ನಾನು ಮಂಡ್ಯ ಜಿಲ್ಲೆಯ ಕುಟುಂಬದ ಒಬ್ಬ ಸದಸ್ಯ: ಮಾಜಿ ಸಿಎಂ ಎಚ್ಡಿಕೆ

| Published : Apr 18 2024, 02:15 AM IST

ಸಾರಾಂಶ

ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ನಿರಾಂತಕವಾಗಿ ನಡೆಯುತ್ತಿದೆ. ಇದರ ಪರಿಣಾಮ ಈ ಹಿಂದೆ ಕೆ.ಆರ್.ಪೇಟೆಯ ಒಬ್ಬ ಬಾಲಕನ ಕೊಲೆಯಾಗಿತ್ತು. ಬೆಟ್ಟಿಂಗ್ ದಂಧೆಯಿಂದ ಯುವ ಸಮುದಾಯ ಹಾಳಾಗುತ್ತಿದ್ದರೂ ಅದನ್ನು ನೋಡಿಕೊಂಡು ರಾಜ್ಯ ಸರ್ಕಾರ ಕುಳಿತಿದೆ. ಇಂತಹ ದರಿದ್ರ ಸರ್ಕಾರ ನಿಮಗೆ ಬೇಕಾ..?

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹಾಸನ ನನಗೆ ಜನ್ಮ ನೀಡಿದರೆ, ರಾಮನಗರ ರಾಜಕೀಯವಾಗಿ ಶಕ್ತಿ ನೀಡಿದ ಭೂಮಿ. ಮಂಡ್ಯ ಜಿಲ್ಲೆ ಜನತೆ ನನ್ನನ್ನು ಜಿಲ್ಲೆಯ ಮಗನಂತೆ ಕುಟುಂಬದ ಸದಸ್ಯರಾಗಿ ನೋಡಿಕೊಂಡಿದೆ ಎಂದು ಮಂಡ್ಯ ಲೋಕಸಭೆ ಚುನಾವಣೆ ಮೈತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಪುರಸಭಾ ಮೈದಾನದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷಗಳು ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಎನ್.ಚಲುವರಾಯಸ್ವಾಮಿ ಅವರು ನನ್ನನ್ನು ಸೋಲಿಸುವಂತೆ ಕರೆ ನೀಡಿದ್ದಾರೆ. ಇವರಿಗೆ ನನ್ನನ್ನು ಚುನಾವಣೆಯಲ್ಲಿ ಎದುರಿಸುವ ತಾಕತ್ತಿಲ್ಲದೆ ಮಂಡ್ಯಕ್ಕೆ ರಾಹುಲ್ ಗಾಂಧಿ ಅವರನ್ನು ಕರೆತಂದಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿಯಾಗಲು ನನಗೊಂದು ಅವಕಾಶ ಕೊಡಿ ಎಂದು ಡಿ.ಕೆ.ಶಿವಕುಮಾರ್ ಕೇಳುತ್ತಿದ್ದಾರೆ. ಅವರೇ ಸರ್ಕಾರದ ಡಿಸಿಎಂ ಆಗಿದ್ದಾರೆ. ನಿಮ್ಮ ಕೈಗೆ ಪೆನ್ನು, ಪೇಪರ್ ಕೊಟ್ಟ ಪರಿಣಾಮ ಇಂದು ನಮ್ಮ ನೀರು ನಮ್ಮ ಹಕ್ಕು ಆಗುವ ಬದಲು ನಮ್ಮ ನೀರು ತಮಿಳರ ಹಕ್ಕಾಗಿದೆ ಎಂದು ಛೇಡಿಸಿದರು.

ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ನಿರಾಂತಕವಾಗಿ ನಡೆಯುತ್ತಿದೆ. ಇದರ ಪರಿಣಾಮ ಈ ಹಿಂದೆ ಕೆ.ಆರ್.ಪೇಟೆಯ ಒಬ್ಬ ಬಾಲಕನ ಕೊಲೆಯಾಗಿತ್ತು. ಬೆಟ್ಟಿಂಗ್ ದಂಧೆಯಿಂದ ಯುವ ಸಮುದಾಯ ಹಾಳಾಗುತ್ತಿದ್ದರೂ ಅದನ್ನು ನೋಡಿಕೊಂಡು ರಾಜ್ಯ ಸರ್ಕಾರ ಕುಳಿತಿದೆ. ಇಂತಹ ದರಿದ್ರ ಸರ್ಕಾರ ನಿಮಗೆ ಬೇಕಾ ಎಂದು ಪ್ರಶ್ನೆ ಮಾಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸುದೀರ್ಘ ರಾಜಕೀಯ ಜೀವನದ ಹಿಂದೆ ಮಂಡ್ಯ ಜಿಲ್ಲೆ ಜನರ ಕೊಡುಗೆ ಇದೆ. ನಮ್ಮ ಕುಟುಂಬ ಬದುಕಿರುವವರೆಗೂ ಜಿಲ್ಲೆಯ ಜನರ ಋಣ ತೀರಿಸಲು ಸಾಧ್ಯವಿಲ್ಲ. ದೇವೇಗೌಡರ ಹೋರಾಟದ ಫಲವಾಗಿಯೇ ಹಾಸನದ ಗೊರೂರು ಜಲಾಶಯ ನಿರ್ಮಾಣವಾಯಿತು. ಇದರಿಂದ ಬರಡು ಪ್ರದೇಶವಾಗಿದ್ದ ಮಂಡ್ಯ ಜಿಲ್ಲೆಯ ಕೆಲವು ಭಾಗಗಳು ನೀರು ಕಂಡವು ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಎದುರಾಗಿದೆ. ರೈತರ ಬೆಳೆ ಸಂರಕ್ಷಣೆಗೆ ನೀರು ಬಿಡುಗಡೆ ಮಾಡಿಲ್ಲ. ಜಿಲ್ಲೆಯ ರೈತರ ಗದ್ದೆಗಳು ನೀರಿಲ್ಲದೆ ಒಣಗಿ ನಿಂತಿವೆ. ಜಿಲ್ಲೆಗೆ ಕುಮಾರಣ್ಣ ಯಾರು ಎಂದು ಪ್ರಶ್ನಿಸುವವರು ಜಿಲ್ಲೆಯ ರೈತರ ಬಗ್ಗೆ ಕನಿಷ್ಠ ಕಾಳಜಿ ತೋರಿಸಿದ್ದರೆ ಒಣಗಿ ನಿಂತಿರುವ ಕಬ್ಬಿನ ಬೆಳೆಯನ್ನು ರೈತರು ಸಂರಕ್ಷಿಸಿಕೊಳ್ಳುತ್ತಿದ್ದರು ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಕಿಡಿಕಾರಿದರು.

ಈ ಹಿಂದೆ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತರ ನೆರವಿಗೆ ಬರಲಿಲ್ಲ. ಆದರೆ, ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿ ಸಾಂತ್ವನ ಹೇಳಿದವನು ನಾನು. ನಿಮ್ಮ ಕುಟುಂಬದ ಅಣ್ಣ ಅಥವಾ ತಮ್ಮ ಎಂಬ ಭಾವನೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿರುವ ನನಗೆ ಮತನೀಡಿ ಎಂದು ಮನವಿ ಮಾಡಿದರು.

ಈ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಹೆಚ್ಚು ಒತ್ತು ನೀಡಿದೆ. ಮಂಡ್ಯ ಜಿಲ್ಲೆಯ ಜನತೆಯ ಬದುಕಿಗೆ ಕೊಳ್ಳಿ ಇಟ್ಟಿದೆ. ಮೈತ್ರಿ ಸರ್ಕಾರದಲ್ಲಿ ನಾನು ಜಿಲ್ಲೆಗೆ ನೀಡಿದ ಕೊಡುಗೆ ಏನು ಎಂದು ತೆಗೆದು ನೋಡಲಿ. ಜಿಲ್ಲೆಗೆ ಹೆಚ್ಚು ಅನುದಾನ ನೀಡಿದರೆ ಮಂಡ್ಯ ಬಜೆಟ್ ಎಂದು ಟೀಕಿಸಿದ ಕಾಂಗ್ರೆಸ್ಸಿಗರಿಗೆ ಈಗ ಮತ ಕೇಳಲು ಯಾವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಲೋಕಸಭೆಗೆ ಹೋಗಿ ಸ್ಥಾನಮಾನ ಪಡೆಯಬೇಕು ಎಂಬ ಆಸೆಯಿಲ್ಲ. ನಿಮ್ಮ ಕೆಲಸ ಹಾಗೂ ನಾಡಿನ ರೈತರ ನೀರಿನ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಸೃಷ್ಠಿಯ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಮೊದಲು ರಾಜ್ಯದಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಿ ಎಂದು ಸವಾಲು ಹಾಕಿದರು.

ವಿ.ಸಿ ನಾಲೆ ಆಧುನೀಕರಣಕ್ಕೆ ಅಗತ್ಯ ಹಣ ನೀಡಿದವನು ನಾನು. ರೈತ ಸಮುದಾಯಕ್ಕೆ ತೊಂದರೆಯಾಗದಂತೆ ನಾಲೆ ನೀರು ನಿಲ್ಲಿಸದೆ ಕಾಮಗಾರಿ ನಡೆಸುವಂತೆ ನಾನು ಸೂಚಿಸಿದ್ದೆ. ಈಗ ರಾಜ್ಯ ಸರ್ಕಾರ ನಾಲಾ ಆಧುನೀಕರಣದ ಹೆಸರಿನಲ್ಲಿ ವಿ.ಸಿ ನಾಲೆಯಲ್ಲಿ ನೀರು ನಿಲ್ಲಿಸಿ ರೈತರಿಗೆ ತೊಂದರೆ ಕೊಟ್ಟಿದೆ. ನಾಲೆ ಅಧುನೀಕರಣದ ಗುತ್ತಿಗೆದಾರ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು. ಗುತ್ತಿಗೆದಾರನ ರೈತ ಹಿತ ನಿಮ್ಮ ಕಣ್ಣಮುಂದೆಯೇ ಇದೆ ಎಂದರು.