ಸಾರಾಂಶ
ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದಿಲ್ಲ ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕಾರಣ ರದ್ಧಾಗಿದೆ ಎಂದು ಶಾಸಕ ಕೆ.ಷಡಕ್ಷರಿ ಸ್ಪಷ್ಟನೆ ನೀಡಿದರು.
ಕನ್ನಡಪ್ರಭವಾರ್ತೆ ತಿಪಟೂರು
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಬೇಕಿದ್ದ ಕೃಷಿ ಮತ್ತು ಕರಕುಶಲ ವಸ್ತುಗಳ ಉತ್ಸವ, ಆಹಾರ ಮೇಳ ಹಾಗೂ ಪ್ರದರ್ಶನ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ರದ್ದುಗೊಂಡಿರುವುದಕ್ಕೆ ನಾನು ಕಾರಣನಲ್ಲ. ಸಂಬಂದಪಟ್ಟ ಇಲಾಖೆಗಳಿಂದ ಅನುಮತಿ ಪಡೆಯದಿಲ್ಲ ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕಾರಣ ರದ್ಧಾಗಿದೆ ಎಂದು ಶಾಸಕ ಕೆ.ಷಡಕ್ಷರಿ ಸ್ಪಷ್ಟಪಡಿಸಿದರು. ನಗರಸಭೆಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಯೋಜಕರು ನನ್ನ ಬಳಿ ಬಂದು ಕೃಷಿ ಉತ್ಸವ ಮಾಡುತ್ತೇನೆ ಎಂದು ತಿಳಿಸಿದಾಗ ಮಾಡಿ ಎಂದು ತಿಳಿಸಿದ್ದೆ. ಅದರ ಅರ್ಥ ಯಾವುದೇ ಇಲಾಖೆಯಿಂದ ಅನುಮತಿ ಪಡೆಯಬೇಡಿ ಎಂದರ್ಥವಲ್ಲ. ಆದರೆ ಯಾವುದೇ ಕೃಷಿ ಮತ್ತು ತೋಟಗಾರಿಕೆ, ಬೆಸ್ಕಾಂ, ನಗರಸಭೆಯಿಂದಲೂ ಯಾವುದೇ ಅನುಮತಿ ಪಡೆದಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಆಯೋಜನೆ ಮಾಡುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಇಷ್ಟೆಲ್ಲಾ ಪೂರ್ವಾನುಮತಿ ಪಡೆಯದೆ ಕೃಷಿ ಉತ್ಸವ ಆಯೋಜಿಸಲು ಬಾಲಾಜಿ ಈವೆಂಟ್ಸನವರು ಹೊರಟಿದ್ದು ಅವರ ತಪ್ಪು. ಆದರೆ ಏನಾದರೂ ಅನಾಹುತ ನಡೆದಾಗ ಸಾರ್ವಜನಿಕರಿಗೆ ಉತ್ತರ ನೀಡಬೇಕಾದ್ದು ನಾನು. ಹಾಗಾಗಿ ಅನುಮತಿ ಪಡೆಯದೇ ಪ್ರಾರಂಭಿಸುವುದು ಬೇಡ ಎಂದು ಹೇಳಿದ್ದೇನೆ ಎಂದು ತಿಳಿಸಿದರು. ಈಗಲೂ ಆಯೋಜಕರು ಸಂಬಂದಪಟ್ಟ ಎಲ್ಲ ಇಲಾಖೆಗಳಿಂದ ಅನುಮತಿ ಪಡೆದು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕೃಷಿ ಉತ್ಸವ ಪ್ರಾರಂಭಿಸಲಿ. ನಾನು ಅವರಿಗೆ ತೊಂದರೆ ಮಾಡುವುದಿಲ್ಲ. ಅದು ಬಿಟ್ಟು ಸುಮ್ಮನೇ ನನ್ನ ಮೇಲೆ ದುರುದ್ದೇಶದಿಂದ ಇಲ್ಲಸಲ್ಲದ ಆಪಾದನೆ ಮಾಡಿದರೆ ನಾನು ಸಹಿಸುವುದಿಲ್ಲ ಎಂದು ಶಾಸಕರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ, ಸಹಾಯಕ ಕೃಷಿ ನಿರ್ದೇಶಕ ಪವನ್‌ಕುಮಾರ್, ತೋಟಗಾರಿಕಾ ಇಲಾಖೆಯ ಚಂದ್ರಶೇಖರ್, ಪಶುಪಾಲನಾ ಇಲಾಖೆಯ ನಂದೀಶ್ ಇದ್ದರು.