತೆಯೇ ಶನಿವಾರ ವಿವಿಧ ವಿಮಾನಗಳಲ್ಲಿ ವಿದೇಗಳಿಂದ ಆಗಮಿಸಿದ ಈ 6 ಮಂದಿ ಆರೋಪಿಗಳನ್ನು ಶಂಕೆ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆಗ ಆರೋಪಿಗಳ ಬ್ಯಾಗ್‌ನಲ್ಲಿ ಡ್ರಗ್ಸ್ ಜಪ್ತಿಯಾಗಿದೆ ಎಂದು ಕಸ್ಟಮ್ಸ್ ಹೇಳಿದೆ.

ಹೈಡ್ರೋ ಗಾಂಜಾಗೆ ಬಾರಿ ಡಿಮ್ಯಾಂಡ್‌:

ವಿದೇಶದ ಹೈಡ್ರೋ ಗಾಂಜಾಗೆ ರಾಜ್ಯದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಹೀಗಾಗಿಯೇ ಪ್ರವಾಸದ ನೆಪದಲ್ಲಿ ಥೈಲ್ಯಾಂಡ್‌, ವಿಯೆಟ್ನಾಂ ಹಾಗೂ ಮಲೇಷಿಯಾಗೆ ತೆರಳಿ ಅಲ್ಲಿಂದ ಹೈಡ್ರೋ ಗಾಂಜಾ ಸಾಗಾಣಿಕೆಯನ್ನು ಡ್ರಗ್ಸ್ ದಂಧೆಕೋರರು ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ಅಲ್ಲಿ ಹೈಡ್ರೋ ಗಾಂಜಾ ಖರೀದಿಸಿ ತಂದು ನಗರದಲ್ಲಿ ದುಬಾರಿ ಬೆಲೆ ಮಾರುತ್ತಿದ್ದಾರೆ. ಇನ್ನು ಪ್ರವಾಸದ ಆಮಿಷವೊಡ್ಡಿ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರನ್ನೇ ಡ್ರಗ್ಸ್ ದಂಧೆಕೋರರು ಬಳಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.