ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಕೊಡಿಸುವ ಜವಾಬ್ದಾರಿ ನನ್ನದು: ಜೋಶಿ

| Published : Apr 30 2024, 02:12 AM IST / Updated: Apr 30 2024, 01:22 PM IST

Prahlada Joshi
ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಕೊಡಿಸುವ ಜವಾಬ್ದಾರಿ ನನ್ನದು: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹತ್ತು ಕೆಜಿ ಕೊಡುತ್ತೇನೆಂದು ಗ್ಯಾರಂಟಿ ನೀಡಿದ್ದರು. ಆದರೆ, ರಾಜ್ಯದ ಜನರಿಗೆ ಒಂದು ಪಾವ್‌ ಅಕ್ಕಿ ಕೊಡಲಿಲ್ಲ.

ನವಲಗುಂದ:  ಕಳಸಾ-ಬಂಡೂರಿ ನಾಲಾ ಜೋಡಣೆಗೆ ಬಿಜೆಪಿ ಸರ್ಕಾರ ಹಾಗೂ ತಾವು ಎಂದಿಗೂ ಬದ್ಧ. ಯೋಜನೆಯು ಕೊನೆ ಹಂತದಲ್ಲಿದ್ದೂ ಹುಲಿ ಪ್ರಾಧಿಕಾರ ಹಾಗೂ ವನ್ಯಜೀವಿ ಮಂಡಳಿ ಜತೆಗೆ ಮಾತುಕತೆಯಾಗಿದ್ದು, ಯೋಜನೆಗೆ ಅನುಮತಿ ಕೊಡಿಸುವ ಜವಾಬ್ದಾರಿ ತಮ್ಮದು ಎಂದು ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಭರವಸೆ ನೀಡಿದರು.

ಸೋಮವಾರ ನವಲಗುಂದದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಇದೇ ಜಾಗದಲ್ಲಿ ನಿಂತು ಸಚಿವ ಸಂತೋಷ ಲಾಡ ಹಾಗೂ ಕಾಂಗ್ರೆಸ್ ಮುಖಂಡರು ಕಳಸಾ-ಬಂಡೂರಿ ಜಾರಿ ಬಗ್ಗೆ ತಮ್ಮನ್ನು ಟೀಕಿಸಿದ್ದಾರೆ. ಆದರೆ, ಅವರಿಗೆ ಗೊತ್ತಿಲ್ಲ. ಯೋಜನೆ ಕೊನೆ ಹಂತದ ವರೆಗೆ ಬರಲು ಕಾರಣ ನಾವೆಂದು. ಪರಿಸರ ಇಲಾಖೆ ಅನುಮತಿ ಕೊಡಿಸಿದ್ದು ನಾವು. ಯೋಜನೆಯ ಮಹತ್ವದ ಘಟ್ಟ ವಿಸ್ಕೃತ ಯೋಜನಾ ವರದಿ. ಕಾಂಗ್ರೆಸ್‌ ಸರ್ಕಾರ ಇದ್ದಾಗ ವಿಸ್ಕೃತ ಯೋಜನಾ ವರದಿಗೆ ಒಪ್ಪಿಗೆ ಸೂಚಿಸುತ್ತಿಲ್ಲ ಎಂದು ಆರೋಪಿಸಿದರು.

ಆದರೆ, ತಕ್ಷಣ ಕೇಂದ್ರ ಬಿಜೆಪಿ ಸರ್ಕಾರ ಅನುಮೋದನೆ ನೀಡಿತು. ಸದ್ಯ, ಅರಣ್ಯದ ಅನುಮತಿ ಮಾತ್ರ ಬೇಕಾಗಿದೆ. ದೇಶದಲ್ಲಿ ಹಸಿರು ಉಳಿಸುವ ಕಾರಣಕ್ಕಾಗಿ ಮನೆ, ಹೊಲದ ಗಿಡ ಕಡಿಯಲು ಕಷ್ಟದಾಯಕ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಅಲ್ಲಿ 55 ಹೆಕ್ಟೇರ್‌ ಅರಣ್ಯ ತೆಗೆಯಬೇಕಿದೆ. ಅಲ್ಲಿ ಹುಲಿಗಳು ಓಡಾಡುತ್ತಿವೆ. ಅವುಗಳ ಪರಿಸ್ಥಿತಿ ಏನೆಂದು ವನ್ಯಜೀವಿ ಮಂಡಳಿ ಅನುಮತಿ ಕೇಳಲಾಗಿದೆ. ಆ ಮಂಡಳಿಯವರು ಹುಲಿ ಪ್ರಾಧಿಕಾರಕ್ಕೆ ಫೈಲ್‌ ಕಳುಹಿಸಿದ್ದಾರೆ. ಪ್ರಾಧಿಕಾರವು ಕರ್ನಾಟಕಕ್ಕೆ ವಿವರ ಕೇಳಿತ್ತು. ಈ ಕುರಿತು ಈಗಾಗಲೇ ತಾವು ಹುಲಿ ಪ್ರಾಧಿಕಾರಕ್ಕೂ, ಮಂಡಳಿಗೂ ಮಾತನಾಡಿದ್ದು ಸ್ಪಷ್ಟನೆ ನೀಡಲಾಗಿದೆ. ಒಟ್ಟಾರೆ ಯೋಜನೆಗೆ ಅನುಮತಿ ಕೊಡಿಸುವ ಜವಾಬ್ದಾರಿ ನನ್ನದು ಎಂದು ಜೋಶಿ ಪ್ರತಿಜ್ಞೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹತ್ತು ಕೆಜಿ ಕೊಡುತ್ತೇನೆಂದು ಗ್ಯಾರಂಟಿ ನೀಡಿದ್ದರು. ಆದರೆ, ರಾಜ್ಯದ ಜನರಿಗೆ ಒಂದು ಪಾವ್‌ ಅಕ್ಕಿ ಕೊಡಲಿಲ್ಲ. ಕೇಂದ್ರ ಸರ್ಕಾರ ಕೊಡುವ ಐದು ಕೆಜಿ ಅಕ್ಕಿಯನ್ನೇ ನಾನು ಕೊಡುತ್ತೇನೆಂದು ಕಾಂಗ್ರೆಸ್‌ ಹೇಳುತ್ತಿರುವುದು ಮಾನಗೇಡಿತನ ಎಂದು ಪ್ರಹ್ಲಾದ ಜೋಶಿ ಹೇಳಿದರು.