ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ನಾನು ಯಾವ ಜನಾಂಗದ ವಿರೋಧಿಯೂ ಅಲ್ಲ, ಬಸವ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಮಾಜಿ ಶಾಸಕ ನಿರಂಜನ್ ಕುಮಾರ್ ನನ್ನನ್ನು ದಲಿತ ವಿರೋಧಿ ಪಟ್ಟ ಕಟ್ಟಲು ಪ್ರಯತ್ನಿಸಿದ್ದಾರೆ. ನಿಜವಾದ ದಲಿತ ವಿರೋಧಿ ಅವರೇ ಎಂದು ಪ್ರತಿ ದಾಳಿ ನಡೆಸಿದರು.
ತಾಲೂಕಿನ ಅರೇಪುರದಲ್ಲಿ ದಲಿತರಿಗೆ ಸೇರಿದ ಜಾಗದಲ್ಲಿ ಕೆಇಬಿ ಸಬ್ ಸ್ಟೇಷನ್ ಮಂಜೂರು ಮಾಡಿಸಿದ್ದಾರೆ. ದಿ.ಎಚ್.ಎಸ್.ಮಹದೇವಪ್ರಸಾದ್ ಕಾಲದಲ್ಲಿ ಬೊಮ್ಮನಹಳ್ಳಿಗೆ ಮಂಜೂರಾದ ಅಂಬೇಡ್ಕರ್ ವಸತಿ ನಿಲಯ ಕಟ್ಟಡದ ಕಾಮಗಾರಿಗೆ ಇವರ 5ವರ್ಷದ ಕಾಲದಲ್ಲಿ ಗುದ್ದಲಿ ಪೂಜೆ ಮಾಡಲಿಲ್ಲ. ಬೇಗೂರು, ಹಂಗಳ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವ ಪ್ರಯತ್ನ ಮಾಡಲಿಲ್ಲ ಎಂದ ಮೇಲೆ ಇವರು ತಾನೇ ದಲಿತ ವಿರೋಧಿ ಎಂದು ಜರಿದರು.ಬೆಂಡಗಳ್ಳಿಯಲ್ಲಿ ಶಿಷ್ಟಾಚಾರದಂತೆ ಅಂಬೇಡ್ಕರ್ ಭವನ ಉದ್ಘಾಟನೆಗೆ ನಾನು ಶಾಸಕನಾಗಿ ಹೋದರೆ ಮಾಜಿ ಶಾಸಕರು ಮತ್ತವರ ಬೆಂಬಲಿಗರು ಗಲಾಟೆಗೆ ಬಂದರು. ಮಾಜಿ ಶಾಸಕರಿಗೆ ಅಂಬೇಡ್ಕರ್ ಭವನ ಉದ್ಘಾಟನೆಗೆ ಅಧಿಕಾರವಿದೆಯಾ ಎಂದು ಪ್ರಶ್ನಿಸಿದರು. ಡಾ.ಗೀತಾ ಮಹದೇವಪ್ರಸಾದ್ ಶಾಸಕರಾದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳನ್ನು ನೀವು ಉದ್ಘಾಟಿಸಿದಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಲಿಲ್ಲ. ನೀವೇಕೆ ಪಕ್ಷದ ಕಾರ್ಯಕ್ರಮದಂತೆ ಉದ್ಘಾಟಿಸಲು ಬಂದಿದ್ದರಲ್ಲ ಎಂದು ಹರಿ ಹಾಯ್ದರು.
ಹಿರೀಕಾಟಿ ಬಳಿಯ ನಮ್ಮ ಕ್ರಷರ್‌ಗೆ ತೆರಳುವ ರಸ್ತೆ ನಕ್ಷೆಯಲ್ಲಿದೆ. ಅಲ್ಲದೆ ಅಕ್ಕ ಪಕ್ಕದ ರೈತರು ರಸ್ತೆ ಅಭಿವೃದ್ಧಿ ಪಡಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ರಸ್ತೆಯಾದರೇ ಕ್ರಷರ್‌ಗೂ, ಜನರಿಗೂ ಒಳ್ಳೆಯದಾಗುತ್ತೇ ಎಂದು ರಸ್ತೆ ಅಭಿವೃದ್ಧಿ ಪಡಿಸಲು ಹೊರಟರೆ ಹೊರಗಡೆಯಿಂದ ಜನ ಕರೆಯಿಸಿ ಪ್ರತಿಭಟನೆ ನಡೆಸುತ್ತಾರೆ ಎಂದರು.ದೌರ್ಜನ್ಯ ಮಾಡಿಲ್ಲ:
ಅಂಬೇಡ್ಕರ್ ಪರಿನಿರ್ವಾಣ ದಿನ ಸ್ವಲ್ಪ ತಡವಾಗಿ ಬಂದಾಗ ಪೂರ್ವ ನಿಯೋಜಿತವಾಗಿ ಚಿಕ್ಕಣ್ಣ ಎಂಬವರು ಏರು ಧ್ವನಿಯಲ್ಲಿ ಕೇಳಿದಾಗ ನಾನು ರೇಗಿದೆ ನಿಜ. ಆದರೆ ನನ್ನ ಬೆಂಬಲಿಗರು ಆಚೆಗೆ ಕಳುಹಿಸಿ ಎಂದಿದ್ದಾರೆ ಹೊರತು ದೌರ್ಜನ್ಯ ನಡೆಸಿಲ್ಲ ಎಂದು ಬಿಜೆಪಿಗರ ಆರೋಪಕ್ಕೆ ತಿರುಗೇಟು ನೀಡಿದರು.ಅನುಮತಿ ಇದೆ:
ನನ್ನ ಸಂಬಂಧಿಯೊಬ್ಬರು ಪುರಸಭೆ ಆಸ್ತಿ ಕಬಳಿಸಿದ್ದಾರೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಪುರಸಭೆ ಅನುಮತಿ ಪಡೆದು ಕಟ್ಟಡ ನಿರ್ಮಿಸುತ್ತಿದ್ದಾರೆ ಆದರೂ ಸುಖಾ ಸುಮ್ಮನೇ ಟೀಕೆ ಮಾಡುತ್ತಿದ್ದಾರೆ ಎಂದರು.ಏಕೆ ತನಿಖೆ ಮಾಡಿಸಲಿಲ್ಲ:
ಸಂಗಮ ಪ್ರತಿಷ್ಠಾನ ಪುರಸಭೆ ಜಾಗ ಲೀಸ್ ಪಡೆದಿದೆ. ಬಂದ ಆದಾಯದಲ್ಲಿ ಸಮಾಜ ಸೇವೆ ಉಪಯೋಗಕ್ಕೆ ಎಂದು ಬೈಲಾವಿದೆ. ಆದಾಯದಲ್ಲಿ ದೇವಸ್ಥಾನಗಳಿಗೆ ವಿನಿಯೋಗ ಮಾಡಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಜನರಲ್ಲಿ ಬೇಡ ಎಂದರು. ನೀವೇ 5 ವರ್ಷ ಶಾಸಕರಾಗಿದ್ರೀ, ನಿಮ್ಮ ಬೆಂಬಲಿಗರೇ ಪುರಸಭೆಯಲ್ಲಿ ಅಧಿಕಾರ ನಡೆಸಿದ್ದಾರೆ. ಆ ಕಾಲದಲ್ಲೇಕೆ ಸಂಗಮ ಪ್ರತಿಷ್ಠಾನದ ಮೇಲೆ ತನಿಖೆ ಏಕೆ ಮಾಡಿಸಲಿಲ್ಲ ಎಂದು ಬಿಜೆಪಿಗರನ್ನು ಪ್ರಶ್ನಿಸಿದರು.ಸುಮ್ಮನೇ ಕೂತಿಲ್ಲ: ನಾನು ಶಾಸಕನಾದ ಬಳಿಕ ಕ್ಷೇತ್ರದಲ್ಲಿ ನೂರು ಕೋಟಿಗೂ ಹೆಚ್ಚು ಅನುದಾನ ಬಂದಿದೆ. ಬಂದ ಅನುದಾನದಲ್ಲಿ ಕೆಲಸಗಳು ಪ್ರಗತಿಯಲ್ಲಿವೆ. ನಿಮ್ಮ ಯೋಗ್ಯತೆಗೆ ನಿಮ್ಮ ಕಾಲದಲ್ಲಿ ಪಟ್ಟಣದ ಹೆದ್ದಾರಿ ಬದಿ ನಿರ್ಮಿಸಿದ ಚರಂಡಿ ಎಷ್ಟು ಗುಂಡಿ ಬಿದ್ದಿವೆ ಗೊತ್ತಾ? ಎಂದು ನಿರಂಜನ್‌ಗೆ ಚುಚ್ಚಿದರು.
೮ ಸಚಿವರು ಬಂದ್ರು:ನಾನು ಶಾಸಕನಾದ ಬಳಿಕ ಕ್ಷೇತ್ರಕ್ಕೆ ಸಚಿವರಾದ ಸತೀಶ್ ಜಾರಕಿ ಹೊಳಿ, ಈಶ್ವರ್ ಖಂಡ್ರೆ, ಬೈರತಿ ಸುರೇಶ್, ನಾಗೇಂದ್ರ, ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಕೃಷ್ಣಬೈರೇಗೌಡ, ಶಿವಾನಂದ ಪಾಟೀಲ್ ಕರೆತಂದು ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡಿಸಿದ್ದೇನೆ. ನಿಮ್ಮ ಕಾಲದಲ್ಲಿ ಎಷ್ಟು ಜನ ಮಂತ್ರಿಗಳನ್ನು ಕ್ಷೇತ್ರಕ್ಕೆ ಕರೆ ತಂದಿದ್ದೀರಿ ಎಂದು ಕಿಡಿ ಕಾರಿದರು. ನನ್ನ ಹುಟ್ಟು ಹಬ್ಬಕ್ಕೆ ಮೆರವಣಿಗೆ ಬೇಡ
ಡಿ.೨೬ಕ್ಕೆ ನನ್ನ ಜನ್ಮ ದಿನ. ಕ್ಷೇತ್ರದ ಕಾರ್ಯಕರ್ತರು ಆಡಂಬರದ ಹುಟ್ಟು ಹಬ್ಬ ಮಾಡಬೇಡಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮನವಿ ಮಾಡಿದರು.ನನ್ನ ಹುಟ್ಟು ಹಬ್ಬಕ್ಕೆ ಮೆರವಣಿಗೆ ಬೇಡ, ಹುಟ್ಟು ಹಬ್ಬದ ದಿನ ನನಗೂ ಸಮಯ ಇಲ್ಲ. ಜೆಎಸ್‌ಎಸ್ ರಂಗೋತ್ಸವ ಕಾರ್ಯಕ್ರಮವಿದೆ. ಹೋಬಳಿ ಕೇಂದ್ರಗಳಲ್ಲಿ ಕೇಕ್ ಕತ್ತರಿಸಿ ಬರುತ್ತೇನೆ ಎಂದರು.ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್‌ರ ಪುಣ್ಯ ಸ್ಮರಣೆ ಜ.೩ರಂದು ಹಾಲಹಳ್ಳಿ ನಡೆಯಲಿದೆ. ಪುಣ್ಯಾರಾಧನೆಗೆ ಕ್ಷೇತ್ರದ ಜನ ಆಗಮಿಸಿ ಎಂದರು.
ಅಗತಗೌಡನಹಳ್ಳಿ ಕ್ರಷರ್ ವಿಚಾರಕ್ಕೆ ಸಂಬಂಧ ಪ್ರತಿಕ್ರಿಯಿಸಿ, ನಾನು ಕ್ರಷರ್ ಮಾಲೀಕರ ಪರವೂ ಇಲ್ಲ, ವಿರುದ್ಧವೂ ಇಲ್ಲ. ಅನುಮತಿ ಇದ್ದರೆ ಮಾಡಲಿ ಎಂದು ಹೇಳಿದ್ದೇ ನಿಜ. ಗ್ರಾಮದ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ ಹಾಗಾಗಿ ಜನರ ಪರ ಇರುತ್ತೇನೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಜಿಲ್ಲಾ ಯೂನಿಯನ್ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ, ಪುರಸಭೆ ಅಧ್ಯಕ್ಷ ಕಿರಣ್ ಗೌಡ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲತಾ ಜತ್ತಿ, ಪ್ರಧಾನ ಕಾರ್ಯದರ್ಶಿ ಬಿ.ಕುಮಾರಸ್ವಾಮಿ ಇದ್ದರು.