ಕೂಲಿ ಕೇಳಿದ್ದೆ, ಜನತೆ ನನಗೆ ವಿಶ್ರಾಂತಿ ನೀಡಿದರು: ಡಿಕೆ ಸುರೇಶ್ ಭಾವುಕ

| Published : Jun 10 2024, 12:30 AM IST

ಸಾರಾಂಶ

ನಾನು ಸಾಕಷ್ಟು ಕೆಲಸ ಮಾಡಿದ್ದೇನೆ, ಜನತೆ ನನಗೆ ಕೂಲಿ ಕೊಟ್ಟೇ ಕೊಡುತ್ತಾರೆ, ಕನಕಪುರದ ಜನ ನನ್ನ ಕೈ ಬಿಡುವುದಿಲ್ಲ ಎಂದು ಈ ಚುನಾವಣೆಯಲ್ಲಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಕ್ಷೇತ್ರದ ಜನರು ನೀನು ಕೆಲಸ ಮಾಡಿದ್ದು ಸಾಕು, ರೆಸ್ಟ್ ತೆಗೆದುಕೊ ಎಂದು ನಿಮ್ಮ ಸೂರಿಯನ್ನು ಕನಕಪುರಕ್ಕೆ ವಾಪಸ್ ಕಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕನಕಪುರ

ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ಎರಡನೇ ಬಾರಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದ ಮಾಜಿ ಸಂಸದ ಡಿಕೆ ಸುರೇಶ್ ಚುನಾವಣೆಯಲ್ಲಿ ದುಡಿದ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಸಭೆ ಕರೆದಿದ್ದರು.

ನಗರದ ಮೈಸೂರು ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಿದ ನನಗೆ ಕೂಲಿ ಕೊಡಿ ಎಂದು ಕೇಳಿದ್ದೆ, ಆದರೆ ನೀವು ಸರಿಯಾಗಿ ಕೆಲಸ ಮಾಡಿಲ್ಲ, ನಿಮಗಿಂತಲೂ ಉತ್ತಮರಿದ್ದಾರೆ ಎಂದು ಮತದಾರರು ನನ್ನನ್ನು ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ. ನನ್ನ ಆರೋಗ್ಯ, ಸಂಸಾರ ನೋಡಿಕೊಳ್ಳದೇ ನನಗೆ ನೀವೇ ಎಲ್ಲಾ ಎಂದು ಹಗಲು - ರಾತ್ರಿ ನಿಸ್ವಾರ್ಥದಿಂದ ಕೆಲಸ ಮಾಡಿದ್ದೇನೆ. ನಾನು ಸತ್ತರೆ ಲೋಕಸಭೆಯಲ್ಲಿ ನನ್ನ ಹೆಸರು ಇರುತ್ತದೆ, ಅದಕ್ಕೆ ಅವಕಾಶವನ್ನು ಕೊಟ್ಟಿದ್ದೀರಿ, ಇದಕ್ಕಿಂತಲೂ ಬೇರೆ ಭಾಗ್ಯ ನನಗೆ ಬೇಕಿಲ್ಲ ಎಂದು ಸಭೆ ಸೇರಿದ್ದ ನೂರಾರು ಮುಖಂಡರು, ಕಾರ್ಯಕರ್ತರ ಎದುರು ಭಾವುಕರಾದರು.

ನಾನು ಗೆಲ್ಲಬೇಕು ಎಂದು ಎಂಟು ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರು, ಶಾಸಕರು ಹಗಲು- ರಾತ್ರಿ ಕೆಲಸ ಮಾಡಿ, ನೀವು ಸಹ ನನ್ನ ಗೆಲುವಿಗೆ ಶ್ರಮ ಪಟ್ಟಿದ್ದೀರಿ, ಆದರೆ ಅದು ಸಾಧ್ಯವಾಗಲಿಲ್ಲ. ನಾನು ಯಾರನ್ನೂ ದೂಷಿಸುವುದಿಲ್ಲ, ಅದಕ್ಕೆ ನಿಮಗೆ ಧನ್ಯವಾದ ಅರ್ಪಿಸಲು ಬಂದಿದ್ದೇನೆ ಎಂದು ಹೇಳಿದರು.

ರಾಜಕಾರಣದಲ್ಲಿ ಎಲ್ಲರಿಗೂ ಗೆಲುವು ಸಿಗುವುದಿಲ್ಲ, ನಾನು ರಾಜಕಾರಣದಲ್ಲಿ ಇರಲಿಲ್ಲ, ನಿಮ್ಮೊಂದಿಗೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡಿದ್ದೆ. ನಮ್ಮ ಸೂರಿ ಗೆಲ್ಲಬೇಕು ಎಂದು 2013 ಉಪಚುನಾವಣೆಯಲ್ಲಿ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಟ್ಟಿದ್ದರು, ಆದರೆ ನಾನು ಲೋಕಸಭೆಗೆ ಹೋಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ಪಂಚಾಯಿತಿ ಸದಸ್ಯನಾಗುವ ಆಸೆಯೂ ನನಗೆ ಇರಲಿಲ್ಲ, ಅನಿರೀಕ್ಷಿತವಾಗಿ ರಾಜಕಾರಣ ಪ್ರವೇಶ ಮಾಡಿದೆ, ಹತ್ತು ವರ್ಷ ಎಂಟು ತಿಂಗಳು ಕಾಲ ಕ್ಷೇತ್ರದ ಅಭಿವೃದ್ಧಿ ಮತ್ತು ರಾಜ್ಯದ ಧ್ವನಿ ಆಗಲು ನನಗೆ ಅವಕಾಶ ಕೊಟ್ಟಿದ್ದೀರಿ ಎಂದು ಎಲ್ಲರಿಗೂ ಸಾಷ್ಟಾಂಗ ನಮಸ್ಕಾರ ಅರ್ಪಿಸುವುದಾಗಿ ತಿಳಿಸಿದರು.

ನಾನು ಸಾಕಷ್ಟು ಕೆಲಸ ಮಾಡಿದ್ದೇನೆ, ಜನತೆ ನನಗೆ ಕೂಲಿ ಕೊಟ್ಟೇ ಕೊಡುತ್ತಾರೆ, ಕನಕಪುರದ ಜನ ನನ್ನ ಕೈ ಬಿಡುವುದಿಲ್ಲ ಎಂದು ಈ ಚುನಾವಣೆಯಲ್ಲಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಕ್ಷೇತ್ರದ ಜನರು ನೀನು ಕೆಲಸ ಮಾಡಿದ್ದು ಸಾಕು, ರೆಸ್ಟ್ ತೆಗೆದುಕೊ ಎಂದು ನಿಮ್ಮ ಸೂರಿಯನ್ನು ಕನಕಪುರಕ್ಕೆ ವಾಪಸ್ ಕಳಿಸಿದ್ದಾರೆ. ಆದರೆ ನನಗೆ ಬೇಸರವಿಲ್ಲ, ನಿಮ್ಮ ಜೊತೆ ಕಾರ್ಯಕರ್ತನಾಗಿ ಓಡಾಡುವಾಗ ಇದ್ದ ಖುಷಿ, ಲೋಕಸಭಾ ಸದಸ್ಯನಾದ ಮೇಲೆ ನನಗೆ ಸಿಗುತ್ತಿರಲಿಲ್ಲ. ಬಹಳ ಒತ್ತಡದಿಂದ ಕೆಲಸ ಮಾಡುತ್ತಿದ್ದೆ. ಯಾರಿಗೂ ಎಂತದ್ದೇ ಸಂದರ್ಭದಲ್ಲಿಯೂ ಕೆಟ್ಟದ್ದನ್ನು ಬಯಸಿಲ್ಲ, ಆದರೂ ಈ ಸೋಲು ಆಶ್ಚರ್ಯ ತರಿಸಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್. ರವಿ ಮಾತನಾಡಿ, ನಾವ್ಯಾರು ನಿರೀಕ್ಷೆ ಮಾಡದೇ ಇರುವ ಚುನಾವಣೆಯನ್ನು ಎದುರಿಸಿದ್ದೇವೆ. ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತೇನೋ ಎನಿಸುತ್ತಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಮಾನವೇ ಅಂತಿಮ. ಸೋಲನ್ನು ನಾವು ಒಪ್ಪಿಕೊಳ್ಳಲೇಬೇಕು, ಜನ ಬದಲಾವಣೆ ಬಯಸಿದ್ದರು, ಕನಕಪುರದಲ್ಲಿ 75,000 ಅಧಿಕ ಮತಗಳನ್ನು ವಿರೋಧಿಗಳಿಗೆ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ರೂರಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಶ್ರೀಕಂಠು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್, ಜಿಪಂ ಮಾಜಿ ಅಧ್ಯಕ್ಷ ಬಸಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್‌ಕೆ ಕೃಷ್ಣಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ದಿಲೀಪ್, ಗ್ರಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮುನಿ ಹುಚ್ಚೇಗೌಡ, ಶಾಂತಕುಮಾರ್ ರಾಜೇಂದ್ರ, ಗಣೇಶ್, ಕೆಪಿಸಿಸಿ ಸದಸ್ಯೆ ರೋಹಿಣಿ, ಪ್ರಿಯ ಸೇರಿ ಹಲವು ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸೋಲು ಶಾಶ್ವತವಲ್ಲ, ಹೊಣೆ ನಾನೇ ಹೊರುವೆ:

ಕೆಲವರು ನನ್ನ ಸೋಲಿನಿಂದ ಸಂತೋಷ ಪಟ್ಟಿದ್ದಾರೆ, ಆದರೆ ಕನಕಪುರದ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿಯನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.

ನಾನು ಜಾತಿ ಆಧಾರದ ಮೇಲೆ ರಾಜಕಾರಣ ಮಾಡಿಕೊಂಡು ಬಂದವನಲ್ಲ, ಯಾರ ಮೇಲೂ ಯಾವುದೇ ಕೇಸು ಹಾಕಿಕೊಂಡು ರಾಜಕಾರಣ ಮಾಡಿದವನಲ್ಲ. ಆದರೆ ಗುಂಡಾಗಿರಿ ಮಾಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಾರೆ. ಕೆಲವು ಕಚೇರಿಗಳಲ್ಲಿ ಅಧಿಕಾರಿಗಳು ದುರ್ನಡತೆ ತೋರಿಸಿದ್ದರು, ಅವರ ವಿರುದ್ಧ ಮಾತನಾಡಿದ್ದೇನೆ ಹೊರತು ಯಾರದ್ದೋ ಆಸ್ತಿ ಬರೆದುಕೊಡಿ ಎಂದು ನಾನು ಕೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾನು ಮಾತು ಕೊಟ್ಟಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಈ ಜಿಲ್ಲೆಯಲ್ಲಿ ಪೂರ್ಣಗೊಳಿಸುತ್ತೇನೆ. ನನಗೆ ಅಧಿಕಾರ ಬೇಕಾಗಿಲ್ಲ, ಅಧಿಕಾರಕ್ಕಾಗಿ ಅರ್ಜಿ ಹಿಡಿದುಕೊಂಡು ಹೋದವನಲ್ಲ, ನನಗೀಗ ಯಾವುದೇ ಒತ್ತಡವಿಲ್ಲ, ನನ್ನೆಲ್ಲಾ ಜವಾಬ್ದಾರಿಗಳಿಂದ ನನ್ನನ್ನು ವಿಮುಕ್ತಿ ಮಾಡಿದ್ದೀರಿ, ಅದಕ್ಕೆ ನಾನು ನಿಮಗೆ ಧನ್ಯವಾದ ಹೇಳಲು ಬಂದಿದ್ದೇನೆ ಎಂದರು. ಈ ಸೋಲು ಶಾಶ್ವತವಲ್ಲ. ಈ ಗೆಲುವು ಬಿಜೆಪಿ ಅಥವಾ ಜೆಡಿಎಸ್ ನದಲ್ಲ, ಇದು ನನ್ನ ಮೇಲಿನ ಆಕ್ರೋಶದ ಗೆಲುವು. ಹಾಗಾಗಿ ಇದರ ಹೊಣೆಯನ್ನು ನಾನೇ ಹೊರುತ್ತೇನೆ, ವಾರದಲ್ಲಿ ಎರಡು ದಿನ ಕ್ಷೇತ್ರದಲ್ಲಿ ಸಿಗುತ್ತೇನೆ ಎಂದು ನುಡಿದರು.