ಸಾರಾಂಶ
ಚನ್ನಪಟ್ಟಣ: ಕಾಂಗ್ರೆಸ್ ಪಕ್ಷ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗಾಗಿ ಏನನ್ನು ಮಾಡಿಲ್ಲ. ಹೀಗಾಗಿ ಅವರಿಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಬಳಿಕ ನಾನು ಟಾರ್ಗೆಟ್ ಆಗಿದ್ದೇನೆ ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ಚನ್ನಪಟ್ಟಣ ಕ್ಷೇತ್ರದ ಕನ್ನಿದೊಡ್ಡಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂಸದರಾಗಿ ಡಿ.ಕೆ.ಸುರೇಶ್ ಇದ್ದರು. ಚನ್ನಪಟ್ಟಣ ಸಹ ಅವರ ವ್ಯಾಪ್ತಿಗೆ ಬರುತ್ತಿತ್ತು. ಕ್ಷೇತ್ರದಲ್ಲಿ ಅವರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಚುನಾವಣೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಲು ಏನು ಇಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್ ಸಂಪುಟ ನನ್ನ ವಿರುದ್ಧ ಚನ್ನಪಟ್ಟಣದಲ್ಲಿ ಚುನಾವಣೆ ಮಾಡುತ್ತಿದೆ. ಯೋಗೇಶ್ವರ್‌ಗೆ ಅವರಿಗೆ ಯಾಕೆ ಟಿಕೆಟ್ ಕೊಟ್ಟರು ಅಂತ ಎಲ್ಲರಿಗೂ ಗೊತ್ತಿದೆ. ಯೋಗೇಶ್ವರ್ ಅವರು 6 ವರ್ಷಕ್ಕೊಮ್ಮೆ ಪಕ್ಷಾಂತರ ಮಾಡುತ್ತಾರೆ. ಬಿಜೆಪಿಯಲ್ಲಿ ಅವರಿಗೆ ಎಲ್ಲಾ ಗೌರವ ನೀಡಿ ಶಕ್ತಿ ತುಂಬಿದ್ದರು. ಅವರ ಬಗ್ಗೆ ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಇಗ್ಗಲೂರು ಡ್ಯಾಂಗೂ ದೇವೇಗೌಡರಿಗೂ ಏನು ಸಂಬಂಧ ಇಲ್ಲ ಅಂತಾರೆ. ಇಗ್ಗಲೂರು ಬ್ಯಾರೇಜ್ ಸ್ಥಳ ಪರಿಶೀಲನೆ ಪೋಟೋ ಬಿಡುಗಡೆಯಾಗಿದೆ. ಇಗ್ಗಲೂರು ಬ್ಯಾರೇಜ್‌ಗೂ ದೇವೇಗೌಡರಿಗೂ ಸಂಬಂಧ ಇಲ್ಲ ಅಂತ ಕಾಂಗ್ರೆಸ್ ನಾಯಕರು ಹೇಳಿದ್ದರು. ಇತಿಹಾಸವನ್ನು ಯಾರು ಮರೆ ಮಾಚುವುದಕ್ಕೆ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಇವತ್ತು ಚನ್ನಪಟ್ಟಣದ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ.ಈ ಹಿಂದೆ ಏಕೆ ಇದೆಲ್ಲಾ ಮಾಡಲಿಲ್ಲ? ತೆರವಾದ ಮೇಲೆ ಚನ್ನಪಟ್ಟಣ ನೆನಪಾಯಿತಾ. ಯಾರು ಸಾಯುವುದು ಬೇಡ ಎಲ್ಲ ನೂರಾರು ವರ್ಷ ಚೆನ್ನಾಗಿರಲಿ. ಇಲ್ಲಿ ಹುಟ್ಟು ಸಾವಿನ ಮಾತಿನ ಅವಶ್ಯಕತೆ ಇಲ್ಲ.ನಾನು ಇಂತಹ ಮಾತುಗಳಿಂದ ಟ್ರಿಗರ್ ಆಗುವುದಿಲ್ಲ. ಹಿಂದೆನೂ ಆಗಿಲ್ಲ ಈಗಲೂ ಆಗುವುದಿಲ್ಲ ಎಂದು ತಿಳಿಸಿದರು.
ದಿನೇ ದಿನೇ ಆತ್ಮವಿಶ್ವಾಸ ಹೆಚ್ಚುತ್ತಿದೆ. ಕುಮಾರಣ್ಣ ಸ್ವ ಕ್ಷೇತ್ರ ಅನ್ನೋ ಕಾರಣಕ್ಕೆ ರಾಜ್ಯ ದೇಶದ ಗಮನ ಸೆಳೆದಿದೆ. ಜನ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ನನ್ನ ಮನದಾಳದ ಮಾತು ಜನರಿಗೆ ತಲುಪುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.