ಸಾರಾಂಶ
ತೀರ್ಥಹಳ್ಳಿ: ತೀರ್ಥಹಳ್ಳಿ ಪಪಂ ಅಧ್ಯಕ್ಷನಾಗಿ ಧರ್ಮ, ಜಾತಿ ರಾಜಕೀಯ ಮೀರಿ ಕಾಂಗ್ರೆಸ್ ಪಕ್ಷಕ್ಕೆ ಹೆಸರು ತರುವಂತೆ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ನನ್ನ ವಿರುದ್ಧ ಸ್ವಪಕ್ಷೀಯ ಸದಸ್ಯರೇ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದು, ಇದಕ್ಕಾಗಿ ಷಡ್ಯಂತ್ರ ರೂಪಿಸಿರುವ ಪಕ್ಷದ ಮುಖಂಡರು ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ ಎಂದು ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಪಕ್ಷದ ಮುಖಂಡತ್ವದ ವಿರುದ್ಧ ಹರಿಹಾಯ್ದರು.ಈ ತಿಂಗಳ 18 ರಂದು ನಿಗದಿಯಾಗಿರುವ ತಮ್ಮ ವಿರುದ್ಧದ ಅವಿಶ್ವಾಸ ಮಂಡನೆಯ ಸಭೆಯ ಹಿನ್ನೆಲೆಯಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿ ಕಳೆದ 14 ತಿಂಗಳುಗಳಿಂದ ನನ್ನ ಅಧಿಕಾರವಧಿಯಲ್ಲಿ ಧರ್ಮ, ಜಾತಿ ರಾಜಕೀಯ ಮೀರಿ ಪಕ್ಷಕ್ಕೆ ಹೆಸರು ತರುವಂತೆ ಕೋಟ್ಯಾಂತರ ರು ಅನುದಾನವನ್ನು ತಂದು ಕಾಮಗಾರಿಗಳನ್ನು ನಿರ್ವಹಿಸಿದ್ದೇನೆ. ಇಂದಿಗೂ ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿಯೇ ಇದ್ದೇನೆ. ಪಕ್ಷ ನೀಡುವ ವಿಪ್‍ಗೆ ಹೆದರಿ ಓಡಿ ಹೋಗುವ ವ್ಯಕ್ತಿ ನಾನಲ್ಲಾ ಎಂದು ಹೇಳಿದರು.ಪಟ್ಟಣದ ಅಭಿವೃದ್ಧಿ ಮಾಡಿರುವ ನಾನು ಮಾಡಿರುವ ಅಪರಾಧವಾದರೂ ಏನು ಎಂಬುದು ತಿಳಿದಿಲ್ಲಾ. ಪಕ್ಷದ ಕೆಲ ಮುಖಂಡರಿಗೆ ಬಕೆಟ್ ಹಿಡಿಯಲಿಲ್ಲ ಎಂಬ ಒಂದೇ ಕಾರಣಕ್ಕೆ ಅಧಿಕಾರ ಹಸ್ತಾಂತರದ ನೆಪದಲ್ಲಿ ನನ್ನ ವಿರುದ್ಧ ಷಡ್ಯಂತರ ರೂಪಿಸಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ನಾನು ಮುಸ್ಲೀಂ ಎಂಬ ಕಾರಣಕ್ಕೆ ಬೇರೆಯವರಿಗಿಲ್ಲದ ನಿಯಮ ಪಾಲನೆಗೆ ಮುಂದಾಗಿರುವ ಪಕ್ಷದ ನಾಯಕತ್ವ ಪಶ್ಚಾತ್ತಾಪ ಪಡುವ ದಿನ ದೂರವಿಲ್ಲಾ. ನನ್ನ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ನಂತರವೂ ನನ್ನ ವಿರುದ್ಧ ನಡೆದಿರುವ ಬೆಳವಣಿಗೆ ಬೇಸರ ತಂದಿದೆ. ಬಿಜೆಪಿ ಪಕ್ಷದಲ್ಲಿದ್ದ ನಾನು ಆರ್.ಎಂ.ಮಂಜುನಾಥಗೌಡರ ಸಹಕಾರದಿಂದ ಕಾಂಗ್ರೆಸ್ ಸೇರಿದವನು. ಈ ತಿಂಗಳ 18 ರಂದು ನಿಗದಿಯಾಗಿರುವ ಅವಿಶ್ವಾಸ ಮಂಡನೆಯ ಸಭೆಗೆ ಪಕ್ಷ ನೀಡುವ ವಿಪ್ ಬೆದರಿಕೆಗೂ ಬಗ್ಗುವುದಿಲ್ಲಾ ಎಂದೂ ಹೇಳಿದರು.1995ರ ನಂತರ ಮೊದಲ ಬಾರಿಗೆ ಪಪಂಯಲ್ಲಿ ಕಾಂಗ್ರೆಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದಿದೆ. ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಪಕ್ಷದ ಮುಖಂಡರಲ್ಲಿ ಎರಡು ತಿಂಗಳ ಹೆಚ್ಚಿನ ಅವಧಿಯನ್ನು ಕೇಳಿದ್ದೆ. ಮತ್ತು ನನ್ನ ವಿರುದ್ಧ ಷಡ್ಯಂತ್ರ ನಡೆಸಿರುವ ಕಾಂಗ್ರೆಸ್ ಮುಖಂಡರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು.ಈ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯದ ಪರ ಸಹಿ ಹಾಕದೇ ರಹಮತ್ ಉಲ್ಲಾ ಅಸಾದಿ ಪರ ನಿಂತಿರುವ ಪಪಂ ಸದಸ್ಯರಾದ ಕಾಂಗ್ರೆಸ್ಸಿನ ಸುಶೀಲಾಶೆಟ್ಟಿ ಮತ್ತು ನಮೃತ್ ಇದ್ದರು.