ಕನ್ನಡಪ್ರಭ ವಾರ್ತೆ ರಾಮನಗರ
ನಾನು ಬಜೆಟ್ ಬಗ್ಗೆ ಮಾತನಾಡಿಲ್ಲ, ನನ್ನ ಕ್ಷೇತ್ರಕ್ಕಾದ ಅನ್ಯಾಯ, ನೋವನ್ನು ಹೇಳಿಕೊಂಡಿದ್ದೇನೆ. ಯಾರು ಏನು ಬೇಕಾದರೂ ಹೇಳಿ ಕೊಳ್ಳಲಿ ಸಂತೋಷ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನಗಾದ ನೋವನ್ನು ಹೇಳಿಕೊಂಡಿದ್ದೇನೆ. ಬಜೆಟ್ ವಿಚಾರವಾಗಿ ನಾನು ಮಾತನಾಡಿಲ್ಲ. ನನ್ನ ಕ್ಷೇತ್ರಕ್ಕೆ ಏನು ಆಗಬೇಕಿತ್ತು ಅದು ಆಗಿಲ್ಲ. ಯಾರು ಏನಾದರೂ ಹೇಳಿಕೊಳ್ಳಲಿ, ಒಳ್ಳೆಯದಾಗಿದ್ದರೆ ಒಪ್ಪಿಕೊಳ್ಳಲಿ, ಕೆಟ್ಟದಾಗಿದ್ದರೆ ತಿರಸ್ಕಾರ ಮಾಡಲಿ ಎಂದರು.
ನಾನು ಸಾಕಷ್ಟು ಬಾರಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೇನೆ. ಮೂರು ವರ್ಷಗಳ ಹಿಂದೆ ಪ್ರವಾಹ ಬಂದು ಅನಾಹುತ ಸೃಷ್ಟಿಸಿತ್ತು. ಅದನ್ನು ಮುಖಾಮುಖಿಯಾಗಿ ಫೋಟೋಗಳ ಸಮೇತ ಕ್ಷೇತ್ರದ ವಾಸ್ತವತೆಯನ್ನು ವಿವರಿಸಿದ್ದೆ. ಇಷ್ಟಾದರೂ ನನ್ನ ಮನವಿಗೆ ಸ್ಪಂದಿಸಿಲ್ಲ ಎನ್ನುವ ನೋವಿದೆ ಅಷ್ಟೇ ಎಂದು ಹೇಳಿದರು.ಮೈಕ್ರೋ ಫೈನಾನ್ಸ್ ನಿಂದ ಕ್ಷೇತ್ರದಲ್ಲಿ 2800 ಮನೆ ಹರಾಜಿಗೆ ಬಂದಿದೆ. ಕೆಎಸ್ಎಂಬಿಗೆ ₹100 ಕೋಟಿ ಅನುದಾನ ಕೇಳಿದ್ದೆ ಕೊಟ್ಟಿಲ್ಲ. ರಸ್ತೆ, ಚರಂಡಿ ದುರಸ್ತಿಗೆ ಹಣ ಕೊಟ್ಟಿಲ್ಲ. ಸರ್ಕಾರದ ಖಜಾನೆ ಖಾಲಿ ಆಗಿಲ್ಲ, ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆದರೆ ನಮ್ಮಲ್ಲಿ ಆಗಿದ್ದ ಹಾನಿ ಸರಿಮಾಡುವುದಕ್ಕೆ ಹಣ ಕೇಳಿದ್ದೆ. 100 ರುಪಾಯಿ ಕೇಳಿದ್ದಕ್ಕೆ 5 ರುಪಾಯಿನಾದರೂ ಕೊಡಬಾರದಾ ಎಂದು ಪ್ರಶ್ನಿಸಿದರು.
ಬಹಿರಂಗ ಹೇಳಿಕೆ ನೀಡಿದರೆ ಮುಂದೆ ಟಿಕೆಟ್ ಕೊಡುವಾಗ ಹೈಕಮಾಂಡ್ ಇದನ್ನು ಗಮನಿಸುತ್ತದೆ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್ , ಅವರು ನಮ್ಮ ನಾಯಕರು, ಏನು ಬೇಕಾದರೂ ಹೇಳಲಿ. 2018ರಲ್ಲಿ ನಾನು ಸೋತಾಗ ಅವರೇ ನನಗೆ ಟಿಕೆಟ್ ಕೊಟ್ಟಿದ್ದರು. ನೀನು ಗೆಲ್ಲಬೇಕು ಅಂತ ಹೇಳಿ ಬೆನ್ನುತಟ್ಟಿದ್ದರು. ಕೆಲವು ಸಂದರ್ಭದಲ್ಲಿ ಅವರ ಆಶೀರ್ವಾದ ನನಗೆ ಇರುತ್ತದೆ ಎಂದು ಹೇಳಿದರು.
ಅಧಿವೇಶನ ಮುಗಿದ ಬಳಿಕ ಕಾಂಗ್ರೆಸ್ ನ 30 ಶಾಸಕರು ದೆಹಲಿಗೆ ಹೋಗುವ ವಿಚಾರವಾಗಿ ಕೇಳಿದ ಪ್ರಶ್ನೆಗೆ
ನಮ್ಮಲ್ಲಿ ಸಾಕಷ್ಟು ಮಂದಿ ಮೂರು ನಾಲ್ಕು ಬಾರಿ ಗೆದ್ದಿರುವ ಶಾಸಕರಿದ್ದಾರೆ. ಅವರಿಗೂ ಅವಕಾಶ ಸಿಗಬೇಕು ಅಂತ ದೆಹಲಿಗೆ ಹೋಗುತ್ತಿದ್ದಾರೆ. ಬೇರೆ ವಿಚಾರ ನನಗೆ ಗೊತ್ತಿಲ್ಲ ಎಂದು ಇಕ್ಬಾಲ್ ಹುಸೇನ್ ಹೇಳಿದರು.