ಸಾರಾಂಶ
- ಆರೋಪ ಮಾಡಿದ್ದ ರೈತ ಮುಖಂಡರೇ ಗೈರು: ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿಕೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಗುತ್ತಿಗೆದಾರರಿಂದ ಹಣ ಪಡೆದಿಲ್ಲ ಎಂದು ಕುಂದೂರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಲು ಶಾಸಕ ಡಿ.ಜಿ.ಶಾಂತನಗೌಡ ಸೆ.20ರಂದು ಶನಿವಾರ ಕುಂದೂರು ದೇವಸ್ಥಾನಕ್ಕೆ ಆಗಮಿಸಿದ್ದರು. ಆದರೆ, ಆರೋಪ ಮಾಡಿ ಸವಾಲು ಹಾಕಿದ್ದ ರೈತ ಮುಖಂಡ ಕೊಳೇನಹಳ್ಳಿ ಸತೀಶ್ ಅವರೇ ಗೈರಾದರು.ಮಧ್ಯಾಹ್ನ 1 ಗಂಟೆಗೆ ಆಗಮಿಸಿದ್ದ ಶಾಸಕ ಡಿ.ಜಿ.ಶಾಂತನಗೌಡ ಕುಂದೂರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅವರು ಜನರನ್ನು ಉದ್ದೇಶಿಸಿ ಮಾತನಾಡಿ, ಆಣೆ ಪ್ರಮಾಣಕ್ಕೆ ಬರುವ ವಿಚಾರವಾಗಿ ಮುಂಚಿತವಾಗಿ ಎಲ್ಲ ಮಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಲಾಗಿತ್ತು. ಭದ್ರಾ ಬಲದಂಡೆ ಕಾಮಗಾರಿ ವಿಚಾರವಾಗಿ ಗುತ್ತಿಗೆದಾರರಿಂದ ಹಣ ಪಡೆದಿಲ್ಲ. ಈ ಕಾರಣ ಧೈರ್ಯವಾಗಿ ಈ ದೇಗುಲದಲ್ಲಿ ಪ್ರಮಾಣ ಮಾಡಲು ಬಂದಿದ್ದೇನೆ. ಆದರೆ ಸವಾಲು ಎಸೆದವರೇ ಪತ್ತೆ ಇಲ್ಲ ಎಂದರು.
ಭದ್ರಾ ಬಲದಂಡೆ ನಾಲಾದಿಂದ ಹೊಸದುರ್ಗ ಮತ್ತು ತರೀಕೆರೆ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿ ಕುರಿತು ತಾಲೂಕಿನ ಕುಂದೂರಿನಲ್ಲಿ ಮಾಜಿ ಸಚಿವರು, ಬಿಜೆಪಿ ಮುಖಂಡರು ರೈತ ಸಮಾವೇಶ ಮಾಡಿದ್ದರು. ಈ ಸಂದರ್ಭ ರೈತ ಒಕ್ಕೂಟ ಮುಖಂಡ ಕೊಳೇನಹಳ್ಳಿ ಸತೀಶ್ ಸ್ಥಳೀಯ ನನ್ನ ವಿರುದ್ಧ ಟೀಕಿಸಿ, ಶಾಸಕರು ಗುತ್ತಿಗೆದಾರರಿಂದ ಹಣ ಪಡೆದಿದ್ದಾರೆಂದು ಆರೋಪಿಸಿದ್ದರು. ಈಗ ಅವರೇ ಗೈರಾಗಿದ್ದು, ಈ ಬಗ್ಗೆ ಜನತೆಯೇ ತೀರ್ಮಾನ ತೆಗೆದುಕೊಳ್ಳಬೇಕು. ಇದರಿಂದ ಸವಾಲು ಹಾಕಿದವರೇ ಭ್ರಷ್ಟರು ಎಂದು ಕೊಳೇನಹಳ್ಳಿ ಸತೀಶ್ ತನ್ನನ್ನು ತಾನೇ ಸಾಬೀತು ಮಾಡಿಕೊಂಡಂತಾಗಿದೆ ಎಂದರು.ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ಬೇರೆಡೆ ನೀರು ಒಯ್ಯುತ್ತಿದ್ದಾರೆ ಎಂದು ವಿಪಕ್ಷದದವರು ನಿರಂತರ ಆರೋಪಿಸುತ್ತಿದ್ದರು. ಆದ್ದರಿಂದ ನಾನೂ ಸೇರಿದಂತೆ ಹಲವಾರು ಶಾಸಕರು, ಮುಖಂಡರು ಭದ್ರಾ ಬಲದಂಡೆ ನಾಲೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿಗಳ ಬಗ್ಗೆ ಸಮಗ್ರ ಮಾಹಿತಿ ಪಡೆದೆವು. ಅನಂತರ ಕುಂದೂರು ಆಂಜನೇಯ ದೇವಸ್ಥಾನ ಆವರಣದಲ್ಲಿ ರೈತ ಸಮಾವೇಶ ನಡೆಸಿ, ಈ ಕಾಮಗಾರಿಯಿಂದ ರೈತರಿಗೆ ಯಾವುದೇ ತೊಂದರೆ ಆಗೋದಿಲ್ಲ ಎಂಬುದು ಮನವರಿಕೆ ಮಾಡಿಕೊಡಲಾಗಿತ್ತು ಎಂದರು.
ಬಳಿಕ ಕೆಲ ದಿನಗಳ ನಂತರ ಕುಂದೂರಿನ ಇದೇ ದೇವಸ್ಥಾನ ಆವರಣದಲ್ಲಿಯೇ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಅನೇಕ ಮುಖಂಡರು ರೈತ ಸಮಾವೇಶ ನಡೆಸಿ ಅವರ ದೃಷ್ಠಿಕೋನದಲ್ಲಿ ಸಾಧಕ -ಬಾಧಕಗಳ ಕುರಿತು ಮಾತನಾಡಿದ್ದರು. ರೈತ ಸಮಾವೇಶ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರೈತ ಒಕ್ಕೂಟದ ಅಧ್ಯಕ್ಷ ಕೊಳೆನಹಳ್ಳಿ ಸತೀಶ್ ತಮ್ಮ ಭಾಷಣದಲ್ಲಿ, ನನ್ನ ವಿರುದ್ಧ ಹಣ ಪಡೆದಿದ್ದಾರೆಂದು ಟೀಕಿಸಿ, ಕುಂದೂರು ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬಹಿರಂಗ ಸವಾಲು ಹಾಕಿದ್ದರು. ಹಾಗಾಗಿ ದೇವಸ್ಥಾನಕ್ಕೆ ಪ್ರಮಾಣ ಮಾಡಲು ಬಂದಿದ್ದೇನೆ ಎಂದರು.ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಣ್ಣಕ್ಕಿ ಬಸವರನಗೌಡ, ಸಾಸ್ವೇಹಳ್ಳಿ ಬ್ಲಾಕ್ ಅಧ್ಯಕ್ಷ ಆರ್. ನಾಗಪ್ಪ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ್, ಹಿರಿಯ ಮುಖಂಡ ವರದರಾಜಪ್ಪ ಗೌಡ, ಕೆ.ಷಣ್ಮುಖಪ್ಪ, ಕೂಲಂಬಿ ಲೋಕೇಶ್ ಪಾಟೀಲ್, ರಾಜಪ್ಪ, ಎಸ್.ಎಂ. ನಾಗರಾಜಪ್ಪ, ತಿಮ್ಮೇನಹಳ್ಳಿ ರಾಜಣ್ಣ, ಮುಕ್ತೇನಹಳ್ಳಿ ಮುರುಳಸಿದ್ದಪ್ಪ, ಆರೆಕೆರೆ ಮಧುಗೌಡ, ಪೀರ್ಯಾ ನಾಯಕ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.
- - -(ಕೋಟ್) ಸ್ಥಳೀಯ ಶಾಸಕ ಡಿ.ಜಿ. ಶಾಂತನಗೌಡ ಅವರು ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ ಪಾರದರ್ಶಕವಾಗಿದ್ದಾರೆ. ಈ ಕಾರಣದಿಂದ ಧೈರ್ಯವಾಗಿ ಆಣೆ ಪ್ರಮಾಣ ಮಾಡಲು ಸಿದ್ಧರಾಗಿ ಬಂದಿದ್ದಾರೆ.
- ಎಚ್.ಬಿ.ಮಂಜಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ.- - -
-20ಎಚ್.ಎಲ್.ಐ1.ಜೆಪಿಜಿ:ಕುಂದೂರು ಆಂಜನೇಯ ದೇವಸ್ಥಾನದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮತ್ತಿತರ ಮುಖಂಡರು ಇದ್ದರು.