ಕನ್ನಡಪ್ರಭ ವಾರ್ತೆ ರಾಮದುರ್ಗ ನಾನು ದಲಿತರ ವಿರೋಧಿಯಲ್ಲ, ರಾಜ್ಯದ ದಲಿತ ನಾಯಕರ ಮನೆಗಳಲ್ಲಿಯೇ ಬೆಳೆದಿದ್ದೇನೆ. ಕಳೆದ ಸಭೆಗೆ ಬರಬೇಕೆಂದರೆ ರೈತರ ಪ್ರತಿಭಟನೆಯಲ್ಲಿ ಸಿಲುಕಿದ್ದರಿಂದ ಬರಲಾಗಿಲ್ಲ. ಈ ಬಗ್ಗೆ ಅನ್ಯತಾ ಭಾವಿಸಬಾರದು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ನಾನು ದಲಿತರ ವಿರೋಧಿಯಲ್ಲ, ರಾಜ್ಯದ ದಲಿತ ನಾಯಕರ ಮನೆಗಳಲ್ಲಿಯೇ ಬೆಳೆದಿದ್ದೇನೆ. ಕಳೆದ ಸಭೆಗೆ ಬರಬೇಕೆಂದರೆ ರೈತರ ಪ್ರತಿಭಟನೆಯಲ್ಲಿ ಸಿಲುಕಿದ್ದರಿಂದ ಬರಲಾಗಿಲ್ಲ. ಈ ಬಗ್ಗೆ ಅನ್ಯತಾ ಭಾವಿಸಬಾರದು ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬುಧವಾರ ನಡೆದ ದಲಿತರ ಹಕ್ಕು ಸಂರಕ್ಷಣಾ ಸಮಿತಿ ಸಭೆಯಲ್ಲಿ ಕಳೆದ ಸಭೆಯಲ್ಲಿ ದಲಿತರ ಬಹಿಷ್ಕಾರ ಕುರಿತು ಸ್ಪಷ್ಟನೆ ನೀಡಿದರು ಅವರು, ಕಳೆದ ಸಭೆಯಲ್ಲಿ ಶಾಸಕರು ಜಾತಿ ಪದ್ಧತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ನಾನೆಂದೂ ಜಾತಿಯತೆ ಮಾಡುವುದಿಲ್ಲ. ನಮ್ಮ ಮನೆಯಲ್ಲಿ ಎಲ್ಲರೂ ಬಂದು ಹೋಗುತ್ತಾರೆ. ಯಾರಿಗೂ ಸೀಮೆ ಹಾಕಿ ಪ್ರತ್ಯೇಕತೆ ಮಾಡಿಲ್ಲ. ಎಲ್ಲರೂ ನಮ್ಮ ಅಡುಗೆ ಮನೆಗೂ ಬರುತ್ತಾರೆ ಎಂದರು.ದಲಿತರ ಹಕ್ಕು ಸಂರಕ್ಷಣಾ ಸಮಿತಿ ಸಭೆಗೆ ತಹಸೀಲ್ದಾರ್‌ರು ಅಧ್ಯಕ್ಷರು. ನಾನು ಸಾಮಾನ್ಯ ಸದಸ್ಯ. ನನ್ನ ಅನುಪಸ್ಥಿತಿಯಲ್ಲಿಯೂ ಸಭೆ ನಡೆಸಬಹುದಿತ್ತು. ನನ್ನ ಬಗ್ಗೆ ಆಪಾದನೆ ಮಾಡುವುದು ಸೂಕ್ತವಲ್ಲ. ದಲಿತರ ಬಗ್ಗೆ ಎಂದಿಗೂ ನಿರ್ಲಕ್ಷ ತೋರಿಲ್ಲ. ಎಲ್ಲವನ್ನು ಮರೆತು ಎಲ್ಲರೂ ಅಭಿವೃದ್ಧಿ ಕಡೆಗೆ ಗಮನ ಕೊಡಬೇಕು. ಎಂದಿಗೂ ದಲಿತರನ್ನು ನಾನು ಕಡೆಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ದಲಿತರು ಠಾಣೆಗೆ ಬಂದರೆ ಅವರ ವಿರುದ್ಧವಾಗಿಯೇ ಪ್ರಕರಣ ದಾಖಲಿಸಿ ಪೊಲೀಸರು ಸವರ್ಣೀಯರನ್ನು ಎತ್ತಿ ಕಟ್ಟಲಾಗುತ್ತಿದೆ. ಕಳೆದ ಕೆಲ ತಿಂಗಳ ಹಿಂದೆ ಗೊಡಚಿಯಲ್ಲಿ ನಡೆದ ದೌರ್ಜನ್ಯ ಪ್ರಕರಣದಲ್ಲಿ ದಲಿತ ಯುವಕನ ಮೇಲೆಯೇ ಪೋಕ್ಸೋ ಪ್ರಕರಣ ದಾಖಲಾಗಿ ದಲಿತರೊಬ್ಬರು ಜೈಲಿನಲ್ಲಿದ್ದಾರೆ ಎಂದು ಬಿ.ಆರ್.ದೊಡಮನಿ ಸಭೆಯ ಗಮನಕ್ಕೆ ತಂದರು. ಪುರಾವೆಗಳು ಸಿಕ್ಕ ನಂತರವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಗಳನ್ನು ಸುದೀರ್ಘವಾಗಿ ಪರಿಗಣಿಸಿ ತಿರಸ್ಕರಿಸುವ ಇಲ್ಲವೇ ಪುಷ್ಟಿಕರಿಸುವ ಅಧಿಕಾರ ತನಿಖಾಧಿಕಾರಿಗೆ ಇರುತ್ತದೆ. ಅಲ್ಲಿಯ ತನಕ ತಾಳ್ಮೆ ಇರಬೇಕು ಎಂದು ಡಿವೈಎಸ್‌ಪಿ ಚಿದಂಬರ ಮಡಿವಾಳರ ಉತ್ತರಿಸಿದರು.ಹಾಲೊಳ್ಳಿ ಗ್ರಾಮದ ಪರಿಶಿಷ್ಠ ಜನಾಂಗದ ಕಾಲೋನಿಗೆ ಕುಡಿಯುವ ನೀರು ಪೂರೈಕೆ ಮತ್ತು ಚರಂಡಿ ಕಾಮಗಾರಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಾಪಂ ಇಒ ಬಸವರಾಜ ಐನಾಪೂರ ಸಭೆಗೆ ಮಾಹಿತಿ ನೀಡಿದರು.ಲಂಬಾಣಿ ತಾಂಡಾಗಳು ಕಂದಾಯ ಗ್ರಾಮಗಳೆಂದು ಹಕ್ಕುಪತ್ರ ನೀಡಿದ್ದರೂ ಇ-ಸ್ವತ್ತು ಉತಾರ ಲಭಿಸುತ್ತಿಲ್ಲ ಎಂದು ಸಭೀಕರು ಪ್ರಶ್ನಿಸಿದಾಗ ಕೆಲವೊಂದು ತಾಂತ್ರಿಕ ತೊಂದರೆಗಳಿಂದಾಗಿ ವಿಳಂಬವಾಗಿದೆ. ಹೊಸದಾಗಿ 9 ಕಂದಾಯ ಗ್ರಾಮ ಹಾಗೂ ಎರಡು ಉಪಗ್ರಾಮಗಳ ಘೋಷಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಇ-ಸ್ವತ್ತು ಉತಾರಗಳನ್ನು ನೀಡಲು ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ತಿಳಿಸಿದರು/.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹನಮಂತ ವಕ್ಕುಂದ ಸ್ವಾಗತಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು, ದಲಿತ ಸಂಘಟನೆಗಳ ನಾಯಕರು ಸಭೆಯಲ್ಲಿ ಹಾಜರಿದ್ದರು.