ಪಪಂಯನ್ನು ಪುರಸಭೆ ಮಾಡುವ ಜವಾಬ್ದಾರಿ ನನ್ನದು

| Published : Apr 22 2025, 01:45 AM IST

ಸಾರಾಂಶ

ಬಹುವರ್ಷದ ಪಟ್ಟಣದ ಜನರ ಕಸನಾಗಿರುವ ಪಪಂಯನ್ನು ಪುರಸಭೆಯನ್ನಾಗಿ ಮಾಡುವ ಪ್ರಸ್ತಾವನೆ ಈಗ ರಾಜ್ಯ ಸರ್ಕಾರದ ಕೈಸೇರಿದೆ. ಪಪಂಯ ೧೫ವಾರ್ಡುಗಳ ಸಮಗ್ರ ಅಭಿವೃದ್ದಿಗೆ ಮತ್ತೆ ೨೫ಕೋಟಿ ಅನುದಾನದ ಪ್ರಸ್ತಾವನೆಯ ರೂಪುರೇಷು ಸಿದ್ಧವಿದೆ ಎಂದು ಪಪಂ ಸದಸ್ಯರಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಬಹುವರ್ಷದ ಪಟ್ಟಣದ ಜನರ ಕಸನಾಗಿರುವ ಪಪಂಯನ್ನು ಪುರಸಭೆಯನ್ನಾಗಿ ಮಾಡುವ ಪ್ರಸ್ತಾವನೆ ಈಗ ರಾಜ್ಯ ಸರ್ಕಾರದ ಕೈಸೇರಿದೆ. ಪಪಂಯ ೧೫ವಾರ್ಡುಗಳ ಸಮಗ್ರ ಅಭಿವೃದ್ದಿಗೆ ಮತ್ತೆ ೨೫ಕೋಟಿ ಅನುದಾನದ ಪ್ರಸ್ತಾವನೆಯ ರೂಪುರೇಷು ಸಿದ್ಧವಿದೆ ಎಂದು ಪಪಂ ಸದಸ್ಯರಿಗೆ ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.ಕೊರಟಗೆರೆ ಪಟ್ಟಣದ ಪಪಂ, ತೋಟಗಾರಿಕೆ ಮತ್ತು ಆರೋಗ್ಯ ಇಲಾಖೆಯಿಂದ ಸೋಮವಾರ ಏರ್ಪಡಿಸಲಾಗಿದ್ದ ೩ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ, ಶಂಕುಸ್ಥಾಪನೆ ಮತ್ತು ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪದವಿಪೂರ್ವ ಕಾಲೇಜಿನ ೪ಕೋಟಿಯ ಒಳಾಂಗಣ ಕ್ರೀಡಾಂಗಣ ೪೦ದಿನದೊಳಗೆ ಉದ್ಘಾಟನೆಯಾಗಲಿದೆ. ಕ್ರೀಡಾಂಗಣ ಅಭಿವೃದ್ಧಿಗೆ ಮತ್ತೆ ೩ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಕೊರಟಗೆರೆ ಪಟ್ಟಣದ ಸರ್ವೆ ನಂ.೧೮೧ರಲ್ಲಿ ೫ ಎಕರೆ ಭೂಮಿಯಲ್ಲಿ ೧೦೦ಸೈಟ್ ವಿಂಗಡಿಸಿ ಹಂಚುವ ಕೆಲಸ ಮಾಡ್ತೀವಿ. ಪಪಂ ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಬಡಜನರ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು. ರಾಜ್ಯದ ಪ್ರತಿ ತಾಲೂಕಿನ ಸಾರ್ವಜನಿಕ ಪ್ರದೇಶದಲ್ಲಿ ಕಡ್ಡಾಯವಾಗಿ ಸಿಸಿಟವಿ ಅಳವಡಿಕೆಗೆ ಪೊಲೀಸ್ ಇಲಾಖೆಗೆ ಸರ್ಕಾರ ಸೂಚಿಸಿದೆ. ಕೊರಟಗೆರೆ ಪಟ್ಟಣದ ೨೮ಕಡೆಗಳಲ್ಲೂ ಸಿಸಿಟಿವಿ ಅಳವಡಿಕೆಗೆ ಚಾಲನೆ ನೀಡಿದ್ದೇನೆ. ಸಿಸಿಟಿವಿ ಅಳವಡಿಕೆ ಪಪಂ, ಪುರಸಭೆ ಮತ್ತು ನಗರಸಭೆಗಳ ಜವಾಬ್ದಾರಿ ಆಗಿದೆ. ಕಾನೂನು ವಿರೋಧಿ ಚಟುವಟಿಕೆ ಮತ್ತು ಕ್ರೈಂ ಪ್ರಕರಣ ಭೇದಿಸಲು ಸಿಸಿಟಿವಿ ಬಹುಮುಖ್ಯ ಪಾತ್ರ ವಹಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಎಸ್ಪಿ ಅಶೋಕ್, ಪಪಂ ಪಿಡಿ ಯೋಗಾನಂದ, ವಿಶೇಷಾಧಿಕಾರಿ ಎಸ್.ನಾಗಣ್ಣ, ತಹಸೀಲ್ದಾರ್ ಮಂಜುನಾಥ, ಪಪಂ ಮುಖ್ಯಾಧಿಕಾರಿ ಉಮೇಶ್, ಪಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷೆ ಹುಸ್ಮಪಾರೀಯ, ಸ್ಥಾಯಿಸಮಿತಿ ಅಧ್ಯಕ್ಷೆ ಹೇಮಾಲತ, ಸದಸ್ಯರಾದ ಬಲರಾಮಯ್ಯ, ಓಬಳರಾಜು, ನಂದೀಶ್, ಲಕ್ಷ್ಮೀನಾರಾಯಣ್, ಭಾರತಿ, ಕಾವ್ಯರಮೇಶ್, ಪುಟ್ಟನರಸಪ್ಪ ಸೇರಿದಂತೆ ಇತರರು ಇದ್ದರು. ಪಪಂಯಿಂದ ಪೌರಕಾರ್ಮಿಕರಿಗೆ ೨ವರ್ಷದ ಹಿಂದೆ ನಿರ್ಮಾಣ ಮಾಡಿರುವ ನಿವೇಶನ ಹಂಚಿಕೆ ಮಾಡಿಲ್ಲ ಏಕೆ. ನಿವೇಶನ ಹಂಚಿಕೆ ಕಾರ್ಯಕ್ರಮ ೧೫ ದಿನದೊಳಗೆ ಮಾಡದಿದ್ರೆ ಪಪಂ ಮುಖ್ಯಾಧಿಕಾರಿ ನೀನು ಎತ್ತಂಗಡಿ ಆಗ್ತಿರಾ ಬೇಗಾ ನಿವೇಶನ ಹಂಚಿಕೆ ಆಗ್ಬೇಕು ಅಷ್ಟೇ. ಗುತ್ತಿಗೆದಾರನ ಜೊತೆ ನಾನು ಮಾತನಾಡ್ತಿನಿ ಎಂದು ಪಪಂ ಮುಖ್ಯಾಧಿಕಾರಿ ಉಮೇಶ್‌ಗೆ ಗೃಹಸಚಿವ ಡಾ.ಜಿ.ಪರಮೇಶ್ವರ ಎಚ್ಚರಿಕೆ ನೀಡಿದರು.

ಆರೋಗ್ಯ ಇಲಾಖೆಯ ನಮ್ಮ ಕ್ಲಿನಿಕ್, ತೋಟಗಾರಿಕೆ ಇಲಾಖೆ ಕಟ್ಟಡ, ಜೆಸಿಬಿ, ಆಟೋ ಟಿಪ್ಪರ್, ಡಸ್ಟ್‌ಬೀನ್, ದಿನನಿತ್ಯದ ಮಾರುಕಟ್ಟೆ, ಹಳೆ ವಸತಿಗೃಹ ತೆರವು, ಕಲಾಮಂದಿರ, ಸಿಸಿಟಿವಿ, ಸಂತೆಮೈದಾನಕ್ಕೆ ಫೇನ್ಸಿಂಗ್ ಮತ್ತು ವಿಶೇಷ ಚೇತನರಿಗೆ ಸವಲತ್ತು ವಿತರಣೆ ಸೇರಿದಂತೆ ೩ಕೋಟಿಗೂ ಅಧಿಕ ಅನುದಾನದಿಂದ ೧೦ಕ್ಕೂ ಅಧಿಕ ಕಾಮಗಾರಿಗಳಿಗೆ ಗೃಹಸಚಿವ ಚಾಲನೆ ನೀಡಿದರು.