ತವರು ಮನೆಗೆ ಹೋದಷ್ಟೇ ಸಂತಸ: ಗಾಲಿ ಜನಾರ್ದನ ರೆಡ್ಡಿ

| Published : Oct 04 2024, 01:02 AM IST

ಸಾರಾಂಶ

ಕಳೆದ 14 ವರ್ಷಗಳ ನಂತರ ನನ್ನ ತವರು ಮನೆ ಬಳ್ಳಾರಿಗೆ ಮುಕ್ತ ಪ್ರವೇಶ ಮಾಡುತ್ತಿರುವುದು ಸಂತಸ ತಂದಿದೆ.

ಕನ್ನಡಪ್ರಭ ವಾರ್ತೆ ಗಂಗಾವತಿ

ಕಳೆದ 14 ವರ್ಷಗಳ ನಂತರ ನನ್ನ ತವರು ಮನೆ ಬಳ್ಳಾರಿಗೆ ಮುಕ್ತ ಪ್ರವೇಶ ಮಾಡುತ್ತಿರುವುದು ಸಂತಸ ತಂದಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಸುಪ್ರಿಂಕೋರ್ಟ್ ಬಳ್ಳಾರಿ ಪ್ರವೇಶಕ್ಕೆ ಹಸಿರು ನಿಶಾನೆ ತೋರಿಸಿದ ಹಿನ್ನೆಲೆ ನಗರದ ಪ್ರಸಿದ್ಧ ದೇಗುಲಗಳಲ್ಲಿ ಪೂಜೆ ಸಲ್ಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ನನ್ನ ಜನ್ಮ ಸ್ಥಳ ಬಳ್ಳಾರಿಗೆ ಹೋಗುತ್ತಿರುವುದು ನನಗೆ ಎಲ್ಲಿಲ್ಲದ ಸಂಭ್ರಮ ಉಂಟಾಗಿದೆ ಎಂದ ಅವರು, ಹುಟ್ಟುರು ಬಿಟ್ಟು ಬದುಕೋ ಸ್ಥಿತಿ ಯಾವ ಶತ್ರುವಿಗೂ ಬರಬಾರದು ಎಂದು ನೋವಿನಿಂದ ಮಾತನಾಡಿದರು.

ಗಂಗಾವತಿ ನನಗೆ ರಾಜಕೀಯ ಪುನರ್ಜನ್ಮ ನೀಡಿದೆ. ಅದರಲ್ಲೂ ಹನುಮಂತನ ಜನ್ಮ ಸ್ಥಳದಲ್ಲಿ ನಾನು ಗೆದ್ದು ರಾಜಕೀಯ ಪ್ರವೇಶ ಮಾಡಿದ್ದೇನೆ. ಗಂಗಾವತಿಯನ್ನು ಎಂದೂ ಮರೆಯುವುದಿಲ್ಲ ಎಂದರು. ಬಳ್ಳಾರಿ ಪ್ರವೇಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಗಂಗಾವತಿಯಲ್ಲಿ ಗಣಪತಿ ಮುಂದೆ ಕಾಯಿ ಇಟ್ಟು ಪೂಜೆ ಸಲ್ಲಿಸಿದ್ದೆ. ಗಣಪತಿ ನಮ್ಮ ರಕ್ಷಕ ಎಂದರು. ಬಳ್ಳಾರಿಯಲ್ಲಿ ಮತ್ತೆ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟುತ್ತೇನೆ. ಮೊದಲಿನಂತೆ ಬಳ್ಳಾರಿಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ನಾಳೆಯಿಂದ ಸಂಡೂರು ಕ್ಷೇತ್ರದ ಚುನಾವಣಾ ಪ್ರಚಾರ ಆರಂಭ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸುತ್ತೇನೆ ಎಂದರು.

ನಾವು ಯಾವುದೇ ತಪ್ಪು ಮಾಡದೇ ಇದ್ದರು ಸಹ ನಮ್ಮ ಮೇಲೆ ಆರೋಪ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನಕ್ಕಾಗಿ ಸ್ವಾರ್ಥದಿಂದ ಪಾದಯಾತ್ರೆ ಮಾಡಿದರು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗರಣದಲ್ಲಿ ಸಿಲುಕಿ ಮನಃಶಾಂತಿ ಕಳೆದು ಕೊಂಡಿದ್ದಾರೆ. ಈ ಹಿಂದೆ ಜನಾರ್ದನ ರೆಡ್ಡಿ, ಯಡಿಯೂರಪ್ಪ ವಿರುದ್ಧ ಸಿಬಿಐ ಕೇಸ್ ಹಾಕಬೇಕು ಅಂತ ಸಿದ್ದರಾಮಯ್ಯ ಒತ್ತಾಯಿಸಿದ್ದರು. ಆ ಸಂದರ್ಭ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರು ತಮಗೆ ಮತ್ತು ಯಡಿಯೂರಪ್ಪ ಅವರಿಗೆ ಕರೆ ಮಾಡಿ ಆರೋಪ ಮುಕ್ತವಾಗುವವರೆಗೂ ರಾಜೀನಾಮೆ ನೀಡಲು ಹೇಳಿದ್ದರು. ಅವರ ಮಾತಿಗೆ ಗೌರವ ಕೊಟ್ಟು ಅಂದು ನಾವು ನಗುತ್ತಲೇ ಹೋಗಿ ರಾಜೀನಾಮೆ ನೀಡಿದ್ದೆವು. ಆದರೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಮುಂದಾಗುತ್ತಿಲ್ಲ. ಮುಡಾ ನಿವೇಶನ ಹಂಚಿಕೆ ಬಗ್ಗೆ ತನಿಖೆಯಾದರೆ ದೊಡ್ಡ ಹಗರಣ ಹೊರಬರುತ್ತದೆ ಎಂಬ ಭಯ ಇದ್ದಿದ್ದರಿರಂದ ರಾಜೇನಾಮೆ ನೀಡುತ್ತಿಲ್ಲ. ಇವರಿಗೆ ನೈತಿಕತೆ ಎನ್ನುವುದೇ ಇಲ್ಲ ಎಂದರು.