ಪಶ್ಚಿಮ ಪದವೀಧರ ಮತಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದೆ. ಕಾಂಗ್ರೆಸ್‌- ಬಿಜೆಪಿ ನಡುವೆ ಅಬ್ಬರದ ಪ್ರಚಾರ ನಡೆಸುತ್ತಿವೆ. ತಮ್ಮ ಬಿಡುವಿಲ್ಲದ ಪ್ರಚಾರದ ನಡುವೆಯೇ ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ ಕನ್ನಡಪ್ರಭದೊಂದಿಗೆ ಮಾತನಾಡಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಪಶ್ಚಿಮ ಪದವೀಧರ ಮತಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿದೆ. ಕಾಂಗ್ರೆಸ್‌- ಬಿಜೆಪಿ ನಡುವೆ ಅಬ್ಬರದ ಪ್ರಚಾರ ನಡೆಸುತ್ತಿವೆ. ತಮ್ಮ ಬಿಡುವಿಲ್ಲದ ಪ್ರಚಾರದ ನಡುವೆಯೇ ಕಾಂಗ್ರೆಸ್‌ ಅಭ್ಯರ್ಥಿ ಮೋಹನ ಲಿಂಬಿಕಾಯಿ ಕನ್ನಡಪ್ರಭದೊಂದಿಗೆ ಮಾತನಾಡಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಏಕೆ ಮತ ಹಾಕಬೇಕು? ಹಾಕಿದರೆ ಮುಂದಿನ ಯೋಜನೆಗಳೇನು? ಎಂಬ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾರೆ.

- ಚುನಾವಣೆ ತಯಾರಿ ಹೇಗೆ ನಡೆದಿದೆ?

ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅತ್ಯುತ್ತಮ ವಾತಾವರಣವಿದೆ. ಬರೀ ಕಾಂಗ್ರೆಸ್ಸಿಗರಷ್ಟೇ ಅಲ್ಲ ಪಕ್ಷಾತೀತವಾಗಿ ನನಗೆ ಬೆಂಬಲಿಸುತ್ತಿದ್ದಾರೆ. ಜತೆಗೆ ಸರ್ಕಾರದ ಜನಪರ ಯೋಜನೆಗಳಿಂದ ಕಾಂಗ್ರೆಸ್‌ ಅಲೆ ಎದ್ದಿದೆ. ನಾನು ಜನ ಸೇವಕ; ಜನರೇ ನನ್ನನ್ನು ಆಯ್ಕೆ ಮಾಡಿ ಪರಿಷತ್‌ಗೆ ಕಳುಹಿಸುತ್ತಾರೆ ಎಂಬ ವಿಶ್ವಾಸವಿದೆ.

- ಏಳೆಂಟು ತಿಂಗಳ ಮುಂಚೆಯೇ ಟಿಕೆಟ್‌ ಘೋಷಣೆಯಾಗಿದೆ? ಇದರಿಂದ ಏನಾದರೂ ಸಹಾಯವಾಯಿತೇ?

ಬಹಳಷ್ಟು ಅನುಕೂಲವಾಗಿದೆ. ಮತದಾರರ ನೋಂದಣಿ ಮಾಡಿಸಲು ಸಮಯ ಸಿಕ್ಕಿತು. ಪಕ್ಷ ಸಂಘಟಿಸಲು ಸಹಕಾರಿಯಾಯಿತು. ಈ ಎಲ್ಲ ಕಾರಣಗಳಿಂದ ಮತದಾರರ ಸಂಖ್ಯೆಯೂ ಹಿಂದಿಗಿಂತಲೂ ಈ ಸಲ ಜಾಸ್ತಿಯಾಗಿದೆ.

- ಕಾಂಗ್ರೆಸ್‌ ಕ್ಷೇತ್ರವಾಗಿದ್ದನ್ನು ಹಿಂದೆ ನೀವೇ ಬಿಜೆಪಿಯನ್ನಾಗಿಸಿದ್ದೀರಿ? ಇದೀಗ ಬಿಜೆಪಿ ವಶಕ್ಕೆ ಹೋಗಿದೆ ಮರಳಿ ತರುವ ವಿಶ್ವಾಸವಿದೆಯೇ?

ಹೌದು! ನಿಜ. ಹಿಂದೆ 2008ರ ವರೆಗೂ ಈ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು. ಆಗ ಬಿಜೆಪಿಯಿಂದ ನಿಂತು ಗೆದ್ದು ಬಂದಿದ್ದೆ. ಇದೀಗ ಮತ್ತೆ ಈ ಕ್ಷೇತ್ರವನ್ನು ಕಾಂಗ್ರೆಸ್ಸಮ ಮಾಡುತ್ತೇನೆ. ಇದರಲ್ಲಿ ಯಶಸ್ವಿಯಾಗುತ್ತೇನೆ. ಸರ್ಕಾರವೂ ನಮ್ಮದೇ ಇದೆ. ಕ್ಷೇತ್ರದಲ್ಲಿ 23 ಶಾಸಕರಿದ್ದಾರೆ. ಅದರಲ್ಲಿ 17- 18 ಶಾಸಕರು ಕಾಂಗ್ರೆಸ್ಸಿಗರೇ. ನಾಲ್ಕು ಜಿಲ್ಲೆಗಳ ಉಸ್ತುವಾರಿ ಸಚಿವರು, ಎಲ್ಲ ಶಾಸಕರು, ಕಾರ್ಯಕರ್ತರ ಪಡೆ, ಎಲ್ಲ ಬಗೆಯ ಮುಖಂಡರು, ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕ್ಷೇತ್ರ ಮತ್ತೆ ಕೈ ವಶವಾಗುತ್ತದೆ. ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಗೆ ಕ್ರಮ, ನಿರುದ್ಯೋಗ ಭತ್ಯೆ, ಜನಮೆಚ್ಚಿರುವ ಗ್ಯಾರಂಟಿ ಯೋಜನೆ, ಏಳನೇ ವೇತನ ಆಯೋಗದ ವರದಿ ಜಾರಿಗೆ ಕ್ರಮ ಕೈಗೊಂಡಿರುವುದೆಲ್ಲವೂ ನನಗೆ ಶ್ರೀರಕ್ಷೆಯಾಗಲಿದೆ. ನನ್ನ ಗೆಲವು ಖಚಿತ.

- ನಿಮ್ಮಲ್ಲಿ ಆಕಾಂಕ್ಷಿಗಳು ಸಾಕಷ್ಟು ಜನ ಇದ್ದರು? ಅವರಿಂದ ಈಗ ಸ್ಪಂದನೆ ಹೇಗಿದೆ?

ಹೌದು, ಕಾಂಗ್ರೆಸ್‌ ದೊಡ್ಡ ಪಕ್ಷ. ಸಹಜವಾಗಿ ಆಕಾಂಕ್ಷಿಗಳು ಸಾಕಷ್ಟು ಜನರಿದ್ದರು. ಅದರಲ್ಲೂ ಆರ್‌.ಎಂ.ಕುಬೇರಪ್ಪ, ಬಸವರಾಜ ಗುರಿಕಾರ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಈಗ ಯಾವುದೇ ಬಗೆಯ ಅಸಮಾಧಾನ, ಅತೃಪ್ತಿ, ಭಿನ್ನಾಭಿಪ್ರಾಯಗಳಿಲ್ಲ. ನನಗಿಂತಲೂ ಅವರೇ ಮುಂಚೂಣಿಯಲ್ಲಿ ನಿಂತು ಚುನಾವಣೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಪ್ರತಿಯೊಬ್ಬರು ನನಗೆ ಬೆಂಬಲಿಸುತ್ತಿದ್ದಾರೆ; ನನ್ನ ಈ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

- ನಿಮಗೆ ಏಕೆ ಮತ ಹಾಕಬೇಕು?

ನಾನು ಹಿಂದೆ ಇದೇ ಕ್ಷೇತ್ರದ ಸದಸ್ಯನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಜತೆಗೆ ನನ್ನ ಹಿನ್ನಲೆ ಗೊತ್ತು. ಜನಪರ ಚಿಂತನೆಯುಳ್ಳ ವ್ಯಕ್ತಿ ನಾನು. ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು ಎಂಬ ಹಂಬಲದಿಂದಲೇ ಕೆಲಸ ಮಾಡುತ್ತಾ ಬಂದಿದ್ದೇನೆ. ಪ್ರಾಧ್ಯಾಪಕನಾಗಿ, ವಕೀಲನಾಗಿ ಕಾರ್ಯನಿರ್ವಹಿಸಿದ್ದೇನೆ. ಎಲ್ಲರ ಸಮಸ್ಯೆ ಪರಿಕಲ್ಪನೆ ನನಗಿದೆ. ಪದವೀಧರ, ಶಿಕ್ಷಕರು, ನೌಕರರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು. ಏನೆಲ್ಲ ಮಾಡಬೇಕು ಎಂಬುದರ ಅರಿವು ನನಗಿದೆ. ನನ್ನ ಬೆಂಬಲಕ್ಕೆ ಬರೀ ಕಾಂಗ್ರೆಸ್ಸಿಗರು ಅಷ್ಟೇ ಅಲ್ಲ, ಬಿಜೆಪಿಗರು ಸಾಕಷ್ಟು ಜನ ನನಗೆ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ. ಜತೆಗೆ ಎದುರಾಳಿ ಪಕ್ಷದ ಅಭ್ಯರ್ಥಿ ಬಗ್ಗೆ ಮತದಾರರಲ್ಲಿ ಭ್ರಮನಿರಸನವಿದೆ. ಹೀಗಾಗಿ ಸಂಕನೂರ ಸಾಕು; ಲಿಂಬಿಕಾಯಿ ಬೇಕು ಎಂದು ಮತದಾರರೇ ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡುವ ಮೂಲಕ ಆ ಅಭ್ಯರ್ಥಿಗೆ ಪಾಠ ಕಲಿಸುವುದು ಗ್ಯಾರಂಟಿ.

- ಗೆದ್ದರೆ ನಿಮ್ಮ ಮುಂದಿನ ಯೋಜನೆಗಳೇನು?

ಪದವೀಧರರ, ಅತಿಥಿ ಉಪನ್ಯಾಸಕರ, ವಕೀಲರ, ನೌಕರರ, ಶಿಕ್ಷಕರ ಸಮಸ್ಯೆಗಳಿಗೆ ಆದ್ಯತೆ ಕೊಟ್ಟು ಬಗೆಹರಿಸುತ್ತೇನೆ. ಕಾಂಗ್ರೆಸ್‌ ಸರ್ಕಾರದಿಂದಲೇ ಮಾತ್ರ ಈ ಎಲ್ಲ ಕೆಲಸ ಸಾಧ್ಯ. ಇವುಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ.