ಸಾರಾಂಶ
ಗ್ರಾಮೀಣ ಭಾಗದಲ್ಲಿ ವೈದ್ಯರ ಸೇವೆ ಅನನ್ಯವಾಗಿದೆ, ಬಡವರ್ಗದ ಜನರಿಗೆ ವೈದ್ಯರ ಸೇವೆ ಹೆಚ್ಚೆಚ್ಚು ಸಿಗುವಂತಾಗಬೇಕಿದೆ. ಕಾಂತರಾಜ್ ಅರಸ್ ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ, ಅವರಿಗೆ ಈ ಭಾಗದ ಜನತೆ ಚಿರಋಣಿ .
ಕನ್ನಡಪ್ರಭ ವಾರ್ತೆ ಶಿರಾ
ಶಿರಾ ತಾಲೂಕಿನ ಗಡಿಭಾಗದ ಚಿರತಹಳ್ಳಿ ಆಸ್ಪತ್ರೆಯಲ್ಲಿ ಕಳೆದ ೧೧ ವರ್ಷಗಳಿಂದ ಉತ್ತಮವಾದ ಸೇವೆ ನೀಡುವುದರ ಜೊತೆಗೆ ಜನಸ್ನೇಹಿ ಕರ್ತವ್ಯ ನಿರ್ವಹಿಸಿದ ತೃಪ್ತಿ ನನಗಿದೆ ಎಂದು ವೈದ್ಯಾಧಿಕಾರಿ ಡಾ. ಕಾಂತರಾಜ್ ಅರಸ್ ಹೇಳಿದರು.ಅವರು ತಾಲೂಕಿನ ಹುಲಿಕುಂಟೆ ಹೋಬಳಿಯ ಚಿರತಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ ತಮಗೆ ಮತ್ತು ಕಿಶೋರ್ ರವರಿಗೆ ವರ್ಗಾವಣೆ ಅಂಗವಾಗಿ ಸ್ಥಳೀಯರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವೃತ್ತಿಯಲ್ಲಿ ಯಾವುದೇ ರೀತಿಯ ಅಪವಾದ ಬಾರದಂತೆ ಜನರ ಸಹಕಾರದೊಂದಿಗೆ ಸಮಾಜಮುಖಿ ಕೆಲಸ ಮಾಡಲಾಗಿದೆ ಎಂದರು.
ದ್ವಾರನಕುಂಟೆ ವೈದ್ಯಾಧಿಕಾರಿ ಡಾ. ತಿಮ್ಮರಾಜು ಮಾತನಾಡಿ, ಗ್ರಾಮೀಣ ಭಾಗದಲ್ಲಿ ವೈದ್ಯರ ಸೇವೆ ಅನನ್ಯವಾಗಿದೆ, ಬಡವರ್ಗದ ಜನರಿಗೆ ವೈದ್ಯರ ಸೇವೆ ಹೆಚ್ಚೆಚ್ಚು ಸಿಗುವಂತಾಗಬೇಕಿದೆ. ಕಾಂತರಾಜ್ ಅರಸ್ ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ, ಅವರಿಗೆ ಈ ಭಾಗದ ಜನತೆ ಚಿರಋಣಿ ಎಂದರು.ಕಿಶೋರ್ ಮಾತನಾಡಿ, ೧೧ ವರ್ಷಗಳ ಕಾಲ ಈ ಆಸ್ಪತ್ರೆ ಉತ್ತಮ ಅನುಭವ ನೀಡಿದೆ, ಜೀವನ ಪರ್ಯಂತ ಕರ್ತವ್ಯ ನಿರ್ವಹಿಸಿದ ಆಸ್ಪತ್ರೆಯನ್ನು ಎಂದಿಗೂ ಮರೆಯಲಾರೆ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೂಡಲಗಿರಿಯಪ್ಪ, ಡಾ. ಉಮಾ, ನಿರ್ಮಲಾ, ಹೇಮಾಲತಾ, ಉಮಾ, ನವೀನ್, ಹನುಮಂತರಾಯಪ್ಪ, ಶಾರದಮ್ಮ, ತಿಪ್ಪೇಸ್ವಾಮಿ, ಪುನೀತ್, ಆಶಾ ಕಾರ್ಯಕರ್ತೆಯರು ಸೇರಿ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.