ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ದಲಿತನಾದ ನನ್ನನ್ನು ಸುದೀರ್ಘ 45 ವರ್ಷಗಳ ಕಾಲ ಎತ್ತಿ ಬೆಳೆಸಿದ ಜನರ ಋಣ ತೀರಿಸಲು ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ನಗರದ ಹೊರವಲಯದಲ್ಲಿರುವ ವಿಜಯಪುರ-ಬಾಗಲಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವನಹಳ್ಳಿ- ಹೊನಗಹಳ್ಳಿ ಸಮೀಪದಲ್ಲಿ ಅಂದಾಜು ₹71 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೋ ಒಂದು ಜಾತಿಯಿಂದ ರಾಜಕಾರಣ ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದಾಗ ರಾಜಕೀಯವಾಗಿ ಸಾಧಿಸಲು ಸಾಧ್ಯ. ಅಂತೆಯೇ ನನ್ನ ಗೆಲುವಿಗೆ ಜನರ ಆಶೀರ್ವಾದವೇ ಕಾರಣ. ನಾನು ಗೆದ್ದಿಲ್ಲ; ಗೆಲ್ಲಿಸಿದ್ದೀರಿ, ನಾನು ನಾಯಕನಲ್ಲ; ನಾಯಕ ಮಾಡಿದ್ದೀರಿ. ಇಷ್ಟೆಲ್ಲಾ ಅಭಿವೃದ್ಧಿ ಆಗಿದ್ದು ಅದು ನನ್ನಿಂದ ಅಲ್ಲ, ನೀವು ಕೊಟ್ಟ ಅಧಿಕಾರದಿಂದ, ಹೀಗಾಗಿ ಈ ಅಭಿವೃದ್ಧಿಗೆ ಕಾರಣ ನಾನಲ್ಲ ನೀವು ಎಂದು ಭಾವುಕರಾಗಿ ನುಡಿದರು.ಅಭಿವೃದ್ಧಿ ವಿಚಾರದಲ್ಲಿ ನಾನೆಂದೂ ರಾಜಕಾರಣ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕೇಂದ್ರದಿಂದ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಅಂದಾಜು ₹10 ಕೋಟಿ ಅನುದಾನ ತಂದಿದ್ದೇನೆ. ಇಂದು ಗ್ಯಾರಂಟಿ ಯೋಜನೆಗಳಿಂದಾಗಿ ದಿವಾಳಿ ಎದ್ದಿರುವ ಕಾಂಗ್ರೆಸ್ ಸರ್ಕಾರದ ಶಾಸಕರು ಕೇಂದ್ರದ ಅನುದಾನದಲ್ಲಿಯೇ ಭೂಮಿಪೂಜೆ ನೆರವೇರಿಸುತ್ತಿರುವುದು. ಹೀಗಾಗಿ ಅಭಿವೃದ್ಧಿ ವಿಚಾರದಲ್ಲಿ ನಾನೆಂದೂ ರಾಜಕಾರಣ ಮಾಡಿಲ್ಲ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲಿಗೆ ಬಿದ್ದು ಕೂಡಗಿಯಲ್ಲಿ ಎನ್‌ಟಿಪಿಸಿ ಸ್ಥಾಪಿಸುವಂತೆ ಮಾಡಿದೆ ಎಂದ ಅವರು, ಮಾತೆತ್ತಿದರೆ ಪ್ರಧಾನಿ ನರೇಂದ್ರ ಮೋದಿ ಏನು ಅಭಿವೃದ್ಧಿ ಮಾಡಿದ್ದಾರೆ? ಎನ್ನುವವರು ವಿಜಯಪುರ ಜಿಲ್ಲೆಯಲ್ಲಿ ಆಗಿರುವ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನೊಮ್ಮೆ ನೋಡಲಿ ಎಂದು ಕಾಂಗ್ರೆಸ್ ಮುಖಂಡರಿಗೆ ಸವಾಲೆಸೆದರು.
ವಿಜಯಪುರ ನಗರದ ಸುತ್ತಲೂ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ವಜ್ರಹನುಮಾನ ರೈಲ್ವೆ ಮೇಲ್ಸೇತುವೆ, ಇಬ್ರಾಹಿಂಪುರ ರೈಲ್ವೆ ಗೇಟ್ ಸೇರಿದಂತೆ ಹಲವು ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಸೋಲಾಪುರ ಚತುಷ್ಪಥ ಹೆದ್ದಾರಿ ಮತ್ತು ಮೇಲ್ಸೇತುವೆ ಕಾಮಗಾರಿ, ವಿಜಯಪುರ ನಗರದ ವರ್ತುಲ ರಸ್ತೆ, ಅಥಣಿ ಹೆದ್ದಾರಿ, ವಿಜಯಪುರ-ಹುಬ್ಬಳ್ಳಿ ಚತುಷ್ಪಥ ಹೆದ್ದಾರಿ, ವಿಮಾನ ನಿಲ್ದಾಣ, ಎನ್‌ಟಿಪಿಸಿ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಿಜೆಪಿ ಕೊಡುಗೆ ಅಪಾರ. ಕೆರೆಗೆ ನೀರು ತುಂಬುವ
ಯೋಜನೆ ಬಿಜೆಪಿಯ ಕಾಣಿಕೆ. ಇದೀಗ ಆಲಮಟ್ಟಿ ಎತ್ತರ ಹೆಚ್ಚಿಸಲು ಮಹಾರಾಷ್ಟ್ರ ತಗಾದೆ ತೆಗೆಯುತ್ತಿದ್ದು, ಅದರ ವಿರುದ್ಧ ಒಟ್ಟಾಗಿ ಹೋರಾಟ ನಡೆಸಬೇಕಲ್ಲದೇ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಮೀಸಲಿರಿಸಲು ಒಟ್ಟಾಗಿ ಶ್ರಮಿಸೋಣಎಂದು ಹೇಳಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ವಿಜಯಪುರದ ಸಂಸದ ರಮೇಶ ಜಿಗಜಿಣಗಿಯವರ ಪ್ರಯತ್ನದ ಫಲವಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಆಗಿವೆ. ಜಿಲ್ಲೆಗೆ ಕೋಟ್ಯಂತರ ರು. ಅನುದಾನ ಹರಿದು ಬಂದಿದೆ. ವಿಜಯಪುರ ರಿಂಗ್ ರೋಡ್ ಗಮನ ಸೆಳೆಯುತ್ತಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಾವಿರಾರು ಕೋಟಿ ರು. ಅನುದಾನ ತಂದಿದ್ದಾರೆ. ಅಲ್ಲದೇ ಅನೇಕ ಅಭಿವೃದ್ಧಿ ಕಾರ್ಯಗಳ ಕುರಿತು ಜನರ ಮನ ಮುಟ್ಟಿಸುವ ಕೆಲಸ ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಜಿಗಜಿಣಗಿ ಅವರು ಅಜಾತ ಶತೃ ಎಂಬ ಕಾರಣಕ್ಕಾಗಿಯೇ ಜಿಲ್ಲೆಯಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳಾಗಲು ಸಾಧ್ಯವಾಗಿದೆ ಎಂದರು.
ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ಜಿಲ್ಲೆಯ ಇತಿಹಾಸದಲ್ಲಿಯೇ ಆಗದಂಥ ಅಭಿವೃದ್ಧಿ ಕಾರ್ಯಗಳು ಸಂಸದರಮೇಶ ಜಿಗಜಿಣಗಿ ಅವರ ಅವಧಿಯಲ್ಲಾಗಿವೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ನೀಡಿದ ₹8-10 ಕೋಟಿ ಅನುದಾನದಲ್ಲಿ ಭೂಮಿ ಪೂಜೆ ನಡೆಯುತ್ತಿದ್ದರೂ ಯಾವೊಬ್ಬ ಶಾಸಕ ಸಹ ಮೋದಿ ಸರ್ಕಾರದ ಸಾಧನೆ ಹೇಳಿಕೊಳ್ಳುತ್ತಿಲ್ಲ. ಸಂಸದರ ಹೆಸರು ಸ್ಮರಿಸುತ್ತಿಲ್ಲ ಎಂದರು.
ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಆರ್.ಎಸ್.ಪಾಟೀಲ ಕುಚಬಾಳ, ಸಂಜೀವ ಐಹೊಳೆ, ಉಮೇಶ ಕೋಳಕೂರ, ಅನೀಲ ಜಮಾದಾರ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ,ಮಳುಗೌಡ ಪಾಟೀಲ, ರವಿ ವಗ್ಗೆ, ವಿಜಯ್ ಜೋಶಿ ಮುಂತಾದವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))