ಸಾರಾಂಶ
ಹಾಸನಾಂಬೆ ದರ್ಶನ ಪಡೆದ ಎಚ್ಡಿಕೆ ದಂಪತಿ । ಕುಟುಂಬ ಸಮೇತ ಆಗಮನ
ಕನ್ನಡಪ್ರಭ ವಾರ್ತೆ ಹಾಸನಭಗವಂತ ನಮ್ಮಿಂದ ಒಳ್ಳೆ ಕೆಲಸ ಮಾಡಲು ಶಕ್ತಿ ಕೊಡು ಎಂದು ಕೇಳಿದ್ದೇನೆ. ಈ ಬಾರಿ ನನ್ನ ಮಗ ಚುನಾವಣೆಗೆ ನಿಂತಿದ್ದಾನೆ. ಕೆಲ ಕಾರಣಗಳಿಂದ ಕಳೆದ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದನು. ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸುವಂತೆ ಹಾಸನಾಂಬೆಯಲ್ಲಿ ಬೇಡಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಭಾನುವಾರ ಪತ್ನಿ ಅನಿತಾ ಕುಮಾರಸ್ವಾಮಿ, ಸೊಸೆ ರೇವತಿ ನಿಖಿಲ್ ಹಾಗೂ ಮೊಮ್ಮಗ, ಶಾಸಕ ಎಚ್‌ಪಿ.ಸ್ವರೂಪ್ ಜೊತೆಗೆ ಬಂದು ಅಧಿದೇವತೆ ಹಾಸನಾಂಬೆ ದೇವಿಯ ದರ್ಶನ ಪಡೆದು ಮಾತನಾಡಿದರು.ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆದು ನಾಡಿನ ಜನತೆಗೆ ವಿಶೇಷ ದರ್ಶನ ಕೊಡುತ್ತಿರುವುದನ್ನು ನಾವು ನೋಡಿದ್ದೇವೆ. ಈ ಬಾರಿ ಹಾಸನ ಜಿಲ್ಲಾಡಳಿತದಿಂದ ಉತ್ತಮವಾಗಿ ವ್ಯವಸ್ಥೆ ಕಲ್ಪಿಸಿ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಭಕ್ತರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಸನಾಂಬೆ ಪವಾಡವನ್ನು ನಾವು ಚಿಕ್ಕಮಕ್ಕಳಿಂದ ಗಮನಿಸಿದ್ದೇವೆ. ನಾನು ಚಿಕ್ಕವಯಸ್ಸಿನಲ್ಲಿ ಇದ್ದಾಗ ಇಲ್ಲಿ ಒಂದುವರೆ ತಿಂಗಳು ಜಾತ್ರೆ ನಡೆಯುತ್ತಿತ್ತು ಎಂದು ಸ್ಮರಿಸಿಕೊಂಡರು.
ನಮ್ಮ ಹಳೆಯ ಸಂಪ್ರದಾಯದಂತೆ ಬಂಧು ಬಾಂಧವರು ಉತ್ತಮ ಸಂಬಂಧ ಇಟ್ಟುಕೊಳ್ಳುವಂತಾಗಲಿ. ದೇವರ ಆಶೀರ್ವಾದದಿಂದ ನಮ್ಮ ಬೇಡಿಕೆಗಳು ಈಡೇರುತ್ತವೆ ಎಂದರು.ಎಚ್.ಡಿ.ಕುಮಾರಸ್ವಾಮಿ ಅವರು ಮೊದಲು ಹಾಸನಾಂಬ ದೇವಿ ದರ್ಶನ ಪಡೆದು, ದರ್ಭಾರ್ ಗಣಪತಿ ನಂತರ ಶ್ರೀ ಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿದರು.
ಶಾಸಕರಾದ ಸಿ.ಎನ್. ಬಾಲಕೃಷ್ಣ, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಜಿಲ್ಲಾ ಮಾಧ್ಯಮ ವಕ್ತಾರ ಹೊಂಗೆರೆ ರಘು, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಉಪ ವಿಭಾಗಧಿಕಾರಿ ಮಾರುತಿ, ಎಸ್ಪಿ ಮಹಮ್ಮದ್ ಸುಜೀತಾ ಇತರರು ಹಾಜರಿದ್ದರು.