ನ.೩ಕ್ಕೆ ನಾನೂ ವಿಜ್ಞಾನಿ- ೨೦೨೫ ಕಾರ್ಯಕ್ರಮ: ಸಿ.ಶಿವಲಿಂಗಯ್ಯ

| Published : Oct 27 2025, 12:00 AM IST

ಸಾರಾಂಶ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ನಾಲ್ಕನೇ ರಾಜ್ಯ ಸಮ್ಮೇಳನ ಡಿ.೨೮ ರಿಂದ ೩೦ ರವರೆಗೆ ೩ ದಿನಗಳ ಕಾಲ ನಡೆಯಲಿದ್ದು, ಜಿಲ್ಲೆಯಿಂದ ಪಾಲ್ಗೊಳ್ಳಲು ಇಚ್ಚಿಸುವ ಆಸಕ್ತರು ಪ್ರಧಾನ ಕಾರ್ಯದರ್ಶಿ ಗೋಪನಹಳ್ಳಿ ಕೆಂಪರಾಜು (ಮೊ.೯೪೪೮೩೪೫೩೪೦) ಅವರ ಬಳಿ ಹೆಸರು ನೋಂದಾಯಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದಿಂದ ಬರುವ ನ.೩ರಂದು ನಾನೂ ವಿಜ್ಞಾನಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕರಸಿನಕೆರೆ ಸಿ. ಶಿವಲಿಂಗಯ್ಯ ಹೇಳಿದರು.

ನಗರದ ಪ್ರವಾಸಿಮಂದಿರದಲ್ಲಿ ಪರಿಷತ್ತಿನ ಜಿಲ್ಲಾ ಘಟಕದ ಸಭೆಯಲ್ಲಿ ಅವರು ಮಾತನಾಡಿ, ನ.೩ ರಂದು ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರದಲ್ಲಿ ಅ.೧ ರಿಂದ ೯ ರವರೆಗೆ ನಡೆದ ರಾಜ್ಯಮಟ್ಟದ ನಾನೂ ವಿಜ್ಞಾನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಟೆಲಿಸ್ಕೋಪ್ ತಯಾರಿಕೆಯಲ್ಲಿ ಸಾಧನೆಗೈದಿರುವ ಹಾಗೂ ಏಷಿಯನ್ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯನ್ ಬುಕ್ ಆಫ್ ರೆಕಾಡ್ಸ್ ಸಾಧಿಸಿ ರಾಜ್ಯಪಾಲರಿಂದ ಸನ್ಮಾನಿತರಾಗಿರುವ ಜಿಲ್ಲೆಯ ವಿವಿಧ ಶಾಲೆಗಳ ೧೬ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು.

ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಹುಲಿಕಲ್ ನಟರಾಜು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಕ್ಕೆ ಜಿಲ್ಲಾಡಳಿತ ದ ಸಹಕಾರವನ್ನು ಕೋರಲಾಗಿದ್ದು, ವಿವಿಧ ಶಾಲೆಗಳ ಆಯ್ದ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.

ರಾಜ್ಯ ಸಮ್ಮೇಳನಕ್ಕೆ ಆಹ್ವಾನ:

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ನಾಲ್ಕನೇ ರಾಜ್ಯ ಸಮ್ಮೇಳನ ಡಿ.೨೮ ರಿಂದ ೩೦ ರವರೆಗೆ ೩ ದಿನಗಳ ಕಾಲ ನಡೆಯಲಿದ್ದು, ಜಿಲ್ಲೆಯಿಂದ ಪಾಲ್ಗೊಳ್ಳಲು ಇಚ್ಚಿಸುವ ಆಸಕ್ತರು ಪ್ರಧಾನ ಕಾರ್ಯದರ್ಶಿ ಗೋಪನಹಳ್ಳಿ ಕೆಂಪರಾಜು (ಮೊ.೯೪೪೮೩೪೫೩೪೦) ಅವರ ಬಳಿ ಹೆಸರು ನೋಂದಾಯಿಸಬೇಕೆಂದು ಮನವಿ ಮಾಡಿದರು. ಪರಿಷತ್ತಿನ ರಾಜ್ಯ ಸಮ್ಮೇಳನದಲ್ಲಿ ಕೊಡಮಾಡುವ ರಾಜ್ಯಮಟ್ಟದ ಎಚ್.ನರಸಿಂಹಯ್ಯ ಪ್ರಶಸ್ತಿಗೆ ಶಿಕ್ಷಕ ನಂಜರಾಜು ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು.

ಸಭೆಯಲ್ಲಿ ರೈತ ನಾಯಕಿ ಸುನಂದಾ ಜಯರಾಂ, ಪರಿಷತ್ತಿನ ಗೌರವಾಧ್ಯಕ್ಷ ಎಂ.ಸಿ. ಬಸವರಾಜು, ದೇವರಾಜ್ ಕೊಪ್ಪ, ಪುಷ್ಪಲತಾ, ವಸಂತಾ, ಹುರಗಲವಾಡಿ ರಾಮಯ್ಯ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ದುಂಡಲಿಂಗರಾಜು, ದೊಡ್ಡರಸಿನಕೆರೆ ಮಹೇಂದ್ರ, ದೇವರಾಜು, ಜಯರಾಮ್, ವೆಂಕಟಾಚಲಯ್ಯ ಪಾಲ್ಗೊಂಡಿದ್ದರು.