ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನೀರಾವರಿ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳಿಗೆ ಇಲ್ಲಿನ ರೈತರು ಹಣ್ಣು ಹಂಪಲಗಳಿಂದ ತುಲಾಭಾರ ಮಾಡಿ ಕೃತಜ್ಞತೆ ಸಲ್ಲಿಸುತ್ತಿರುವುದು, ಸಚಿವನಾಗಿ ನಾನು ಕೈಗೊಂಡ ಕಾರ್ಯಗಳಿಂದ ನನಗೆ ಸಂತೃಪ್ತಿ ಭಾವನೆ ಮೂಡಿದೆ ಎಂದು ಜಿಲ್ಲಾ ಉಸ್ತುವಾರಿ ಎಂ.ಬಿ.ಪಾಟೀಲ ಹೇಳಿದರು.ಬಬಲೇಶ್ವರ ಮತಕ್ಷೇತ್ರದ ತಿಕೋಟಾ ತಾಲೂಕಿನ ನಿಡೋಣಿ ಗ್ರಾಮದಲ್ಲಿ ಕೆಬಿಜೆಎನ್‌ಎಲ್ ಕೈಗೊಂಡ ಬಬಲೇಶ್ವರ ಶಾಖಾ ಕಾಲುವೆಯ ೫ಎ ಹಾಗೂ ೫ಬಿ ಲಿಫ್ಟ್‌ಗಳ ಜಾಕವೆಲ್ ಹಾಗೂ ಪೈಪ್‌ಗಳ ಮೂಲಕ ವಿತರಣಾ ಜಾಲಗಳ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮತ್ತು ರೈತರು ವಿವಿಧ ಫಲಗಳಿಂದ ಮಾಡಿದ ತುಲಲಾಭಾರ ಸ್ವೀಕರಿಸಿ ಮಾತನಾಡಿದರು.
ಬಬಲೇಶ್ವರ ಶಾಖಾ ಕಾಲುವೆಯಲ್ಲಿ ೫ಬಿ ಲಿಫ್ಟ್‌ಗಳ ಜ್ಯಾಕವೆಲ್ ನಿರ್ಮಾಣ ಮಾಡಿ ಅಲ್ಲಿಂದ ನೀರನ್ನು ಈ ಭಾಗದ ಹಲವು ಗ್ರಾಮಗಳು ಸೇರಿ ಸಾವಿರಾರು ಎಕರೆ ನೀರಾವರಿಗೊಳಪಡಲಿದೆ. ೫ಎ ಲಿಫ್ಟ್ ಕಾಮಗಾರಿಯಿಂದ ಬಬಲೇಶ್ವರ, ನಿಡೋಣಿ, ನಾಗರಾಳ ಹಾಗೂ ದಾಶ್ಯಾಳ ಗ್ರಾಮದ ೮೬೦೦ ಎಕರೆ ಹಾಗೂ ೫ಬಿ ಲಿಫ್ಟ್ ಕಾಮಗಾರಿಯಿಂದ ಬಬಲೇಶ್ವರ, ಹಲಗಣಿ ಹಾಗೂ ಕಾಖಂಡಕಿ ಗ್ರಾಮದ ಒಟ್ಟು ೧೩೫೫ ಎಕರೆ ನೀರಾವರಿಗೊಳಪಡಲಿದೆ ಎಂದು ಮಾಹಿತಿ ನೀಡಿದರು.ಜಲಸಂಪನ್ಮೂಲ ಸಚಿವನಾಗಿದ್ದಾಗ ಕೈಗೊಂಡ ನೀರಾವರಿ ಯೋಜನೆಗಳಿಂದ ಈ ಭಾಗ ಸಮೃದ್ದಿಯಾಗಿದೆ. ರೈತರು ತಮ್ಮ ಬದುಕು ಹಸನ ಮಾಡಿಕೊಂಡು, ಆರ್ಥಿಕ ಮಟ್ಟ ಸುಧಾರಿಸಿಕೊಂಡಿದ್ದು, ಬೆಳೆದ ಫಲಗಳಿಂದಲೇ ತುಲಾಭಾರ ಮಾಡಿದ್ದು ನನ್ನ ಸೌಭಾಗ್ಯ. ಜಿಲ್ಲೆಯ ಅಭಿವೃದ್ದಿಗೆ ಹಗಲಿರುಳು ಶ್ರಮಿಸಿ, ರೈತರ ಬದುಕು ಹಸನಾಗಿಸಲು ಪಟ್ಟ ಶ್ರಮ ಹಾಗೂ ಪ್ರಾಮಾಣಿಕ ಸೇವೆಗೆ ದೊರೆತಿರುವ ಪ್ರತಿಫಲ ಎಂದರು.ಜಲಸಂಪನ್ಮೂಲ ಸಚಿವನಾದ ವೇಳೆ ಸಿದ್ದೇಶ್ವರ ಶ್ರೀಗಳು, ೫ ವರ್ಷಗಳ ಅವಧಿಯಲ್ಲಿ ದಿನಕ್ಕೆ ೧೨ ರಿಂದ ೧೩ ಗಂಟೆಗಳ ಕಾಲ ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನೀರಾವರಿಗೆ ಆದ್ಯತೆ ನೀಡುವಂತೆ ಕಿವಿಮಾತು ಹೇಳಿದ್ದರು. ಅದರಂತೆ ನಾನು ನಡೆದುಕೊಂಡು, ಅವರ ಮಾತನ್ನು ಚಾಚುತಪ್ಪದೇ ಪಾಲಿಸಿ ಜಿಲ್ಲೆಯಲ್ಲಿ ನೀರಾವರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿದರು. ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಂದ ಹಳ್ಳ, ಕೆರೆ, ಇತ್ಯಾದಿ ಜಲಮೂಲಗಳು ತುಂಬಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ನಿರುಪಯುಕ್ತ ಬೋರ್‌ವೆಲ್‌ಗಳು ಮರುಪೂರಣಗೊಂಡಿವೆ. ಈ ಭಾಗದ ತಿಕೋಟಾ ಹೋಬಳಿಯೊಂದಕ್ಕೆ ೩೬೦೦ ಕೋಟಿ ವೆಚ್ಚ ಮಾಡಿ, ಬರಡು ಭೂಮಿಗೆ ನಿರೋದಗಿಸಿ ಈ ಭಾಗ ಹಸಿರಿನಿಂದ ಕಂಗೊಳಿಸಿ ಜನರು ಸಮೃದ್ದಿಯಿಂದ ಜೀವನ ಸಾಗಿಸುತ್ತಿರುವುದೇ ನೀರಾವರಿ ಯೋಜನೆಯ ಫಲಶೃತಿಯಾಗಿದೆ ಎಂದು ತಿಳಿಸಿದರು.ನಿಡೋಣಿ ವಿರಕ್ತಮಠದ ಸಿದ್ದಲಿಂಗೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬಾಲ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿ ಶಾಸಕ ರಾಜು ಆಲಗೂರ, ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಉಪಸ್ಥಿತರಿದ್ದರು. ಕೆಬಿಜೆಎನ್‌ಎಲ್ ಅಧೀಕ್ಷಕ ಅಭಿಯಂತರ ಪಿ.ಆರ್.ಹಿರೇಗೌಡರ ಪ್ರಾಸ್ಥಾವಿಕವಾಗಿ ಮಾತನಾಡಿದರು. ಅಭಿಯಂತರ ರಾಜೇಂದ್ರ ರೂಢಗಿ ಸ್ವಾಗತಿಸಿದರು. ಹುಮಾಯೂನ ಮಮದಾಪುರ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))