44 ವರ್ಷಗಳಿಂದ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ನಾಲ್ಕು ಜನ ಕಾರ್ಯಾಧ್ಯಕ್ಷರಲ್ಲಿ ಮೂರು ಜನರನ್ನು ಮಂತ್ರಿ ಮಾಡಿದ್ದರು. ಆ ಸಂದರ್ಭದಲ್ಲಿ ನನ್ನನ್ನು ಮಂತ್ರಿ ಮಾಡಲಿಲ್ಲ, ಯಾಕೆಂದು ನನಗೆ ಗೊತ್ತಿಲ್ಲ. ಸರ್ಕಾರ ಅಧಿಕಾರಕ್ಕೆ ಬರಲು ನನ್ನದೂ ಪಾತ್ರವಿದೆ ಎಂದು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.

ಹಾವೇರಿ: ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ತೀರ್ಮಾನ ಮಾಡೋದು ಸಿಎಂ ಮತ್ತು ಹೈಕಮಾಂಡ್. ಶೀಘ್ರವೇ ಪುನಾರಚನೆಗೆ ಆಗುತ್ತದೆ ಎಂಬ ಬಗ್ಗೆ ಕೇವಲ ಚರ್ಚೆ ಆಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದ್ದಿಗಾರರ ಸಚಿವ ಸ್ಥಾನ ಕುರಿತು ಪ್ರಶ್ನೆಗೆ ಉತ್ತರಿಸಿ, 44 ವರ್ಷಗಳಿಂದ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ನಾಲ್ಕು ಜನ ಕಾರ್ಯಾಧ್ಯಕ್ಷರಲ್ಲಿ ಮೂರು ಜನರನ್ನು ಮಂತ್ರಿ ಮಾಡಿದ್ದರು. ಆ ಸಂದರ್ಭದಲ್ಲಿ ನನ್ನನ್ನು ಮಂತ್ರಿ ಮಾಡಲಿಲ್ಲ, ಯಾಕೆಂದು ನನಗೆ ಗೊತ್ತಿಲ್ಲ. ಸರ್ಕಾರ ಅಧಿಕಾರಕ್ಕೆ ಬರಲು ನನ್ನದೂ ಪಾತ್ರವಿದೆ, ಅಷ್ಟು ದುಡಿದಿದ್ದೇನೆ. ಈ ಕುರಿತು ಮುಂದಿನ ದಿನಗಳಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಈ ಕುರಿತು ನಾನು ಈಗಾಗಲೇ ಯಾರಿಗೆ ಹೇಳಬೇಕೋ ಅದನ್ನು ಅವರಿಗೆ ಹೇಳಿದ್ದೇನೆ ಎಂದು ಚುಟುಕಾಗಿ ಉತ್ತರಿಸಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಕುರ್ಚಿ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಯಾವುದೇ ಬಣವಿಲ್ಲ, ಕಾಂಗ್ರೆಸ್ ಒಂದೇ ಬಣ. ನಮ್ಮ ಯೋಗ್ಯತೆ ಎಷ್ಟೋ ಅಷ್ಟೇ ನಾನು ಮಾತನಾಡುತ್ತೇನೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ, ಅವು ತಾವೇ ಸರಿಯಾಗುತ್ತವೆ. ಬಿಜೆಪಿಯವರಿಗೆ ಏನೂ ಕೆಲಸವಿಲ್ಲ. ಅವರನ್ನು ಜನ ಮನೆಯಲ್ಲಿ ಕೂಡಿಸಿದ್ದಾರೆ. ನಮ್ಮ ಆಂತರಿಕ ವಿಚಾರವನ್ನು ಟೀಕೆ ಮಾಡೋದೆ ಅವರೆ ಕೆಲಸ ಎಂದು ದೂರಿದರು.

ಕೇಂದ್ರದಿಂದ ಬರುವ ಅನುದಾನ ತರಿಸುವಂತಹ ಕೆಲಸ ಮಾಡಲಿ. ಅದನ್ನು ಬಿಟ್ಟು ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವುದು ಬೇಡ. ನಮ್ಮ ಸರ್ಕಾರ 5 ವರ್ಷಗಳ ಕಾಲ ಸುಭದ್ರವಾಗಿ ನಡೆಯುತ್ತದೆ. ಬಿಜೆಪಿಯವರಿಗೆ ಟೀಕೆ ಮಾಡುವ ನೈತಿಕತೆ ಇಲ್ಲ. ಕುದುರೆ ವ್ಯಾಪಾರ ಎಂಬುದು ಯಾವುದು ಪಕ್ಷದಲ್ಲಿ ನಡೆದಿಲ್ಲ? ಕಾಂಗ್ರೆಸ್‌ನಲ್ಲಿ ನರೇಂದ್ರ ಮೋದಿ ತರಹದ ಒನ್ ಮ್ಯಾನ್ ಶೋ ಇಲ್ಲ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಅಂದ್ರೆ, ವರ್ಕಿಂಗ್ ಕಮಿಟಿ. ನರೇಂದ್ರ ಮೋದಿ ಅವರಂತೆ ಹಿಟ್ಲರ್ ವಾದ ನಮ್ಮ ಪಕ್ಷದಲ್ಲಿ ನಡೆಯಲ್ಲ. ಎಐಸಿಸಿಯವರು ಕರೆದರೆ ಅಷ್ಟೇ ಸಿಎಂ ಮತ್ತು ಡಿಸಿಎಂ ದೆಹಲಿ ಹೋಗುತ್ತಾರೆ. ನಮ್ಮ ಹೈಕಮಾಂಡ್ ದೆಹಲಿಯಲ್ಲಿ ಇರುತ್ತದೆ, ಯಾರು ಯಾವಾಗ ಬೇಕಾದರೂ ಭೇಟಿಯಾಗಬಹುದು ಎಂದರು.

ನಮ್ಮಲ್ಲಿ ಯಾವುದೇ ಸಹಿ ಸಂಗ್ರಹಣೆ ಆಗಿಲ್ಲ, ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದರೆ ಅದರಲ್ಲಿ ತಪ್ಪೇನಿದೆ? ನಾಯಕತ್ವದ ಬಗ್ಗೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.