ಸಾರಾಂಶ
ಶಿವಮೊಗ್ಗ: ನನಗೆ ರಾಜಕೀಯ ಗುರುಗಳು ಆಗಿದ್ದ ಎಸ್.ಎಂ.ಕೃಷ್ಣ ಇನ್ನಿಲ್ಲ ಎಂದು ಕೇಳಿ ದುಃಖ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶ್ರದ್ಧಾಂಜಲಿ ಸಲ್ಲಿಸಿದರು.
ಶಿವಮೊಗ್ಗ: ನನಗೆ ರಾಜಕೀಯ ಗುರುಗಳು ಆಗಿದ್ದ ಎಸ್.ಎಂ.ಕೃಷ್ಣ ಇನ್ನಿಲ್ಲ ಎಂದು ಕೇಳಿ ದುಃಖ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶ್ರದ್ಧಾಂಜಲಿ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೊದಲು ಬಾರಿಗೆ ಗೆದ್ದಾಗ ಎಸ್.ಎಂ.ಕೃಷ್ಣ ಅವರು ಸಭಾಧ್ಯಕ್ಷರಾಗಿದ್ದರು. ಆಗ ಅವರನ್ನು ಅಭಿನಂದಿಸಲು ಹೋದ ಸಂದರ್ಭದಲ್ಲಿ ನನ್ನ ಪರಿಚರ ಮಾಡಿಕೊಂಡಿದ್ದೆ. ಆಗ ಅವರು ಶಿವಮೊಗ್ಗ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ನೀನು ಹೇಗೆ ಗೆದ್ದು ಬಂದೆ ಎಂದು ಕೇಳಿದ್ದರು. ಹಿಂದುತ್ವದ ಸಂಘಟನೆ ಹಿನ್ನೆಲೆಯಲ್ಲಿ ಗೆದ್ದು ಬಂದೆ ಎಂದು ಹೇಳಿದಾಗ ನನ್ನ ಬೆನ್ನುತ್ತಟ್ಟಿದ್ದರು ಎಂದು ತಿಳಿಸಿದರು.ಕ್ಷೇತ್ರದ ಕೆಲಸ, ರಾಜ್ಯದ ಕೆಲಸ ಹೇಗೆ ಮಾಡಬೇಕು ಎಂದು ಗೊತ್ತಿಲ್ಲ ಎಂದು ಹೇಳಿದ್ದೆ. ನಿಮ್ಮ ಕ್ಷೇತ್ರದ ಸಮಸ್ಯೆಗಳೇನು ಎಂಬುದು ಪಟ್ಟಿ ಮಾಡಿ ಅದಕ್ಕೆ ಸಂಬಂಧಪಟ್ಟ ಮಂತ್ರಿಗಳನ್ನು ಭೇಟಿ ಮಾಡಿ ಅದಾದ ಮೇಲೆ ಸದನದಲ್ಲಿ ಹೇಗೆ ಪ್ರಶ್ನೆ ಕೇಳಬೇಕು ? ಜೀರೋ ಹವರ್ಸ್‌ನಲ್ಲಿ ಹೇಗೆ ಪ್ರಶ್ನೆ ಕೇಳಬೇಕು ಎಂದು ಎಲ್ಲವನ್ನು ಹೇಳಿಕೊಟ್ಟ ನನ್ನ ರಾಜಕೀಯ ಗುರುಗಳು ಇವತ್ತು ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂದರು.
ಅವರಿಗೆ ಪಕ್ಷ ಎಂಬುದೇ ಇರಲಿಲ್ಲ. ಪಕ್ಷಾತೀತವಾಗಿ ಹೇಗೆ ನಡೆದು ಕೊಳ್ಳಬೇಕು ಎಂಬುದನ್ನು ಅವರಿಂದ ಕಲಿತ್ತಿದ್ದೇನೆ. ಅವರು ಹಲವು ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದರೂ ಕೊನೆಗೆ ದೇಶದಲ್ಲಿ ರಾಷ್ಟ್ರೀಯತೆ ಮತ್ತೆ ಹಿಂದುತ್ವ ಉಳಿಸಿಕೊಂಡ ನರೇಂದ್ರ ಮೋದಿ ದೇಶವನ್ನು ಮುನ್ನಡೆಸುತ್ತಾರೆ ಎಂದು ಬಿಜೆಪಿ ಸೇರ್ಪಡೆ ಆದರು. ಬಳಿಕ ನಾನು ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ನಾನು ಬಿಜೆಪಿಗೆ ಸೇರ್ಪಡೆಯಾಗಿರುವುದು ನಿನಗೆ ತುಂಬಾ ಖುಷಿ ಇದೆ ಎಂದು ನನಗೆ ಗೊತ್ತಪ್ಪ ಎಂದಿದ್ದರು ಎಂದು ಸ್ಮರಿಸಿದ ಅವರು, ಹೃದಯ ಅಂತರಾಳದಿಂದ ಅವರಿಗೆ ಭಕ್ತಿ ನಮನ ಸಲ್ಲಿಸುತ್ತೇನೆ ಎಂದು ತಿಳಿಸಿದರು.