ಕನ್ನಡಪ್ರಭ ವಾರ್ತೆ ವಿಜಯಪುರ

ಹೈಕಮಾಂಡ್ ಹೇಳಿದಂತೆ ಕೇಳುವುದಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚಣೆ ಮಾಡಬೇಕೆಂಬ ನಿಯಮವಿಲ್ಲ. ಕ್ಯಾಬಿನೆಟ್‌ನಲ್ಲಿ ಯಾರನ್ನು ತೆಗೆದುಕೊಳ್ಳಬೇಕು ಯಾರನ್ನು ಬಿಡಬೇಕೆಂಬುದು ಮುಖ್ಯಮಂತ್ರಿ ಅವರ ಪರಮಾಧಿಕಾರ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಅವರು, ರಾಜ್ಯದಲ್ಲಿ ಸಿಎಂ, ಡಿಸಿಎಂ ಸ್ಥಾನ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಎಲ್ಲವೂ ಮಾಧ್ಯಮಗಳ ಸೃಷ್ಟಿ ಎಂದರು.

ಹಿರಿಯ ಶಾಸಕರು ದೆಹಲಿಗೆ ಹೋಗಿ ವರಿಷ್ಠರ ಭೇಟಿಯಾಗಿದ್ದೇವೆ. ಸಚಿವ ಸಂಪುಟ ವಿಚಾರವಾಗಿ ಹೋಗಿಲ್ಲ. ಅಭಿವೃದ್ಧಿ ಕೆಲಸ ಕಾಮಗಾರಿಗಳಿಗಾಗಿ ಹೋಗಿದ್ದೇವೆ. ಕೆಲ ಹಿರಿಯ ಶಾಸಕರಿಗೆ ವಿಸ್ತರಣೆ ಅಥವಾ ಪುನಾರಚನೆ ಮಾಡಬೇಕೆಂಬ ಅಪೇಕ್ಷೆಯಿದೆ. ಸರ್ಕಾರಕ್ಕೆ ಎರಡು ವರ್ಷ ಮಾತ್ರ ಅವಧಿಯಿದೆ. ಅದರಲ್ಲಿ ಒಂದು ವರ್ಷ ಚುನಾವಣೆಗೆ ಹೋಗುತ್ತದೆ. ಇಷ್ಟು ಸಮಯದಲ್ಲಿ ಏನು ಮಾಡಲಾಗುತ್ತದೆ? ನನಗಂತೂ ಸಚಿವನಾಗೋ ಆಸಕ್ತಿ ಉಳಿದಿಲ್ಲ ಎಂದು ಹೇಳಿದರು.

ದೇಶದಲ್ಲಿ 22 ರಾಜ್ಯಗಳು ಅವರದ್ದೆ ಇವೆ. ದೇಶದಲ್ಲಿ ಅಘೋಷಿತ ಎಮರ್ಜೆನ್ಸಿ ನಿರ್ಮಾಣವಾಗಿದೆ. ಬಂಗಾಳ ಗೆದ್ದಿರೋದು ಹೇಗೆ ಎಂದು ಎಲ್ಲರಿಗೂ ಗೊತ್ತಿದೆ. ನೋಟ್ ಬಂದಿ ಬಗ್ಗೆಯೂ ಹೀಗೆ ಮಾತನಾಡಿದ್ದರು. ಪ್ರಧಾನ ಮಂತ್ರಿ ಎಲೆಕ್ಷನ್‌ಗಾಗಿ ಬಳಕೆ ಮಾಡಿಕೊಳ್ಳಬಾರದು. ಈ ದೇಶವನ್ನು ಆಳಲು ಬಾರದವರು ವಿಶ್ವಗುರು ಆಗಲು ಹೊರಟಿದ್ದಾರೆ. ಐಟಿ, ಇಡಿ, ಚುನಾವಣೆ ಆಯೋಗ ಸೇರಿದಂತೆ ಅನೇಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ರಾಜ್ಯಗಳಲ್ಲಿ ಅಧಿಕಾರ ಹಿಡಿಯುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಬೇಸಿಗೆ ಭವಣೆ, ಭೀಮಾನದಿಯಲ್ಲಿ ನೀರಿನ ಸಮಸ್ಯೆಗಳ ಕುರಿತು ಮಾತನಾಡಿ, ಭೀಮಾನದಿ ಬತ್ತಿದ ಕಾರಣ ಇಂಡಿ ಪಟ್ಟಣ ಹಾಗೂ ನದಿಪಾತ್ರದ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿತ್ತು. ಆದರೆ, ಸಕಾಲಕ್ಕೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ ನೀರು ಬಿಡುಗಡೆ ಮಾಡಲಾಗಿದೆ. ನನ್ನ, ನಮ್ಮ ಸರ್ಕಾರದ ಮನವಿಗೆ ಸ್ಪಂದಿಸಿರುವ ಮಹಾರಾಷ್ಟ್ರದ ಸರ್ಕಾರ ಬೇಸಿಗೆ ಅವಧಿಯಲ್ಲಿ ಭೀಮಾನದಿಗೆ ಉಜನಿ ಜಲಾಶಯದಿಂದ ನೀರು ಬಿಟ್ಟಿದೆ. ಸಕಾಲಕ್ಕೆ ನೀರು ಒದಗಿಸಿದ್ದರಿಂದ ಮಹಾರಾಷ್ಟ್ರದ ಕೊಲ್ಹಾಪೂರ ಶಾಸಕ ಹಾಗೂ ಸಂಸದರಿಗೆ ಮಹಾರಾಷ್ಟ್ರ ಸರ್ಕಾರಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಕೃತಜ್ಞತೆ ಸಲ್ಲಿಸಿದರು.


ಈ ಬಾರಿ ಏಪ್ರಿಲ್ 24ರಿಂದ ರಿಂದ ಮೇ 10ರ ರವರೆಗೆ ನಿತ್ಯ 600 ಕ್ಯೂಸೆಕ್ ನೀರು ಹರಿಸಿದ್ದಾರೆ. ಇಂಡಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಿಗೆ ನೀರು ಬಿಟ್ಟಿದ್ದು ಅನಕೂಲವಾಗಿದೆ. ನೀರು ಬಿಡದಿದ್ದರೆ ಬೇಸಿಗೆಯಲ್ಲಿ ತೀವ್ರ ನೀರಿನ ಸಮಸ್ಯೆಗೆ ಒಳಗಾಗುತ್ತಿದ್ದೇವು. ಇನ್ನು ಮಹಾರಾಷ್ಟ್ರ ಸರ್ಕಾರವೂ ಕೆಲ ಬೇಡಿಕೆ ಇಟ್ಟಿದೆ. ಮಹಾರಾಷ್ಟ್ರದ ಜತ್ ಭಾಗಕ್ಕೆ ನೀರಿನ ಸಮಸ್ಯೆಯಿದೆ, ಕೃಷ್ಣಾ ನದಿಯಿಂದ ಜತ್ ಭಾಗಕ್ಕೆ ನೀರು ನೀಡಬೇಕೆಂದು ಮನವಿ ಮಾಡಿದ್ದಾರೆ. ಇವೆಲ್ಲದಕ್ಕೂ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮುಂದಾಗಲಿದೆ. ಸೋದರ ರಾಜ್ಯದ ಮನವಿಗೆ ಸ್ಪಂದಿಸುತ್ತೇವೆ, ಬೇಸಿಗೆ ಕಾಲದಲ್ಲಿ ಭೀಮಾನದಿಗೆ ನೀರು ಬಿಟ್ಟಿದ್ದಕ್ಕೆ ಮತ್ತೊಮ್ಮೆ ಅಭಿನಂದನೆಗಳು ಎಂದರು.

ಶೀಘ್ರದಲ್ಲಿ ನಿಯೋಗ:

ನಮ್ಮ‌ ಪ್ರಯತ್ನ, ನಮ್ಮ ಸರ್ಕಾರದ ಪ್ರಯತ್ನ ಹಾಗೂ ಮಹಾರಾಷ್ಟ್ರದ ಪ್ರಾಂಜಲ ಮನಸಿನಿಂದ ಈಗಾಗಲೇ ಭೀಮಾ ನದಿಗೆ ಎರಡು ಬಾರಿ ನೀರು ಬಂದಿದೆ. ಆದರೆ ಭೀಮಾ ನದಿಯ ನೀರಿನ ಶಾಶ್ವತ ಪರಿಹಾರಕ್ಕಾಗಿ ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ನಿಯೋಗ ಹೋಗಲಿದ್ದೇವೆ. ಏಕೆಂದರೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಇದರಿಂದ ಅನುಕೂಲ ಆಗುವುದರಿಂದ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

ತಾಲೂಕಿನಾದ್ಯಂತ ಕೆರೆ ತುಂಬುವ ಯೋಜನೆಯಲ್ಲಿ ಕೆರೆಗಳನ್ನು ತುಂಬಿಸಿದ್ದರಿಂದ ನೀರಿನ ಭವಣೆ ನೀಗಿದ್ದು, ಟ್ಯಾಂಕರ್‌ನಿಂದ ನೀರು ಹಾಕುವ ಸಮಸ್ಯೆ ತಪ್ಪಿದೆ. ಮುಖ್ಯಮಂತ್ರಿ ಅವರನ್ನು ಕರೆಸಿ ₹ 4 ಸಾವಿರ ಕೋಟಿ ನೀರಾವರಿ ಯೋಜನೆಗಳಿಗೆ ಚಾಲನೆ ಕೊಡಿಸಿದ್ದು, ಆ ಯೋಜನೆಗಳ ಕಾಮಗಾರಿಗಳು ಆರಂಭವಾಗಿವೆ. ವಿದ್ಯುತ್ ಸೌಲಭ್ಯಕ್ಕಾಗಿ ಇಂಡಿ ತಾಲೂಕಿನಲ್ಲಿ 13 ಪವರ್‌ ಸ್ಟೇಷನ್‌ಗಳನ್ನು ನಿರ್ಮಿಸಲಾಗುತ್ತಿದೆ. ಶೈಕ್ಷಣಿಕ ಅಭಿವೃದ್ಧಿಗಾಗಿ ತಾಲೂಕಿನಲ್ಲಿ ಹತ್ತಾರು ಪಿಯು ಕಾಲೇಜುಗಳನ್ನು ಮಾಡಲಾಗಿದೆ. ಈ ಬಾರಿ ಹಡಲಸಂಗ, ಶಿರಶ್ಯಾಡ, ಬಸನಾಳ ಗ್ರಾಮಗಳಲ್ಲಿ ಹೊಸದಾಗಿ ಮೂರು ಪಿಯು ಕಾಲೇಜುಗಳನ್ನು ಅನುಮೋದಿಸಲಾಗಿದೆ. ಅಭಿವೃದ್ಧಿಗೆ ಸಹಕರಿಸಿದ ಸಿಎಂ, ಡಿಸಿಎಂ ಹಾಗೂ ಶಿಕ್ಷಣ ಸಚಿವರು ಮತ್ತು ಸಹಕರಿಸಿದ ಎಲ್ಲ ಇಲಾಖೆಗಳ ಸಚಿವರಿಗೆ ಅಭಿನಂದಿಸುತ್ತೇನೆ ಎಂದರು.

ಕೊರೋನಾದಲ್ಲಿ ದೀಪ ಹಚ್ಚಿ ಎಂದ್ರು, ಇಂತಹ ವಿಜ್ಞಾನದಲ್ಲಿ ಆ ಕಾಲಕ್ಕೆ ಹೋದ್ರೆ ಹೇಗೆ. ತ್ಯಾಗ ಮಾಡಿ ಎಂದು ಮೋದಿ ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ. ರಾಜ್ಯಕ್ಕೆ ಬಂದು ಮುಖ್ಯಮಂತ್ರಿ ಕುರ್ಚಿ ಕದನದ ಬಗ್ಗೆ ಮಾತನಾಡ್ತಿದ್ದಾರೆ. ಮೋದಿ ವಿವೇಚನೆ ಇಲ್ಲದೆ ಮಾತನಾಡಿದ್ದಾರೆ. ಪ್ರಧಾನಿಯಾಗಿ ಹೀಗೆ ಮಾತನಾಡಬಾರದಿತ್ತು, ಮೋದಿ ಹೇಳಿಕೆಯಿಂದ ಜನರಲ್ಲಿ ಅಭದ್ರತೆ ಕಾಡಲು ಶುರುವಾಗುತ್ತದೆ. ಮೋದಿಯಲ್ಲಿ ನಿಭಾಯಿಸೋ ಕೆಪಾಸಿಟಿ ಇರಬೇಕು, ಅಂದ ಭಕ್ತರು ವಿಶ್ವಗುರು ಅನ್ತಾರೆ.

-ಯಶವಂತರಾಯಗೌಡ ಪಾಟೀಲ, ಶಾಸಕ, ಇಂಡಿ