ಸಾರಾಂಶ
ಧಾರವಾಡ: ಕೇಂದ್ರ ಬಿಜೆಪಿ ಸರ್ಕಾರ ಈ ವರೆಗೆ 11 ಬಜೆಟ್ ಮಂಡನೆ ಮಾಡಿದೆ. ಪ್ರಹ್ಲಾದ ಜೋಶಿ ಅವರು ಎರಡು ಬಾರಿ ಕೇಂದ್ರದ ಸಚಿವರೂ ಆಗಿದ್ದಾರೆ. ಕರ್ನಾಟಕ ಹಾಗೂ ಧಾರವಾಡ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ? ಎಷ್ಟು ಅನುದಾನ ತಂದಿದ್ದಾರೆ ಎಂಬುದರ ಬಗ್ಗೆ ಚರ್ಚೆಗೆ ಬರಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಸವಾಲು ಹಾಕಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಗೆ ಎರಡು ತಿಂಗಳಿಂದ ದುಡ್ಡು ಹಾಕಿಲ್ಲ ಎಂದ ಮಾತ್ರಕ್ಕೆ ಸರ್ಕಾರ ದಿವಾಳಿ ಆಗಿದೆ ಎಂದು ಜೋಶಿ ಅವರು ಹೇಳಿದ್ದು, ಕೇಂದ್ರ ಸರ್ಕಾರದ ಸ್ಥಿತಿ ಏನಾಗಿದೆ ಎಂಬುದನ್ನು ಅವರು ಹೇಳುತ್ತಾರೆಯೇ? ಎಂದು ಮರು ಪ್ರಶ್ನಿಸಿದರು.
ರಾಜ್ಯದಲ್ಲಿ ನಾವು ಏನು ಭರವಸೆ ನೀಡಿದ್ದೇವೆಯೋ ಅವುಗಳನ್ನು ಈಡೇರಿಸಿದ್ದೇವೆ. ಆದರೆ, ಬಿಜೆಪಿಯವರು ಏನನ್ನು ಹೇಳಿದ್ದಾರೆ? ಏನನ್ನು ಮಾಡಿಲ್ಲ ಎಂಬುದರ ಬಗ್ಗೆಯೂ ಚರ್ಚೆಯಾಗಲಿ. ಚರ್ಚಗೆ ನಾನು ಸಿದ್ಧ, ಚರ್ಚೆಗೆ ಬಿಜೆಪಿಯವರು ಸಿದ್ಧರಿದ್ದಾರಾ? ಎಂದು ಸಚಿವ ಲಾಡ್ ಸವಾಲು ಹಾಕಿದರು.
ಪ್ರಧಾನಿ ಸುಳ್ಳು ಭರವಸೆಗೆ ಜೋಶಿ ಉತ್ತರಿಸಲಿ:
ದೇಶದಲ್ಲಿ ಯಾರು ಅತಿ ಸುಳ್ಳು ಹೇಳ್ತಾ ಇದಾರೆ ಅನ್ನೋದು ಗೊತ್ತಾಗುತ್ತೆ, ಹಾಗೆ ಯಾರು ದಪ್ಪ ಚರ್ಮದವರು ಅನ್ನೋದು ಗೊತ್ತಾಗುತ್ತೆ. ಕಪ್ಪು ಹಣ ವಾಪಸ್ ತಂದು ₹15 ಲಕ್ಷ ಹಣ ಕೊಡುವ ವಿಚಾರ, 100 ಬುಲೆಟ್ ಟ್ರೆನ್‌ಗಳು ಬರ್ತಾವೆ ಎಂದು ಇಂತಹ ನೂರಾರು ಸುಳ್ಳು ಭರವಸೆಗಳನ್ನು ಕೊಟ್ಟಿದ್ದಾರೆ. ನಾವು ಬರೀ ಐದು ಗ್ಯಾರಂಟಿ ನೀಡಿದ್ದೇವೆ. ಮೋದಿ ಅವರು ಹೇಳಿದ ಸುಳ್ಳುಗಳನ್ನು ಜನರಿಗೆ ತಿಳಿಸಲು ಇಡೀ ದಿನ ಬೇಕಾಗುತ್ತದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಕೊಟ್ಟ ಭರವಸೆಗಳ ಬಗ್ಗೆ ಜೋಶಿ ಮಾತನಾಡಲಿ. ಆಗ ಯಾರು ದಪ್ಪ ಚರ್ಮದವರು ಎಂಬುದು ಗೊತ್ತಾಗಲಿದೆ ಎಂದು ಜೋಶಿ ಅವರಿಗೆ ಲಾಡ್ ಟಾಂಗ್ ನೀಡಿದರು.