ರಾಜಕೀಯ ಪ್ರಭಾವಕ್ಕೆ ಮಣಿದು ಕೆಲಸ ಮಾಡಿದರೆ ನಾನು ಸುಮ್ಮನಿರಲ್ಲ : ಶಾಸಕ ಆರಗ ಜ್ಞಾನೇಂದ್ರ

| Published : Nov 12 2024, 12:47 AM IST / Updated: Nov 12 2024, 11:52 AM IST

ರಾಜಕೀಯ ಪ್ರಭಾವಕ್ಕೆ ಮಣಿದು ಕೆಲಸ ಮಾಡಿದರೆ ನಾನು ಸುಮ್ಮನಿರಲ್ಲ : ಶಾಸಕ ಆರಗ ಜ್ಞಾನೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

 ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಮಣಿದು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ನಾನು ಸುಮ್ಮನಿರಲ್ಲ.  ಕ್ಷೇತ್ರದಲ್ಲಿ ಒಂದು ನಾನಿರಬೇಕು, ಇಲ್ಲ ಅಂತಹ ಅಧಿಕಾರಿಗಳಿರಬೇಕು. ನನಗೆ ಶಾಸಕ ಸ್ಥಾನ ದೊಡ್ದದಲ್ಲ. ನನ್ನ ಕಾರ್ಯಕರ್ತರೆ ನನಗೆ ದೊಡ್ಡವರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತೀರ್ಥಹಳ್ಳಿ: ಅಧಿಕಾರಿಗಳು ರಾಜಕೀಯ ಪ್ರಭಾವಕ್ಕೆ ಮಣಿದು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ನಾನು ಸುಮ್ಮನಿರಲ್ಲ. ಅಂತಹ ಅಧಿಕಾರಿಗಳಿಗೆ ಬುದ್ಧಿ ಕಲಿಸುವುದು ನನಗೆ ಗೊತ್ತಿದೆ. ಕ್ಷೇತ್ರದಲ್ಲಿ ಒಂದು ನಾನಿರಬೇಕು, ಇಲ್ಲ ಅಂತಹ ಅಧಿಕಾರಿಗಳಿರಬೇಕು. ನನಗೆ ಶಾಸಕ ಸ್ಥಾನ ದೊಡ್ದದಲ್ಲ. ನನ್ನ ಕಾರ್ಯಕರ್ತರೆ ನನಗೆ ದೊಡ್ಡವರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಸೋಮವಾರ ತಾಲೂಕಿನ ಮೇಗರವಳ್ಳಿಯಲ್ಲಿ ಆಗುಂಬೆ ವಲಯಾರಣ್ಯಧಿಕಾರಿ ಕಚೇರಿ ಮುಂಭಾಗ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸಭೆಯಲ್ಲಿ ಅರಣ್ಯ ಇಲಾಖೆ ಅಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಡಿಸಿಎಫ್‍ಓ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ ಎಂದು ಪಟ್ಟುಹಿಡಿದರು. ಕಡ್ತೂರು ಗ್ರಾಮದಲ್ಲಿ ಜನರ ಅನುಕೂಲಕ್ಕಾಗಿ ಅರೇಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ರಸ್ತೆ ದುರಸ್ತಿ ಕೆಲಸ ಮಾಡಿಸಿದ ಕಾರಣಕ್ಕೆ ಗ್ರಾಮ ಪಂಚಾಯಿತಿಯ 3 ಜನ ಸದಸ್ಯರ ಮೇಲೆ ಅರಣ್ಯ ನಾಶ ಕೃತ್ಯದ ಪ್ರಕರಣ ದಾಖಲಿಸಿರುವುದು ಸರಿಯೇ. ಮಾಜಿ ಶಾಸಕರು, ಮತ್ತವರ ಕಡೆಯವರ ಪ್ರಭವಕ್ಕೆ ಮಣಿದು ಪ್ರಕರಣ ದಾಖಲಿಸುವ ಅರಣ್ಯ ಇಲಾಖೆಗೆ ನಾಚಿಕೆ ಇಲ್ಲವೇ ಎಂದು ಪ್ರಶ್ನಿಸಿದರು.

ಪ್ರಮೋಷನ್ ಆಸೆಯಲ್ಲಿರುವ ಆಗುಂಬೆ ವಲಯಾರಣ್ಯಧಿಕಾರಿ ಕಾಂಗ್ರೆಸ್ ನಾಯಕರ ಮಾತಿಗೆ ಮಣೆ ಹಾಕಿ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿರುವ ಕುರಿತಂತೆ ಹಿರಿಯ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ನಿಮಗೆ ಸುಲಭದಲ್ಲಿ ಪ್ರಮೋಷನ್ ಆಗಲು ಬಿಡಲ್ಲ. 45 ವರ್ಷ ರಾಜಕಾರಣ ಮಾಡಿ ಗೃಹ ಸಚಿವ, ಶಾಸಕನಾದ ನನಗೂ ರಾಜಕೀಯ ಪ್ರಭಾವ ಇದೆ. ಅಧಿಕಾರಿಗಳ ಪ್ರಭಾವವೇ ಮೇಲಾಗುವುದಾದರೆ ಕಾರ್ಯಕರ್ತರಿಗಾಗಿ ಶಾಸಕ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದು ಕಿಡಿಕಾರಿದರು.

ರಸ್ತೆಗೆ ಹಳೆ ಹೆಂಡದಂಗಡಿ ಕಿರುಕುಳ: ಹಳೆ ಹೆಂಡದಂಗಡಿದವರು ಹೊಸ ಹೆಂಡದಂಗಡಿ ಜಾಗಕ್ಕೆ ಅರಣ್ಯ ಇಲಾಖೆ ಮೂಲಕ ಕಿರುಕುಳ ನೀಡಲು ಹೊರಟಿದ್ದಾರೆ. ಹಳೆಹೆಂಡದಂಗಡಿಯವರು ತಾಲೂಕಿನ ಎಲ್ಲಾ ಊರನ್ನು ಹೆಂಡದಂಗಡಿ ಮಾಡಿಕೊಂಡಿದ್ದಾರೆ. ರಸ್ತೆ ನಿರ್ಮಾಣ ಪ್ರದೇಶ ಕುರಿತಂತೆ ಕಂದಾಯ, ಅರಣ್ಯ ಇಲಾಖೆ ಜಂಟಿ ಸರ್ವೆ ಆಗಿಲ್ಲ. ಹಳೆಯ ಹೆಂಡದಂಗಡಿ ಕಟ್ಟಡ ಅರಣ್ಯ ಜಾಗದಲ್ಲಿದ್ದು ಇದರ ವಿರುದ್ಧ ಕ್ರಮ ಏಕಿಲ್ಲ. ಅರಣ್ಯ ಪ್ರದೇಶದ ಕುರಿತಂತೆ ಕ್ರಮಬದ್ಧ ದಾಖಲೆ ಇಲ್ಲದೆ ನಿವೇಶನ ಹಕ್ಕುಪತ್ರ ರದ್ದತಿಗೆ ಕಂದಾಯ ಇಲಾಖೆಗೆ ಪತ್ರ ಬರೆಯಲು ಅರಣ್ಯ ಇಲಾಖೆಗೆ ಅಧಿಕಾರ ಎಲ್ಲಿದೆ. ಕಿರುಕುಳ ನೀಡುವ ಉದ್ದೇಶದಲ್ಲಿ ಕಡತ ಸಿದ್ಧ ಪಡಿಸಿರುವುದು ಗಮನದಲ್ಲಿದ್ದು, ಆರ್‌ಎಫ್‌ಒ, ಡಿಆರ್‌ಎಫ್‍ಓ ಅವರನ್ನು ಸುಮ್ಮನೆ ಬಿಡಲ್ಲ ಎಂದು ಆರಗಜ್ಞಾನೇಂದ್ರ ಹೇಳಿದರು.

ಅಧಿಕಾರಿಗಳ ಸಮಜಾಯಿಷಿ: ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣದ ಕುರಿತಾಗಿ ಸಾರ್ವಜನಿಕರಿಂದ ಲಿಖಿತ ದೂರು ಬಂದಿತ್ತು. ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ, ಗ್ರಾ.ಪಂ.ಪಿಡಿಒ ಅವರಿಂದ ಮಾಹಿತಿ ಪಡೆಯಲಾಗಿದೆ. ಗ್ರಾ.ಪಂ. ಸದಸ್ಯರು ಕಾಮಗಾರಿ ಮಾಡಿಸಿದ್ದು, ಗ್ರಾ.ಪಂ. ಅನುದಾನ ನೀಡಿಲ್ಲ ಎಂದು ಪಿಡಿಒ ತಿಳಿಸಿದ್ದಾರೆ.

ಒಂದಿಷ್ಟು ಸ್ಥಳೀಯ ಸಾರ್ವಜನಿಕರು ಇದೇ ಮಾಹಿತಿ ನೀಡಿದ್ದು ದೂರು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಎಫ್‌ಒ ಹೇಮಗಿರಿ ಅಂಗಡಿ, ಡಿಆರ್‌ಎಫ್‌ಒ ಯಲ್ಲಪ್ಪ ಸಮಜಾಯಿಷಿ ನೀಡಿದರು. ಇದಕ್ಕೆ ಸಿಟ್ಟಾದ ಆರಗ ಜ್ಞಾನೇಂದ್ರ ಗ್ರಾ.ಪಂ.ರಸ್ತೆ ಅಭಿವೃದ್ಧಿಗೆ 5 ಸಾವಿರ ರೂಪಾಯಿ ಅನುದಾನ ಮೀಸಲಿಟ್ಟು ಕ್ರಿಯಾಯೋಜನೆ ಸಿದ್ಧಪಡಿಸಿ ನಿರ್ಣಯ ಸ್ವೀಕರಿಸಿದ ದಾಖಲೆ ತೋರಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಮೇಗರವಳ್ಳಿ, ಮುರುಳೀಧರ್‌, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್‍ಕುಕ್ಕೆ, ತಾಲೂಕು ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಟಿ.ಜೆ.ಅನಿಲ್, ಮುಖಂಡ ಚಂದವಳ್ಳಿ ಸೋಮಶೇಖರ್ ಮಾತನಾಡಿದರು.

ಮುಖಂಡರಾದ ಚಕ್ಕೊಡಬೈಲು ರಾಘವೇಂದ್ರ, ಹಸಿರುಮನೆ ಚಂದ್ರಶೇಖರ್, ಕಡ್ತೂರು ಯಶಸ್ವಿ ಮತ್ತಿತರರಿದ್ದರು.

ಡಿಸಿಎಫ್‍ಓ ಭರವಸೆ ಗ್ರಾ.ಪಂ.ಅನುದಾನದಲ್ಲಿ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಿದ್ದರೆ ಪಂಚಾಯಿತಿ ಸದಸ್ಯರ ಮೇಲಿನ ಪ್ರಕರಣ ರದ್ದುಪಡಿಸಲು ಕ್ರಮವಹಿಸಲಾಗುತ್ತದೆ. ಪಂಚಾಯಿತಿ ಸದಸ್ಯರು ವೈಯುಕ್ತಿಕವಾಗಿ ರಸ್ತೆ ಮಾಡಿಸಿದ್ದರೆ ಪ್ರಕರಣ ರದ್ದು ಸಾಧ್ಯವಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಡಿಸಿಎಫ್‍ಓ ಶಿವಶಂಕರ್ ಭರವಸೆ ನೀಡಿದರು.