ನಾನು ಹೊಗಳಿಕೆ ಮಾತುಗಳನ್ನು ಆಡುವುದಿಲ್ಲ, ನುಡಿದಂತೆ ನಡೆಯುತ್ತೇನೆ. ಗ್ರಾಮವನ್ನು ಉಳಿಸಿಕೊಳ್ಳಲು ನಿಮ್ಮೊಂದಿಗೆ ಇರುತ್ತೇನೆ. ನನ್ನ ಬಗ್ಗೆ ಕೆಲವರು ಹೊಗಳುತ್ತಾರೆ, ಕೆಲವರು ತೆಗಳುತ್ತಾರೆ. ಆದರೆ ನಾನು ಹಿಗ್ಗುವುದಿಲ್ಲ, ಅಂಜುವುದಿಲ್ಲ. ಬಡ ಕುಟುಂಬಗಳೇ ನನಗೆ ಮುಖ್ಯ ಎಂದರು.
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರನಮ್ಮ ತಂದೆ ಸಾಹುಕಾರನಲ್ಲ, ನಾನು ಬಡ ಕುಟುಂಬದಿಂದ ಬಂದವನು. ಬಡವರ ಕಷ್ಟನಷ್ಟಗಳನ್ನು ಹತ್ತಿರದಿಂದ ಕಂಡಿರುವುದರಿಂದ ಸುಳ್ಳು ಹೇಳುವುದು ನನಗೆ ಬರುವುದಿಲ್ಲ ಎಂದು ಮಾಜಿ ಶಾಸಕ ಕೆ.ಆರ್. ರಮೇಶ್‌ಕುಮಾರ್ ಹೇಳಿದರು.ತಾಲೂಕಿನ ಶಿವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಹೊಗಳಿಕೆ ಮಾತುಗಳನ್ನು ಆಡುವುದಿಲ್ಲ, ನುಡಿದಂತೆ ನಡೆಯುತ್ತೇನೆ. ಗ್ರಾಮವನ್ನು ಉಳಿಸಿಕೊಳ್ಳಲು ನಿಮ್ಮೊಂದಿಗೆ ಇರುತ್ತೇನೆ. ನನ್ನ ಬಗ್ಗೆ ಕೆಲವರು ಹೊಗಳುತ್ತಾರೆ, ಕೆಲವರು ತೆಗಳುತ್ತಾರೆ. ಆದರೆ ನಾನು ಹಿಗ್ಗುವುದಿಲ್ಲ, ಅಂಜುವುದಿಲ್ಲ. ಬಡ ಕುಟುಂಬಗಳೇ ನನಗೆ ಮುಖ್ಯ ಎಂದರು.ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಇದ್ದ 35 ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಆರ್ಥಿಕವಾಗಿ ಸಬಲರಾಗುವಂತೆ ಪ್ರತಿ ಸಂಘದಿಂದ ಒಬ್ಬರಿಗೆ ಡಿಸಿಸಿ ಬ್ಯಾಂಕ್ ಮೂಲಕ ಶೂನ್ಯ ಬಡ್ಡಿಯಲ್ಲಿ 50 ಸಾವಿರ ರು. ಸಾಲ ಕೊಡಿಸಲಾಗಿದೆ. ವಸತಿ ಯೋಜನೆಯಡಿ ಕ್ಷೇತ್ರದ ಬಡವರಿಗೆ ಮನೆಗಳನ್ನು ಒದಗಿಸಲಾಗಿದೆ. ವಿರೋಧಿಗಳಿಗೆ ಚಾಟಿ ಬೀಸಿ, ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದರು.ಹಿಂದಿನ ಚುನಾವಣೆಯಲ್ಲಿ ಕೆಲವರು ಬೆನ್ನಿಗೆ ಚೂರಿ ಹಾಕಿದರು. ಆದರೂ ನನಗೆ ನನ್ನ ಮತದಾರರ ಮೇಲೆ ನಂಬಿಕೆ ಇದೆ. ಮುಂದಿನ ಚುನಾವಣೆಗೆ ಇನ್ನೂ 2 ವರ್ಷ 3 ತಿಂಗಳು 21 ದಿನ ಬಾಕಿ ಇದೆ. ಅಂದು ಯಾರು ಇರುತ್ತಾರೋ ಇಲ್ಲವೋ ದೇವರಿಗೇ ಗೊತ್ತು ಎಂದು ಹೇಳಿದರು.ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಈಗಾಗಲೇ ಸರ್ಕಾರ ಹಾಗೂ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಗ್ರಾಮಸ್ಥರು ತಲೆಕೆಡಿಸಿಕೊಳ್ಳಬಾರದು, ನೆಮ್ಮದಿಯಿಂದ ನಿದ್ರೆ ಮಾಡಿ, ನಾನು ನಿಮ್ಮೊಂದಿಗಿದ್ದೇನೆ ಎಂದು ಭರವಸೆ ನೀಡಿದರು. ಮನೆ ಕಟ್ಟುವುದೂ, ಗ್ರಾಮ ಕಟ್ಟುವುದೂ ನನಗೆ ಗೊತ್ತು ಎಂದರು.ಅಡ್ಡಗಲ್ ಕ್ಷೇತ್ರದ ಕೋಮುಲ್ ನಿರ್ದೇಶಕ ಕೆ.ಕೆ. ಮಂಜುನಾಥರೆಡ್ಡಿ ಮಾತನಾಡಿ, ಅರಣ್ಯ ಇಲಾಖೆಯ ದೌರ್ಜನ್ಯಕ್ಕೆ ಒಳಗಾದ ಗ್ರಾಮಗಳ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಮಾಜಿ ಶಾಸಕ ಕೆ.ಆರ್.ರಮೇಶ್‌ಕುಮಾರ್ ನಮ್ಮ ಪ್ರಜೆಗಳು, ಅವರ ಉಸಿರು ಇರುವವರೆಗೆ ಬಡ ಕುಟುಂಬಗಳಿಗೆ ಭಯವಿಲ್ಲ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸಂಜಯ್ ರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಕೋಡಿಪಲ್ಲಿ ಸುಬ್ಬಿರೆಡ್ಡಿ, ತಾ.ಪಂ. ಮಾಜಿ ಅಧ್ಯಕ್ಷ ಗರಪ್ಪ, ಮುಖಂಡರಾದ ಕೇತುಗಾನಹಳ್ಳಿ ಕೆ.ಎಂ.ನಾಗರಾಜು, ವೆಂಕಟೇಶ್, ಶಿವಪುರ ಜಿ.ವೆಂಕಟೇಶ್, ಜಗದೀಶ್ ಕುಮಾರ್, ಜಿ.ಗರಪ್ಪ, ವಿ.ಶ್ರೀನಿವಾಸ್, ಮುರಳಿ, ವಲ್ಲಪ್ಪ, ಎಸ್‌ಜಿವಿ ವೆಂಕಟರಮಣ ಇದ್ದರು.