ಲೋಕಸಭೆ ಟಿಕೆಟ್‌ ಆಕಾಂಕ್ಷಿ ನಾನು

| Published : Dec 17 2023, 01:45 AM IST / Updated: Dec 17 2023, 01:46 AM IST

ಸಾರಾಂಶ

ಬಾಗಲಕೋಟೆ ಮತಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲು ಅನೇಕ ಮಹತ್ವಾಕಾಂಕ್ಷಿ ಉದ್ದೇಶಗಳನ್ನು ಪೂರೈಸಲು ಇಲ್ಲಿ ಸ್ಪರ್ಧೆ ಬಯಸಿದ್ದೇನೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನನಗೆ ಅವಕಾಶ ಸಿಕ್ಕರೆ ಖಂಡಿತ ಸ್ಪರ್ಧೆ ಮಾಡುವೆ. ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಯಾರಿಗೆ ಟಿಕೆಟ್ ನೀಡಿದರೂ ಖಂಡಿತ ಬೆಂಬಲಿಸುತ್ತೇನೆ. ನಾನು ಯಾರ ವಿರೋಧಿ ಅಲ್ಲ ಎಂದು ಬಿಜೆಪಿ ಮುಖಂಡ ಡಾ.ಪ್ರಕಾಶ ಜಿ.ಪರಪ್ಪ ಹೇಳಿದರು.

ನಗರದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಮತಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲು ಅನೇಕ ಮಹತ್ವಾಕಾಂಕ್ಷಿ ಉದ್ದೇಶಗಳನ್ನು ಪೂರೈಸಲು ಇಲ್ಲಿ ಸ್ಪರ್ಧೆ ಬಯಸಿದ್ದೇನೆ. ಮೊದಲ ಹಂತದಲ್ಲಿ ಜನರ ಸಮಸ್ಯೆ ಆಲಿಸಲು, ಚರ್ಚೆ ನಡೆಸಲು ಎಂಪಿ ಚಾಯ್‌ ಅಂತ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ನಮ್ಮ ತಂಡದ ಸದಸ್ಯರು ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಸಂಚರಿಸಿ ಅಲ್ಲಿಯ ಚಾಯ್ ಸಿದ್ಧಪಡಿಸಿ ಜನರೊಂದಿಗೆ ಬೆರೆತು ಮಾತನಾಡಿಸಲಿದ್ದಾರೆ ಎಂದರು.

ನಾನು ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆರ್ಥಿಕ ಇಲಾಖೆಯಲ್ಲಿ ಡಿಸಿ ಆಗಿ ಕಾರ್ಯನಿರ್ವಹಿಸಿದ್ದೇನೆ. ಎಂಬಿಬಿಎಸ್ ಪಾಸ್‌ದ ನಂತರ ಹಳ್ಳಿಗಳಲ್ಲಿ ವೈದ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಪಿಯುಸಿಯಲ್ಲಿ 11ನೇ ರ್‍ಯಾಂಕ್‌, ವೈದ್ಯಕೀಯದಲ್ಲಿ 29ನೇ ರ್‍ಯಾಂಕ್‌ ಪಡೆದಿದ್ದೇನೆ. ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯವಾಗಿ ಭಾಗವಹಿಸಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ ಎಂದರು..

ಬಾಗಲಕೋಟೆ ಜಿಲ್ಲೆಯ 24 ಪ್ರಕೋಷ್ಟಗಳ ರಾಜ್ಯ ಪ್ರಭಾರಿಯಾಗಿದ್ದೆ. 2023ರ ವಿಧಾನಸಭೆ ಚುನಾವಣಾ ಪ್ರಣಾಳಿಕೆ ಸಮಿತಿಯ ರಾಜ್ಯ ಸಹ ಸಂಚಾಲಕನಾಗಿದ್ದೆ. ಲೋಕಸಭಾ ಮತಕ್ಷೇತ್ರಗಳ ಗ್ರಾಮೀಣ ಪ್ರದೇಶದಲ್ಲಿ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಲಿದ್ದೇನೆ ಎಂದರು.

ಕಾರ್ಯಕರ್ತರು ಹಾಗೂ ಸಾರ್ವಜನಿಕರ ಬೆಂಬಲ ನನಗೆ ನೀಡಬೇಕೆಂದು ಮನವಿ ಮಾಡಿಕೊಂಡರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಂತೋಷ ಕತ್ತಿ, ಸಂಗಮೇಶ ಅಂಗಡಿ, ಮಾನಪ್ಪ ಚಿಗರ ನ್ನವರ, ಕೆಂಚೆಗೌಡರ, ಅನಂತ ಛಲವಾದಿ ಇತರರು ಇದ್ದರು.

---

ಲೋಕಸಭೆ ಟಿಕೆಟ್‌ ಹೈಕ್‌ಮಾಂಡ್‌ ನಿರ್ಧರಿಸುತ್ತದೆ

ಬಾಗಲಕೋಟೆ: ನಾನು ಜನ ಸಾಮಾನ್ಯರ ಜೊತೆ ಇರುತ್ತೇನೆ. 40 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ. ಬಾಗಲಕೋಟೆ ಜನರ ಸಮಸ್ಯೆಗಳಿಗೆ ನಾನು ಏನು ಮಾಡಬೇಕು ಅಂತ ನನಗೆ ಗೊತ್ತಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಡಾ.ಪ್ರಕಾಶ ಪರಪ್ಪ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಪತ್ರಕರ್ತ ರು ಕೇಳಿದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಗದ್ದಿ ಗೌಡರ, ನಾನು ಓದಿಕೊಂಡಿದ್ದೇನೆ. ವಕೀಲನಾಗಿದ್ದು, ಮುಲ್ಕಿ ಪರೀಕ್ಷೆ ಪಾಸ್‌ ಆಗಿದ್ದೇನೆ. ಲೋಕಸಭೆಗೆ ಹೋಗಿದ್ದೇನೆ. ನಾನು ಏನು ಮಾಡಬೇಕು ಅಂತ ನನಗೆ ಗೊತ್ತಿದೆ. ನನ್ನ ಸಾಧನೆ ಜನರಿಗೆ ತಿಳಿದಿದೆ. ಜನರ ಮೇಲೆ ಮತ್ತು ದೇವರ ಮೇಲೆ ಬಹಳಷ್ಟು ವಿಶ್ವಾಸ ಇದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕ್‌ಮಾಂಡ್ ನಿರ್ಧಾರ ಮಾಡುತ್ತದೆ. ನಾವು ನೀವು ನಿರ್ಧಾರ ಮಾಡುವುದು ಅಲ್ಲ ಎಂದು ಟಿಕೆಟ್ ಆಕಾಂಕ್ಷಿಗೆ ಗುದ್ದು ನೀಡಿದರು.