ಮಂಪರು ಪರೀಕ್ಷೆಗೆ ನಾನು ಸಿದ್ಧ: ಹರಿಪ್ರಸಾದ್

| Published : Jan 14 2024, 01:34 AM IST

ಸಾರಾಂಶ

ರಾಮ ಮಂದಿರಾ ಉದ್ಘಾಟನೆ ವೇಳೆ ಗೋಧ್ರಾ ರೀತಿಯ ಘಟನೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ನಾಯಕರ ಸವಾಲು ಸ್ವೀಕರಿಸಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಮಂಪರು ಪರೀಕ್ಷೆಗೆ ಒಳಪಡಲು ನಾನು ಸಿದ್ಧ ಎಂದಿದ್ದಾರೆ.

ನವದೆಹಲಿ: ರಾಮ ಮಂದಿರಾ ಉದ್ಘಾಟನೆ ವೇಳೆ ಗೋಧ್ರಾ ಥರದ ಘಟನೆ ಹೇಳಿಕೆ ವಿಚಾರ ಬಿಜೆಪಿ ನಾಯಕರ ಸವಾಲು ಸ್ವೀಕರಿಸಿದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಮಂಪರು ಪರೀಕ್ಷೆಗೆ ಒಳಪಡಲು ನಾನು ಸಿದ್ಧ ಎಂದಿದ್ದಾರೆ. ಈ ಕುರಿತು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಎದುರಿಸಲು ನಾನು ಸಿದ್ಧನಿದ್ದು, ನನ್ನ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡಾ ಮಂಪರು ಪರೀಕ್ಷೆಗೆ ಒಳಪಡಬೇಕು ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ₹40,000 ಕೋಟಿ ಹಗರಣ ನಡೆದಿದೆ ಎಂದು ಯತ್ನಾಳ್ ಹೇಳಿದ್ದಾರೆ, ಹೀಗಾಗೀ ನನ್ನ ಮತ್ತು ವಿಜಯೇಂದ್ರ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ. ಆದರೆ, ಮಂಪರು ಪರೀಕ್ಷೆ ಲೈವ್ ಆಗಬೇಕು, ಟಿವಿಯಲ್ಲಿ ಪ್ರಸಾರ ಮಾಡಬೇಕು ಎಂದು ಸವಾಲು ಎಸೆದರು.

ಮ್ಯಾಚ್ ಫಿಕ್ಸಿಂಗ್ ಆಗಿದೆ ಎಂದು ಸಿ.ಟಿ. ರವಿ ಹೇಳಿದ್ದು, ಮೊದಲನೇ ಬಾರಿಗೆ ಅವರು ಸತ್ಯ ಹೇಳಿದ್ದಾರೆ. ಹೀಗಾಗಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಬಿಜೆಪಿ ಅವರ ಆಟಗಳು ನಮಗೆ ಗೊತ್ತಾಗುತ್ತವೆ ಎಂದರು.

ವಿರೋಧ ಪಕ್ಷದ ನಾಯಕರು ನನ್ನನ್ನು ಬಂಧಿಸಬೇಕು ಎಂದು ಹೇಳಿದ್ದಾರೆ. ಆದರೆ ನನ್ನ ಬಂಧನಕ್ಕೂ ಮುನ್ನ ಎಚ್‌ಎಂಟಿ ಬಳಿ ಫಿಲ್ಮ್ ಥೇಟರ್ ಇತ್ತು. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಯಾಕೆ ಅರೆಸ್ಟ್ ಆಗಿದ್ದರು ಅಂತಾ ಮೊದಲು ಹೇಳಿ ಬಿಡಲಿ ಆಮೇಲೆ ಬೇಕಾದರೆ ನನ್ನ ಬಂಧಿಸಲಿ. ನಾನು ಯಾವುದೇ ಕ್ರಿಮಿನಲ್ ಕೇಸ್, ಭ್ರಷ್ಟಾಚಾರದ ಆರೋಪ ಇಲ್ಲದ ರಾಜಕೀಯ ಜೀವನ ಮಾಡಿದ್ದೇನೆ. ಮಂಪರು ಪರೀಕ್ಷೆ ಆಗಲಿ ನಾನು ಸಿದ್ಧವಾಗಿದ್ದೇನೆ. ರಾಜ್ಯದಲ್ಲಿ ಜನರು ಶಾಂತವಾಗಿರಬೇಕು, ಮುನ್ನೆಚ್ಚರಿಕೆ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗೋಧ್ರಾ ರೀತಿ ಘಟನೆ ಮರುಕಳಿಸುವ ಸಾಧ್ಯತೆಯಿದೆ ಎಂಬ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆ ಉದ್ದೇಶಕ್ಕೆ ನಾವು ಭಾರತ್ ಜೋಡೋ ನ್ಯಾಯ ಯಾತ್ರೆ ಮಾಡುತ್ತಿಲ್ಲ. ಮೊದಲ ಹಂತದಲ್ಲೆ ಹೇಳಿದೆ, ಚುನಾವಣೆ ಇದು ಸಂಬಂಧಿಸಿಲ್ಲ. ದ್ವೇಷ ಮತ್ತು ಅಸೂಯೆ ವಾತಾವರಣ ಸರಿಪಡಿಸಲು ಯಾತ್ರೆ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ, ಲಕ್ಷದ್ವೀಪ ಸೇರಿ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡ್ತಾರೆ. ಜನರ ನೋವಿನ ಬಗ್ಗೆ ಬಿಜೆಪಿ ಅವರಿಗೆ ಅರಿವು ಇಲ್ಲ, ಅವರು ರಾಜಕೀಯ ಪ್ರವಾಸ ಮಾಡುತ್ತಿದ್ದಾರೆ. ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸಬೇಕು ಗೊತ್ತಿಲ್ಲ. ಇಸ್ರೇಲ್‌ನಲ್ಲಿ ಆದ್ರೆ ಮೋದಿ ಮಾತನಾಡ್ತಾರೆ, ಆದರೆ ಮಣಿಪುರದ ಬಗ್ಗೆ ಮಾತನಾಡ್ತಾರಾ? ಎಂದು ಪ್ರಶ್ನಿಸಿದರು.

ಜನಗಣತಿ ವರದಿ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಅವರು, ಜಾತಿ ಗಣಿತಿ ವರದಿ ಅಂತಿಮ ಆಗಿದೆ, ಅದನ್ನು ಶೀಘ್ರವಾಗಿ ಬಹಿರಂಗಗೊಳಿಸಬೇಕು. ಸಾಧಕ ಬಾಧಕ ಪರಿಶೀಲಿಸಿ ಬದಲಾಯಿಸಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧಿಸುವ ಹಕ್ಕು ಇದೆ. ನಾವು ನಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದೇವೆ ಎಂದರು.

ಮೋದಿ ಪರ ಎಲ್.ಕೆ ಅಡ್ವಾಣಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅಡ್ವಾಣಿ ಯಾವಾಗ ಮೋದಿ ಅಂಧ ಭಕ್ತರು ಆದರೂ ಗೊತ್ತಿಲ್ಲ ಎಂದು ಜರಿದರು.