ನಾನು ಚನ್ನಪಟ್ಟಣ ಬಿಟ್ಟು ಹೋಗುವವನಲ್ಲ: ಡಿಕೆ ಶಿವಕುಮಾರ್

| Published : Jun 25 2024, 12:33 AM IST / Updated: Jun 25 2024, 12:52 PM IST

ನಾನು ಚನ್ನಪಟ್ಟಣ ಬಿಟ್ಟು ಹೋಗುವವನಲ್ಲ: ಡಿಕೆ ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ನಾನು ಈ ಭಾಗದ ಶಾಸಕನಾಗಿದ್ದಾಗ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ, ಪರಿಹರಿಸುವ ಕೆಲಸ ಮಾಡುತ್ತಿದ್ದೆ. ಇಂದಿಗೂ ಇಲ್ಲಿ ಅದೇ ಪರಿಸ್ಥಿತಿ ಇದೆ.  

  ಚನ್ನಪಟ್ಟಣ :  ಇತ್ತೀಚಿಗೆ ಚನ್ನಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ತಾಲೂಕಿನಲ್ಲಿ ಎಷ್ಟು ನಿವೇಶನ, ಬಗರ್‌ಹುಕುಂ ಸಾಗುವಳಿ ಜಮೀನು ಹಂಚಲಾಗಿದೆ. ಅದಕ್ಕಾಗಿ ಎಷ್ಟು ಸಭೆ ನಡೆಸಲಾಗಿದೆ, ಎಷ್ಟು ಬಡವರಿಗೆ ಸಾಲ ನೀಡಲಾಗಿದೆ ಎಂಬ ಮಾಹಿತಿ ಕೇಳಿದೆ. ಅಧಿಕಾರಿಗಳು ಜಮೀನು, ಸೈಟ್, ಸಾಲ ನೀಡಿಲ್ಲ. ಬಗರ್ ಹುಕುಂ ಸಭೆ ನಡೆಸಲಾಗಿಲ್ಲ ಎಂದರು. ಬಡವರ ಜೀವದಲ್ಲಿ ಬದಲಾವಣೆ ತರದಿದ್ದ ಮೇಲೆ ಶಾಸಕರಾಗಿ ಏನು ಪ್ರಯೋಜನ. ನಾವ್ಯಾಕೆ ಶಾಸಕರಾಗಿ ಇರಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪರೋಕ್ಷ ಟಾಂಗ್ ನೀಡಿದರು.

ತಾಲೂಕಿನ ಹುಣಸನಹಳ್ಳಿ ಹಾಗೂ ಅಕ್ಕೂರು ಗ್ರಾಮಗಳಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳ ಸಭೆಯಲ್ಲಿ ಅನೇಕ ವಿಚಾರಗಳು ತಿಳಿದುಬಂದವು. ನನಗೆ ರಾಜಕಾರಣ ಮುಖ್ಯವಲ್ಲ, ಜನರ ಋಣ ತೀರಿಸಲು ಇಲ್ಲಿಗೆ ಬಂದಿದ್ದು, ಸಾಕಷ್ಟು ಸಮಸ್ಯೆಗಳನ್ನು ಜನ ಹೇಳಿಕೊಳ್ಳುತ್ತಿದ್ದಾರೆ, ಕೆಲವರು ಇದಕ್ಕೆ ಟೀಕೆ ಮಾಡುತ್ತಾರೆ, ಮಾಡಲಿ. ಜನರ ದುಗುಡುಗಳು ಅವರಿಗೆ ಅರ್ಥ ಆಗಲ್ಲ. ನಾನು ಚನ್ನಪಟ್ಟಣ ಬಿಟ್ಟು ಹೋಗುವವನಲ್ಲ, ನಿಮ್ಮ ಜತೆ ಇದ್ದು, ನಿಮ್ಮ ಬದುಕಿನಲ್ಲಿ ಬದಲಾವಣೆ ತರುತ್ತೇವೆ ಎಂದು ಘೋಷಿಸಿದರು.

ಹಿಂದಿನ ಪರಿಸ್ಥಿತಿಯೇ ಇದೆ:

ಈ ಹಿಂದೆ ನಾನು ಈ ಭಾಗದ ಶಾಸಕನಾಗಿದ್ದಾಗ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ, ಪರಿಹರಿಸುವ ಕೆಲಸ ಮಾಡುತ್ತಿದ್ದೆ. ಇಂದಿಗೂ ಇಲ್ಲಿ ಅದೇ ಪರಿಸ್ಥಿತಿ ಇದೆ. ಬೆಂಗಳೂರು ಸುತ್ತಲಿನ ೧೮ ಕ್ಷೇತ್ರಗಳಲ್ಲಿ ಅಲ್ಲಿನ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ. ನನಗೆ ರಾಜಕೀಯ ಮುಖ್ಯವಲ್ಲ. ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ ಎಂದರು.

ತಾಲೂಕಿನ ಹೊಂಗನೂರಿನಲ್ಲಿ ಡಾ. ವೆಂಕಟಪ್ಪನವರು ಮಾದರಿ ಶಾಲೆ ನಿರ್ಮಿಸುತ್ತಿದ್ದು, ಅದರಂತೆ ಎಲ್ಲ ಕಡೆ ಸಿಎಸ್‌ಆರ್ ನಿಧಿ ಬಳಸಿಕೊಂಡು ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಯೋಜನೆ ಇದೆ. ಆ ಮೂಲಕ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಟ್ಟಣಕ್ಕೆ ಹೋಗುವುದನ್ನು ತಪ್ಪಿಸಲಾಗುವುದು. ಸಂಸದರಾಗಿ ಡಿ.ಕೆ.ಸುರೇಶ್ ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದರು, ಕೇಂದ್ರೀಯ ವಿದ್ಯಾಲಯ ತಂದರು. ಆದರೆ, ಈ ಬಾರಿ ಅವರನ್ನು ಸಂಸದರಾಗಿ ನೀವು ಲೋಕಸಭೆಗೆ ಕಳುಹಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅರ್ಜಿ ಸ್ವೀಕಾರ ಕೊಠಡಿ ಆರಂಭ:

ಇಂದು ನಿಮ್ಮ ಮನೆಗೆ ಅರ್ಜಿ ಕಳುಹಿಸಿ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ನಿಮ್ಮ ಅರ್ಜಿಗಳನ್ನು ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ. ಇಂದು ಅರ್ಜಿ ನೀಡಲಾಗದವರಿಗೆ ಅನುಕೂಲ ಕಲ್ಪಿಸಲು ತಾಲೂಕು ಕಚೇರಿಯಲ್ಲಿ ಅರ್ಜಿ ಸ್ವೀಕಾರಕ್ಕೆ ಕೊಠಡಿ ತೆರೆಯುತ್ತೇವೆ. ಜನ ಪ್ರತಿನಿತ್ಯ ಅರ್ಜಿ ಸಲ್ಲಿಸಲು ಅನುಕೂಲ ಕಲ್ಪಿಸುತ್ತೇನೆ ಎಂದರು.

೧೦೦ ಕೋಟಿ ವಿಶೇಷ ಅನುದಾನ:

ಚನ್ನಪಟ್ಟಣದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ರಸ್ತೆ, ಚರಂಡಿ, ಶಾಲೆ, ಆಸ್ಪತ್ರೆಗಳ ನಿರ್ಮಾಣಕ್ಕೆ ಒತ್ತು ನೀಡುತ್ತೇನೆ. ಕನಿಷ್ಠ ೧೦೦ ಕೋಟಿ ವಿಶೇಷ ಅನುದಾನ ತಂದು ಕೆಲಸ ಮಾಡುತ್ತೇನೆ. ಕನಕಪುರದ ರೀತಿ ಚನ್ನಪಟ್ಟಣದಲ್ಲೂ ಬಡವರಿಗೆ ಸೈಟ್ ಹಂಚುತ್ತೇವೆ ಎಂದು ತಿಳಿಸಿದರು.

ಬ್ಯಾಡರಹಳ್ಳಿ ಗ್ರಾಪಂನಲ್ಲಿ ಖಾತೆಗೆ ಲಂಚ!: ಅಧ್ಯಕ್ಷೆ ಆರೋಪತಾಲೂಕಿನ ಜೆ.ಬ್ಯಾಡರಹಳ್ಳಿ ಗ್ರಾಪಂನಲ್ಲಿ ಅಧಿಕಾರಿಗಳು ಖಾತೆಗೆ ಲಂಚ ಪಡೆಯುತ್ತಿದ್ದಾರೆ. ಯಾವುದೇ ಕೆಲಸಗಳನ್ನು ಮಾಡಿಕೊಡದೇ ಜನರನ್ನು ಸತಾಯಿಸುತ್ತಿದ್ದಾರೆ ಎಂದು ಜೆ.ಬ್ಯಾಡರಹಳ್ಳಿ ಗ್ರಾಪಂ ಅಧ್ಯಕ್ಷೆ ಭವ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಎದುರು ವೇದಿಕೆಯಲ್ಲೇ ಗಂಭೀರ ಆರೋಪ ಮಾಡಿದರು.ಜನ ಸ್ಪಂದನಾ ಸಭೆಯಲ್ಲಿ ಡಿಸಿಎಂ ಅಹವಾಲು ಆಲಿಸುವ ವೇಳೆ ಶಿವಕುಮಾರ್ ಅವರಿಗೆ ತಮ್ಮ ಸಮಸ್ಯೆ ಹೇಳಿಕೊಂಡ ಭವ್ಯ, ಖಾತೆಗೆ 15 ರಿಂದ 20ಸಾವಿರ ಲಂಚ ಪಡೆಯುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಇಡೀ ತಾಲೂಕಿನಲ್ಲೇ ನಮ್ಮ ಜೆ.ಬ್ಯಾಡರಹಳ್ಳಿ ಪಂಚಾಯಿತಿಯಷ್ಟು ಕೆಟ್ಟ ಪಂಚಾಯಿತಿ ಯಾವುದೂ ಇಲ್ಲ ಎಂದು ಆರೋಪಿಸಿದರು. ಇದಕ್ಕೆ ಡಿಸಿಎಂ ಶಿವಕುಮಾರ್, ಖಾತೆಗೆ ಲಂಚ ಪಡೆಯುತ್ತಿರುವ ಕುರಿತು ಸಂಜೆಯೋಳಗೆ ಪರಿಶೀಲನೆ ನಡೆಸಿ, ತಪ್ಪು ಕಂಡು ಬಂದಲ್ಲಿ ಲಂಚ ಪಡೆದವರನ್ನು ಸಸ್ಪಂಡ್ ಮಾಡುವಂತೆ ಸಿಇಒಗೆ ತಾಕೀತು ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಶಾಸಕ ಎಸ್. ರವಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ್ ಭೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ತಹಸೀಲ್ದಾರ್ ನರಸಿಂಹಮೂರ್ತಿ, ಇಒ ಶಿವಕುಮಾರ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್ ಇತರರು ಇದ್ದರು.

‘ಬಾಗಿಲಿಗೆ ಬಂತು ಸರ್ಕಾರ’: ಇದು ನನ್ನ ಕನಸಿನ ಯೋಜನೆ:

‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಇದು ನನ್ನ ಕನಸಿನ ಯೋಜನೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಡೀ ರಾಜ್ಯದಲ್ಲಿ ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಜನರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಪಕ್ಷಾತೀತವಾಗಿ ಎಲ್ಲರೂ ಬಂದು ಸಮಸ್ಯೆ ಹೇಳಿಕೊಳ್ಳಿ. ಸದಾ ನಿಮ್ಮ ಸೇವೆಗೆ ಬಾಗಿಲು ತೆರೆದಿರುತ್ತದೆ. ಜನರ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತೆ ಎಂದರು.

ಚನ್ನಪಟ್ಟಣದಲ್ಲಿ ಜಮೀನು ಖರೀದಿಸಿ ನಿವೇಶನ ಹಂಚುವ ಕೆಲಸ ಮಾಡಲಾಗುವುದು. ಕನಕಪುರದ ಮಾದರಿಯಲ್ಲಿ ಇಲ್ಲೂ ಬಡವರಿಗೆ ನಿವೇಶನ ನೀಡಲಾಗುವುದು. ಚನ್ನಪಟ್ಟಣದಲ್ಲಿ ದೊಡ್ಡ ಕ್ರಾಂತಿ, ಬದಲಾವಣೆ ಆಗುತ್ತೆ. ಯಾರು ಏನು ಬೇಕಾದರೂ ಮಾತನಾಡಲಿ. ಇಷ್ಟು ದಿನ ಅಭಿವೃದ್ಧಿ ಮಾಡಬೇಡಿ ಅಂತ ಅವರಿಗೆ ಯಾರು ಹೇಳಿದ್ದರು. ಟೀಕೆ ಮಾಡುವವರು ಮಾಡಲಿ, ನಾವು ನಿಮ್ಮ ಕೆಲಸ ಮಾಡುತ್ತೇವೆ. ಹದಿನೈದು ದಿನಗಳಿಗೊಮ್ಮೆ ಸಭೆ ನಡೆಸಿ ಅರ್ಜಿ ಯಾವ ಹಂತದಲ್ಲಿದೆ ಎಂದು ಪರಿಶೀಲಿಸುತ್ತೇನೆ ಎಂದು ತಿಳಿಸಿದರು.