ನಮ್ಮ ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರಲ್ಲ: ಸಿದ್ದರಾಮಯ್ಯ

| Published : Apr 03 2024, 01:31 AM IST / Updated: Apr 03 2024, 07:07 AM IST

ನಮ್ಮ ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರಲ್ಲ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಅವರ ಅವಧಿಯಲ್ಲಿ ಇಡೀ ದೇಶದಲ್ಲಿ ಸ್ಕಾಲರ್ ಶಿಪ್ ಗೆ ಯಾವ ಗತಿ ಆಯ್ತು ಅಂತ ನೋಡಿದ್ದೀರಲ್ಲಾ? ಮತ್ತೇಕೆ ಬಿಜೆಪಿ ಕಡೆ ಮುಖ ಮಾಡಬೇಕು

  ಮೈಸೂರು :  ನಮ್ಮ ಸಂವಿಧಾನ ಬದಲಾವಣೆಗೆ ಮುಂದಾದರೆ ಪರಿಸ್ಥಿತಿ ನೆಟ್ಟಗಿರಲ್ಲ. ನಮ್ಮ ಸಂವಿಧಾನದ ಸ್ವರೂಪ ಬದಲಾಯಿಸಿ ದೇಶದ ದುಡಿಯುವ ವರ್ಗಗಳಿಗೆ ವಂಚಿಸಿದರೆ ದೇಶದ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಎಚ್ಚರಿಸಿದರು.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ 45 ಹೆಚ್ಚು ಮಂದಿ ಹೋಬಳಿ ಮಟ್ಟದ ಮುಖಂಡರು ಹಾಗೂ ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರ ಆತ್ಮೀಯರು ಮತ್ತು ಸಂಬಂಧಿಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡ ಬಳಿಕ ಅವರು ಮಾತನಾಡಿದರು.

ನಾನು ಮುಖ್ಯಮಂತ್ರಿ ಆಗಿರುವುದಕ್ಕೆ, ಮೋದಿ ಪ್ರಧಾನ ಮಂತ್ರಿ ಆಗಿರುವುದಕ್ಕೆ ನಮ್ಮ ಸಂವಿಧಾನ ಕಾರಣ. ಬಿಜೆಪಿ ನಮ್ಮ ಈ ಸಂವಿಧಾನ ಬದಲಾವಣೆಯ ಅಜೆಂಡಾ ಇಟ್ಟುಕೊಂಡಿದೆ. ಈ ಸಂವಿಧಾನ ಬದಲಾದರೆ ದೇಶದ ದಲಿತರು, ಶೂದ್ರರು, ಮಹಿಳೆಯರು ಮತ್ತು ಶ್ರಮಿಕ ವರ್ಗಗಳಿಗೆ ಉಳಿಗಾಲವಿಲ್ಲ. ಹೀಗಾಗಿ, ನಾವೆಲ್ಲಾ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಸಂವಿಧಾನ ಉಳಿಯಬೇಕು ಎಂದರೆ ಬಿಜೆಪಿ ಸೋಲಬೇಕು ಎನ್ನುವ ಪಣ ತೊಡಿ ಎಂದು ಅವರು ಕರೆ ನೀಡಿದರು.

ಮೋದಿ ಅವರ ಅವಧಿಯಲ್ಲಿ ಇಡೀ ದೇಶದಲ್ಲಿ ಸ್ಕಾಲರ್ ಶಿಪ್ ಗೆ ಯಾವ ಗತಿ ಆಯ್ತು ಅಂತ ನೋಡಿದ್ದೀರಲ್ಲಾ? ಮತ್ತೇಕೆ ಬಿಜೆಪಿ ಕಡೆ ಮುಖ ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಶೂದ್ರರಿಗೆ ಬಿಜೆಪಿ, ಆರ್ ಎಸ್ಎಸ್ ನ ಗರ್ಭಗುಡಿಯೊಳಗೆ ಪ್ರವೇಶವೇ ಇಲ್ಲ. ಶೂದ್ರರು, ದಲಿತರನ್ನು ಕೇವಲ ಬಳಸಿಕೊಳ್ಳುತ್ತಾರೆ. ಆದರೆ ಆರ್ ಎಸ್ಎಸ್ ನ ಒಳಗೆ ಪ್ರವೇಶ ಕೊಡುವುದಿಲ್ಲ. ಹೀಗಾಗಿ, ಆರ್ ಎಸ್ಎಸ್ ಕಡೆಗೆ ತಲೆ ಕೂಡ ಹಾಕಬೇಡಿ ಎಂದು ಅವರು ಕರೆ ನೀಡಿದರು.

ದಲಿತರು, ಶೂದ್ರರು, ಹಿಂದುಳಿದವರ ವಿರೋಧಿಯಾದ ಬಿಜೆಪಿ, ಆರ್ ಎಸ್ಎಸ್ ಮೀಸಲಾತಿಯನ್ನೂ ವಿರೋಧಿಸುತ್ತದೆ. ಮಂಡಲ್ ವರದಿ ವೇಳೆ ಶೂದ್ರರು ಸಾವಿಗೆ ಕಾರಣರಾದವರು, ನಮ್ಮವರು ಬೆಂಕಿ ಹಚ್ಚಿಕೊಂಡು ಸಾಯುವಂತೆ ಮಾಡಿದವರು ಇವರೇ ತಾನೇ? ನಮ್ಮ ಶತ್ರುಗಳ ಜೊತೆಗೆ ಈ ದೇಶದ ಶೂದ್ರರು, ದಲಿತರು, ಹಿಂದುಳಿದವರು ಏಕೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಾನು ಹಿಂದುವಾಗಿ ಸಾಯುವುದಿಲ್ಲ ಎಂದು ಹೇಳಿ ಬೌದ್ದ ಧರ್ಮಕ್ಕೆ ಹೋಗಿದ್ದಕ್ಕೆ ಮುಖ್ಯ ಕಾರಣ ಜಾತಿ ಅಸಮಾನತೆ ಮತ್ತು ಸಾಮಾಜಿಕ ಅಸಮಾನತೆಯೇ ಕಾರಣ ಎಂದರು.

ಪ್ರಸಾದ್ ಬೆಂಬಲಿಗರು ಸೇರ್ಪಡೆ

ಇದೇ ವೇಳೆ ಸಂಸದ ವಿ. ಶ್ರೀನಿವಾಸಪ್ರಸಾದ್ ಸಹೋದರ ವಿ. ರಾಮಸ್ವಾಮಿ, ಭರತ್ ರಾಮಸ್ವಾಮಿ, ಮುಖಂಡರಾದ ಶಿವಕುಮಾರ್, ಸಂತೋಷ್, ಸಿ.ಜಿ. ಶಿವಕುಮಾರ್, ಶಾಂತರಾಮ್ ಶೆಟ್ಟಿ, ಮದನ್, ಸಿದ್ದಲಿಂಗ, ವೆಂಕಟೇಶ್, ರವಿ, ನಾಗೇಶ್, ಸುರೇಶ್ ಕುಮಾರ್, ಶ್ರೀನಿವಾಸ್ ಮೊದಲಾದವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ. ಲಕ್ಷ್ಮಣ, ಶಾಸಕ ತನ್ವೀರ್ ಸೇಠ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಮುಖಂಡರಾದ ಎಂ. ಶಿವಣ್ಣ, ಸಿದ್ದರಾಜು, ನಾಗೇಶ್, ಬಿ.ಎಂ. ರಾಮು ಮೊದಲಾದವರು ಇದ್ದರು.

ಕೇಂದ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳು ಕಡಿಮೆ ಇದೆ. ನಾವು ಅಧಿಕಾರಕ್ಕೆ ಬಂದರೆ ನಾವು ರಾಜ್ಯದಲ್ಲಿ ತಂದಿರುವ ದಲಿತ ಮತ್ತು ಹಿಂದುಳಿದ ವರ್ಗಗಳ ಪರವಾದ ಕಾನೂನುಗಳನ್ನು ರಾಷ್ಟ್ರ ಮಟ್ಟದಲ್ಲೂ ಜಾರಿಗೆ ತರಲಾಗುವುದು. ಈ ಬಗ್ಗೆ ರಾಹುಲ್ ಗಾಂಧಿ ಅವರ ಜೊತೆಗೂ ಮಾತಾಡಿ ಪ್ರಣಾಳಿಕೆಯಲ್ಲಿ ಸೇರಿಸಲು ಹೇಳಿದ್ದೇನೆ.