ರಾಜಕೀಯ ಪರಿಸ್ಥಿತಿ ಅನುಯಾಯಿಗಳ ಜತೆ ಚರ್ಚೆ ಮಾಡುತ್ತೇವೆ. ಚುನಾವಣೆಗೆ ಮೂರು ವರ್ಷ ಇದೆ.

ಶಿರಸಿ: ರಾಜಕೀಯ ಪರಿಸ್ಥಿತಿ ಅನುಯಾಯಿಗಳ ಜತೆ ಚರ್ಚೆ ಮಾಡುತ್ತೇವೆ. ಚುನಾವಣೆಗೆ ಮೂರು ವರ್ಷ ಇದೆ. ಚುನಾವಣೆ‌ ಕಾಲಘಟ್ಟದಲ್ಲಿ ಈಗ ಇಲ್ಲ. ನಾನೀಗ ಫ್ರೀ ಬರ್ಡ್. ಒಳ್ಳೆ‌ಯ ಕೆಲಸಕ್ಕೆ ಯಾವತ್ತೂ ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವರು ಸೋಮವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದ‌ ಸರ್ಕಾರ ಇದು. ಅವರ ಜೊತೆ ಉಪ ಮುಖ್ಯಂಮತ್ರಿ ಡಿ.ಕೆ. ಶಿವಕುಮಾರ ಇದ್ದಾರೆ. ಇಬ್ಬರೂ ಸೇರಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಬಾನು‌ ಮುಷ್ತಾಕ್ ನಾಡದೇವಿ ಉತ್ಸವ ಉದ್ಘಾಟಿಸುವುದರಲ್ಲಿ ತಪ್ಪೇನಿದೆ? ನಿಸ್ಸಾರ್ ಅಹಮದ್ ಈ ಹಿಂದೆ‌ ದಸರಾ ಉದ್ಘಾಟಿಸಲಿಲ್ಲವಾ? ನಾಡ ದೇವತೆ ಪೂಜೆಗೆ ಜಾತಿ, ಧರ್ಮ ಮಾಡಬಾರದು. ವಿಶಾಲತೆ ಬರೋದು ಯಾವಾಗ? ಜಾತ್ಯತೀತ ದೇಶದಲ್ಲಿ ಇದನ್ನೆಲ್ಲ ಇಟ್ಟುಕೊಳ್ಳಬಾರದು. ಅಬ್ದುಲ್ ಕಲಾಂ ರಾಷ್ಟ್ರಪತಿ ಆದಾಗ ಹೆಮ್ಮೆ ಪಡಲಿಲ್ಲವಾ? ಎಂದು ಪ್ರಶ್ನಿಸಿದರು.

ಕನ್ನಡಕ್ಕೆ ಬೂಕರ್ ಪ್ರಶಸ್ತಿ ಬಂದಿದೆ. ಕನ್ನಡಕ್ಕೆ ಮಾನ್ಯತೆ ಬರಲು ಬಾನು ಅವರಿಗೆ ಸಿಕ್ಕಾಗ ಅಪಚಾರ ಏಕೆ? ವಿವಾದಿಂದ ಏನಾಗುತ್ತದೆ‌? ಧರ್ಮ ಯಾವ ಪಕ್ಷದ ಗುತ್ತಿಗೆಯಲ್ಲ. ಡಿ.ಕೆ. ಶಿವಕುಮಾರ ಮಠ, ಮಂದಿರಗಳಿಗೆ ಹೋಗುತ್ತಾರೆ‌. ಧರ್ಮಾಚರಣೆ ಮಾಡ್ತಾ ಇಲ್ಲವಾ? ಒಬ್ಬರಿಗೇ ಗುತ್ತಿಗೆಯಲ್ಲ ಎಂದು ಪರೋಕ್ಷ ವಾಗ್ದಾಳಿ ಮಾಡಿದರು.

ಕೆಡಿಸಿಸಿ ಬ್ಯಾಂಕ್ ಜಿಲ್ಲೆಯ ರೈತರ ಮಾತೃ ಸಂಸ್ಥೆ. 1.12 ಲಕ್ಷ ರೈತರಿಗೆ ₹1700 ಕೋಟಿ ಸಾಲ ಕೊಡುವ ಕಾಮಧೇನು.‌ ಈ ಸಂಸ್ಥೆ ಶಾಶ್ವತವಾಗಿ ಇರಬೇಕು. ನಾನೇನು ಶಾಶ್ವತವಲ್ಲ. ಆದರೆ, ಇಂತಹ ಸಂಸ್ಥೆಗಾಗಿ ಸಹಕಾರಿಯಲ್ಲಿ ಕೆಲಸ ಮಾಡುವ ನಮ್ಮಂತವರು ಶ್ರಮಿಸಬೇಕು ಎಂದರು.

ಧರ್ಮಸ್ಥಳದ‌ ಮಂಜುನಾಥನ ಹಾಗೂ ಅಣ್ಣಪ್ಪ ದೇವರ ಅವಕೃಪೆಗೆ ಒಳಗಾದರೆ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಧರ್ಮಸ್ಥಳ ಪ್ರಕರಣದಲ್ಲಿ ಕೇವಲ ಶೇ.30 ಮಾತ್ರ ಸತ್ಯಾಂಶ ಹೊರಗಡೆ ಬಂದಿದೆ.‌ ಇನ್ನು ಬರಲಿದೆ. ಹೊರಗೆ ಬರಲು ಸ್ವಲ್ಪ ತಡ ಆಗಬಹುದು. ಧರ್ಮಸ್ಥಳ‌ ದೇವರ ಭಕ್ತರು ಎಲ್ಲೆಡೆ ಇದ್ದಾರೆ. ನಾವೆಲ್ಲ ಖಾವಂದರ ಭಕ್ತರು. ಧರ್ಮಸ್ಥಳ ತನಿಖೆ ಮುಗಿಯುವ ತನಕವೂ ವಾಸ್ತವಿಕತೆ ಅರ್ಥ ಆಗುವುದಿಲ್ಲ. ಖಾವಂದರೇ ಎಸ್ಐಟಿ ತನಿಖೆ ಸ್ವಾಗತಿಸಿದ್ದಾರೆ. ಅಂತಹ ನಂಬಿಗೆಗೆ ನಾಲ್ಕು ಜನ ಹುಸಿ ಮಾಡಲು ಸಾಧ್ಯವಿಲ್ಲ. ಆರೋಪ ಮಾಡಿದ ಗಿರೀಶ ಮಟ್ಟಣ್ಣವರ್, ಮಹೇಶ ತಿಮರೋಡಿ ಅವರೆಲ್ಲ ಎಲ್ಲಿದ್ದರು? ಯಾವ ಪಕ್ಷದಲ್ಲಿದ್ದರು ಎಂಬುದು ಎಲ್ಲರಿಗೂ ಗೊತ್ತು ಎಂದು ಹೇಳಿದರು.