ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಚನ್ನಪಟ್ಟಣದ ಉಪ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಟಿಕೆಟ್‌ಗಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆ. 26 ಅಥವಾ ಆ.27 ಕ್ಕೆ ದೆಹಲಿಗೆ ತೆರಳಿದ್ದು, ಎನ್‌ಡಿಎ ವರಿಷ್ಠರ ಜತೆ ಟಿಕೆಟ್‌ಗೆ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ನೇತೃತ್ವದಲ್ಲಿ ಸಭೆ ನಡೆಲಿದೆ. ಪಕ್ಷದ ವರಿಷ್ಠರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನನಗೆ ಟಿಕೆಟ್ ನೀಡುವ ವಿಶ್ವಾಸವಿದೆ ಎಂದರು.ಈಗಾಗಲೇ ಟಿಕೆಟ್ ವಿಚಾರವಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಸಂಸದ ಬಸವರಾಜ್ ಬೊಮ್ಮಾಯಿ, ಅಶೋಕ್, ಡಾ.ಅಶ್ವಥ್ ನಾರಾಯಣ್, ಸಿ.ಟಿ.ರವಿ, ಅರವಿಂದ್ ಬೆಲ್ಲದ್ ಅವರೊಂದಿಗೆ ಚರ್ಚೆ ನಡೆಸಿದ್ದು, ಅವರು ಎಚ್. ಡಿ. ಕುಮಾರಸ್ವಾಮಿಯೊಂದಿಗೆ ಚರ್ಚೆ ನಡೆಸಿ, ಟಿಕೆಟ್ ವಿಚಾರದಲ್ಲಿ ಅವರನ್ನು ಒಪ್ಪಿಸುವುದಾಗಿ ತಿಳಿಸಿದ್ದಾರೆ ಎಂದರು. ರಾಜ್ಯ ಬಿಜೆಪಿ ನಾಯಕರು ಜವಾಬ್ದಾರಿ ತೆಗೆದುಕೊಂಡು ಈ ಚುನಾವಣೆ ನಡೆಸಬೇಕು. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಕುಮಾರಸ್ವಾಮಿ ಹೊಣೆಗಾರಿಕೆ ಇದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಬೇಕು. ಈ ವಿಚಾರದಲ್ಲಿ ಮುಂದಿನ ವಾರ ಎಲ್ಲಾ ಗೊಂದಲಕ್ಕೂ ತೆರೆ ಬೀಳಲಿದೆ. ಶೇ.100 ನನಗೆ ಟಿಕೆಟ್ ಸಿಗುವ ಭರವಸೆ ಇದೆ. ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲು ಎರಡೂ ಪಕ್ಷದ ನಾಯಕರ ಸಮನ್ವಯ ಸಭೆ ಆಗಬೇಕು. ನಾನು ಇಂದು ದೆಹಲಿಗೆ ಹೋಗಬೇಕಿತ್ತು. ಆದರೆ ಕೆಲ ರಾಜಕೀಯ ವಿದ್ಯಾಮಾನಗಳಿಂದ ಪ್ರವಾಸ ಮುಂದೂಡಿದ್ದೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನನಗೆ ಟಿಕೆಟ್ ಕೊಡುವ ಮಾತು ಕೊಟ್ಟಿದ್ದಾರೆ. ಆದರೆ ಇದು ಕುಮಾರಸ್ವಾಮಿ ಅವರ ಕ್ಷೇತ್ರ. ಹಾಗಾಗಿ ವರಿಷ್ಠರ ಜತೆ ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ನನ್ನ ಜತೆ ಇದ್ದಾರೆ. ಚನ್ನಪಟ್ಟಣವು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇರುವ ಏಕೈಕ ಕ್ಷೇತ್ರವಾಗಿದೆ. ಹಾಗಾಗಿ ಎರಡು ಪಕ್ಷದ ನಾಯಕರಿಗೆ ಟಿಕೆಟ್ ಕೊಡಿ ಅಂತ ಕೇಳಿದ್ದೇನೆ. ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇನೆ. ಅವರು ಕೂಡಾ ಟಿಕೆಟ್ ಕೊಡಲು ಒಪ್ಪಿದ್ದಾರೆ ಎಂದರು.ಚುನಾವಣೆಗೆ ಇನ್ನು ದಿನಾಂಕ ಘೋಷಣೆಯಾಗಿಲ್ಲ. ಎಲ್ಲರೂ ನನ್ನ ಪರ ಇದ್ದಾರೆ ಎನ್ನುಲು ಆಗುವುದಿಲ್ಲ. ಆದರೆ ಅಂತಿಮವಾಗಿ ಕ್ಷೇತ್ರದಲಿ ಗೆಲ್ಲುವುದು ಮುಖ್ಯ. ಈ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ. ನನ್ನ ಮೊದಲ ಆದ್ಯತೆ ಮಾತೃ ಪಕ್ಷ ಬಿಜೆಪಿಗೆ. ಟಿಕೆಟ್ ಸಿಗದಿದ್ದರೆ ಮುಂದಿನ ಯೋಚನೆ ಮಾಡುತ್ತೇನೆ ಎಂದರು. ಎರಡು ಪಕ್ಷದ ಹಗ್ಗಜಗ್ಗಾಟದ ನಡುವೆ ಕಾಂಗ್ರೆಸ್‌ಗೆ ಲಾಭವಾಗುವುದೇ ಎಂಬ ಪ್ರಶ್ನೆಗೆ, ಕಾಂಗ್ರೆಸ್‌ಗೆ ಯಾವುದೇ ಲಾಭವಾಗುವುದಿಲ್ಲ. ಜನ ಸ್ಥಳಿಯ ಶಾಸಕರು ಬೇಕು ಎಂದು ತೀರ್ಮಾನಿಸಿ ನನ್ನ ಬೆಂಬಲಕ್ಕೆ ಇದ್ದಾರೆ. ಕುಮಾರಸ್ವಾಮಿ ನನ್ನ ಸ್ಪರ್ಧೆಗೆ ಒಪ್ಪುವ ಆತ್ಮವಿಶ್ವಾಸವಿದೆ ಎಂದರು.
ಸಿಎಂ ಹಾಗೂ ಎಚ್‌ಡಿಕೆ ನಡುವೆ ಪ್ರಾಸಿಕ್ಯೂಷನ್ ಅನುಮತಿ ತಿಕ್ಕಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದನ್ನ ನಾನು ಕೂಡಾ ಮಾಧ್ಯಮದಲ್ಲಿ ನೋಡುತ್ತಿದ್ದೇನೆ. ಅದೇನಾಗುತ್ತೋ ನೋಡೊಣ. ನಂದೆ ನನಗೆ ದೊಡ್ಡ ಸಮಸ್ಯೆ ಆಗಿದೆ, ನಾನ್ಯಾಕೆ ಬೇರೆಯವರ ಬಗ್ಗೆ ಮಾತನಾಡಲಿ ಎಂದರು.