ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮುಂಬರುವ ವಿಧಾನ ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ನಾನು ಪ್ರಬಲ ಆಕಾಂಕ್ಷಿಯಾಗಿದ್ದು, ಟಿಕೆಟ್ ಸಿಗುವ ನಿಚ್ಚಳ ನಿರೀಕ್ಷೆ ನನಗಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಪಿ.ದಿನೇಶ್ ಹೇಳಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈರುತ್ಯ ಪದವೀಧರ ಕ್ಷೇತ್ರದಿಂದ ನಾನು ಅಭ್ಯರ್ಥಿಯಾಗಿ 2012 ಮತ್ತು 2018ರಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದೆ. 2018ರಲ್ಲಿ ಕಡಿಮೆ ಮತಗಳ ಅಂತದಲ್ಲಿ ಸೋತಿದ್ದೆ. ಆದರೆ, ಈಗ ಬದಲಾದ ರಾಜಕೀಯ ವಾತಾವರಣದಿಂದ ನನಗೆ ಗೆಲ್ಲುವ ಅವಕಾಶ ಹೆಚ್ಚಿದೆ. ನೈರುತ್ಯ ಪದವೀಧರರ ಕ್ಷೇತ್ರದಲ್ಲಿ 30 ವಿಧಾನಸಭೆ ಕ್ಷೇತ್ರಗಳಿದ್ದು, ಈಗ 18 ಶಾಸಕರು ಕಾಂಗ್ರೆಸ್‌ನವರೇ ಇದ್ದಾರೆ. ಹಾಗಾಗಿ, ನಾನು ಗೆದ್ದೇ ಗೆಲ್ಲುವೆ ಎಂದರು.
ಕಳೆದ ಮೂರೂವರೆ ದಶಕಗಳಿಂದ ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದ್ದೇನೆ. ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ, ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಸಿಂಡಿಕೇಟ್ ಸದಸ್ಯನಾಗಿ ವಿದ್ಯಾರ್ಥಿಗಳ ಕುಂದುಕೊರತೆ ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಈ ಎಲ್ಲಾ ಕಾರಣಗಳಿಂದ ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ನೈರುತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ರಾಜ್ಯದ ನಾಯಕರು ಈ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಇನ್ನೂ ತೀರ್ಮಾನಿಸಿಲ್ಲ. ಇದನ್ನು ಎಐಸಿಸಿಗೆ ಕಳಿಸಲಾಗಿದೆ. ಅಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆದರೆ, ರಾಜ್ಯದ ನಾಯಕರು ನನಗೆ ಭರವಸೆ ನೀಡಿದ್ದಾರೆ. ಕ್ಷೇತ್ರದಲ್ಲಿ ಓಡಾಡಲು ತಿಳಿಸಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಮತದಾರರ ಸಂಖ್ಯೆ ಹೆಚ್ಚಾಗಿದೆ. ಸುಮಾರು 74 ಸಾವಿರ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. ಈ ಎಲ್ಲ ಮತದಾರರನ್ನು ಪತ್ರದ ಮೂಲಕ ಭೇಟಿಯಾಗಿದ್ದೇನೆ ಮತ್ತು ಮರುಟಪಾಲಿನ ಮೂಲಕ ಸಹಕಾರ, ಬೆಂಬಲವನ್ನು ನಿರೀಕ್ಷಿಸಿದ್ದೇನೆ. ನಾನು ಯಾವುದೇ ಪಕ್ಷಕ್ಕೂ ವಲಸೆ ಹೋಗದೇ ಕಾಂಗ್ರೆಸ್ ನಿಷ್ಠಾವಂತನಾಗಿ ಸೇವೆ ಸಲ್ಲಿಸಿದ್ದೇನೆ. ವಿಧಾನ ಪರಿಷತ್‌ನಲ್ಲಿ ತಮ್ಮ ಧ್ವನಿಯಾಗಲು ನನಗೊಂದು ಅವಕಾಶ ಕೊಡಬೇಕು. ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿದ್ದೇನೆ ಎಂದರು.ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ರಮೇಶ್ ಮಾತನಾಡಿ, ಎಸ್.ಪಿ. ದಿನೇಶ್ ಅವರು ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಟಿಕೆಟ್ ಸಿಗಬಹುದು. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಗೆಲುವಿಗೆ ಶ್ರಮಿಸುತ್ತೇವೆ. ಮತದಾರರ ಪಟ್ಟಿಯಲ್ಲಿ ಹಲವಾರು ಲೋಪದೋಷಗಳಿದ್ದು, ವಿಳಾಸ ಸರಿಯಾಗಿ ಇಲ್ಲದ ಕಾರಣ, ಆಕಾಂಕ್ಷಿಗಳ ಪ್ರಚಾರಕ್ಕೆ ಅಡ್ಡಿಯಾಗುತ್ತಿದೆ. ಕೆಲವು ಮತದಾರರಿಗೆ ಪತ್ರಗಳು ತಲುಪುತ್ತಿಲ್ಲ. ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವನಾಥ್ ಕಾಶಿ, ರಾಜಶೇಖರ್, ಚೇತನ್, ಮಧುಸೂದನ್, ಯಮುನಾ, ರಂಗೇಗೌಡ, ಮೂರ್ತಿ ಮತ್ತಿತರರು ಇದ್ದರು.- - - ಕೋಟ್ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ. ಆದರೆ, ಅಸ್ಸಾಂ ಮತ್ತು ಮಣಿಪುರದಲ್ಲಿ ಬಿಜೆಪಿ ಸರ್ಕಾರಗಳು ಅವರ ವಿರುದ್ಧ ಸುಳ್ಳು ಕೇಸ್ ಹಾಕಿ ಜಾಥಾ ಕುಂಠಿತಗೊಳಿಸುವ ಕೆಲಸ ಮಾಡುತ್ತಿದ್ದಾರೆ
- ಎನ್.ರಮೇಶ್, ಅಧ್ಯಕ್ಷ, ಪ್ರಚಾರ ಸಮಿತಿ- - -