ಸಾರಾಂಶ
ಬಳ್ಳಾರಿ ಜಿಲ್ಲಾಡಳಿತದಿಂದ ಪ್ರಶಾಂತ್ ಕುಮಾರ್ ಮಿಶ್ರಾಗೆ ಬೀಳ್ಕೊಡುಗೆ
ಕನ್ನಡಪ್ರಭ ವಾರ್ತೆ ಬಳ್ಳಾರಿಜಿಲ್ಲಾಧಿಕಾರಿ ಹುದ್ದೆ ಸುಲಭದ ಕೆಲಸವಲ್ಲ.ಸಾಕಷ್ಟು ಸವಾಲು ನಿತ್ಯ ಎದುರಿಸಬೇಕಾಗುತ್ತದೆ.ಆ ಎಲ್ಲ ಸವಾಲು ನಿಭಾಯಿಸಿರುವೆ ಎಂಬ ತೃಪ್ತಿ ನನಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.
ಜಿಲ್ಲಾಡಳಿತದಿಂದ ನಗರದ ವಾಲ್ಮೀಕಿ ಭವನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ನಿರ್ಗಮಿತ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರಿಗೆ ಬಿಳ್ಕೋಡುಗೆ ಮತ್ತು ನೂತನ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕಳೆದ ಎರಡು ವರ್ಷದ ಹಿಂದೆ ಬಳ್ಳಾರಿ ಜಿಲ್ಲೆಗೆ ಬಂದಾಗ ನೂರೆಂಟು ಸವಾಲು ಎದುರಿಸಲು ಸಿದ್ಧನಾಗಿ ಬಂದಿದ್ದೆ. ಎಲ್ಲವನ್ನೂ ಸಾಧ್ಯವಾದ ಮಟ್ಟಿಗೆ ನಿಭಾಯಿಸಿರುವೆ. ಜಿಲ್ಲೆಯಲ್ಲಿ ಕೈಗೊಂಡ ಲೋಕಸಭೆ ಚುನಾವಣೆ ಹೊಸ ಅನುಭವ ನೀಡಿದೆ. ಜಿಲ್ಲಾಡಳಿತದ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗದ ಸಹಾಯ, ಸಹಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಕೆಲವು ಸಂದರ್ಭಗಳಲ್ಲಿ ಕೆಲ ನಿರ್ಧಾರ ಮಾಡುವಾಗ ಗೊಂದಲಕ್ಕೆ ಸಿಲುಕುತ್ತೇವೆ. ಅದೆಲ್ಲವೂ ನಿಭಾಯಿಸುವುದು ಅಷ್ಟು ಸುಲಭದ ಮಾತಲ್ಲ. ಸರ್ಕಾರ ನನಗೆ ನೀಡಿದ್ದ ಅವಕಾಶದಲ್ಲಿ ಬಳ್ಳಾರಿಯಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ಸಮಾಧಾನದಿಂದಲೇ ಬಳ್ಳಾರಿಯಿಂದ ನಿರ್ಗಮಿಸುತ್ತಿದ್ದೇನೆ ಎಂದರು.
ನೂತನ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಮಾತನಾಡಿ, ಬಳ್ಳಾರಿ ಜಿಲ್ಲೆಯು ಆಡಳಿತಕ್ಕೆ ಹೆಸರುವಾಸಿ, ಹಾಗೇಯೇ ಅನೇಕ ಸವಾಲುಗಳಿಂದ ಕೂಡಿದ ಜಿಲ್ಲೆಯಾಗಿದ್ದು, ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯಲ್ಲಿದೆ. ಪ್ರಶಾಂತ್ ಕುಮಾರ್ ಮಿಶ್ರಾ ಅವರ ಕಾಲಾವಧಿಯಲ್ಲಿ ಜಿಲ್ಲೆಯು ಕಂದಾಯ ಆಡಳಿತ ಕಾರ್ಯದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿತ್ತು ಎಂದು ಹರ್ಷ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಡಿರುವ ಅಭಿವೃದ್ಧಿ ಹಾಗೂ ಪ್ರಗತಿಪರ ಕೆಲಸಗಳು ಮುಂದುವರಿಯಲಿವೆ. ಅಧಿಕಾರಿ ವರ್ಗವು ನನಗೂ ಸಹಕಾರ ನೀಡಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಮಾತನಾಡಿ, ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಪ್ರಶಾಂತ್ ಕುಮಾರ್ ಮಿಶ್ರಾ ಅವರೊಂದಿಗಿನ ಬಾಂಧವ್ಯ ಅವರ ಜತೆಯಲ್ಲಿ ನಿರ್ವಹಿಸಿದ ಕರ್ತವ್ಯಕ್ಕೆ ಹೆಮ್ಮೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಾಂತ್ ಕುಮಾರ್ ಮಿಶ್ರಾ ಅವರಿಂದ ಹಲವು ಹೊಸ ವಿಚಾರಗಳು ಕಲಿಯಲು ಅವಕಾಶ ದೊರೆಯಿತು.ಅವರೊಬ್ಬ ಶಿಸ್ತಿನ ಸಿಪಾಯಿಯಂತಿದ್ದರು ಎಂದು ಜಿಪಂಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ತಿಳಿಸಿದರು.ಕಾರ್ಯಕ್ರಮದಲ್ಲಿ ನಿರ್ಗಮಿತ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ಜಿಲ್ಲಾಡಳಿತದಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಬಳಿಕ ನೂತನ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಈ ವೇಳೆ ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್.ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್. ಝುಬೇರ್, ಸಹಾಯಕ ಆಯುಕ್ತ ಪಿ. ಪ್ರಮೋದ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಮತ್ತು ಐದು ತಾಲ್ಲೂಕುಗಳ ತಹಸೀಲ್ದಾರರು ಹಾಗೂ ಇತರರು ಭಾಗವಹಿಸಿದ್ದರು.