- ಪರಿಷತ್ ಚುನಾವಣೆ ನೆಕ್ ಟು ನೆಕ್ ಫೈಟ್ ಇದೆ, ಕಡ್ಡಾಯವಾಗಿ ಹಾಜರಿರಲು ನಮಗೆಲ್ಲಾ ಸೂಚನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನನಗೆ ಯಾವುದೇ ರಾಜಕೀಯ ಹುದ್ದೆಗಳ ಆಸೆ ಇಲ್ಲ, ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ ಎಂದು ದಾವಣಗೆರೆ ಉತ್ತರ ಕ್ಷೇತ್ರ ಶಾಸಕ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅನಿರೀಕ್ಷಿತ ಹೇಳಿಕೆ ನೀಡುವ ಮೂಲಕ ಅಚ್ಚರಿಯನ್ನು ಹುಟ್ಟುಹಾಕಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಯಾವುದೇ ರೀತಿಯಲ್ಲಿ ಅದು ಬೇಕು, ಇದು ಬೇಕು ಅಂತೇನೂ ಇಲ್ಲ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ನಾವು ಶ್ರಮಿಸುತ್ತೇವೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿಯೇ ಕೆಲಸ ಮಾಡುವೆ ಎಂಬ ಹೇಳಿಕೆ ಈಗ ಕಾಂಗ್ರೆಸ್ ಪಾಳೆಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೈಕಮಾಂಡ್ ಮಟ್ಟದ ಹುದ್ದೆಗಳ ಮೇಲೂ ನಮಗೆ ವ್ಯಾಮೋಹವಿಲ್ಲ. ನಮ್ಮದು ಮುಂಚಿನಿಂದಲೂ ಕಾಂಗ್ರೆಸ್ ಕುಟುಂಬ. ವಿಧಾನಸಭೆಯ 2028ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಅವರು ಹೇಳಿದರು.


ಉಪ ಮುಖ್ಯಮಂತ್ರಿ ಸ್ಥಾನವನ್ನು ನಾನೇ ಬೇಡ ಅಂದಿದ್ದೇನೆ. ಬೆಂಬಲಿಗರು, ಅಭಿಮಾನಿಗಳು ಬೇಡವೆಂದರೂ ಉಪ ಮುಖ್ಯಮಂತ್ರಿ ಹುದ್ದೆಗಾಗಿ ಒತ್ತಾಯಿಸುತ್ತಿದ್ದಾರೆ. ರಾಜಕೀಯದಲ್ಲಿ ಎಲ್ಲರಿಗೂ ಆಕಾಂಕ್ಷೆಗಳು, ಆಸೆಗಳು ಇರುವುದು ಸಹಜ. ಆದರೆ, ಬಡವರಿಗೆ ಒಳ್ಳೆಯ ಕೆಲಸಗಳಾಗಬೇಕು. ಕ್ಷೇತ್ರದ ಅಭಿವೃದ್ಧಿ ಆಗಬೇಕು. ಅದೇ ನಮ್ಮ ಮುಖ್ಯ ಅಪೇಕ್ಷೆಯಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನೆಕ್‌ ಟು ನೆಕ್ ಫೈಟ್ ಇದೆ. ವಿಪಕ್ಷದವರು ನಮಗೆ ಗಾಳ ಹಾಕಿದ್ದಾರೆನ್ನುತ್ತಾರೆ. ನಮ್ಮವರು ವಿಪಕ್ಷದವರಿಗೆ ಗಾಳ ಹಾಕಿದ್ದೇವೆ ಎನ್ನುತ್ತಾರೆ. ಇದಕ್ಕೆಲ್ಲಾ ನಾಳೆ ಚುನಾವಣೆ ಮುಗಿದ ನಂತರವಷ್ಟೇ ಸ್ಪಷ್ಟ ಉತ್ತರ ಸಿಗುತ್ತದೆ. ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ಸಿನ ಐವರೂ ಅಭ್ಯರ್ಥಿಗಳು ಗೆಲ್ಲಬೇಕು. ಸಿಎಂ, ಎಐಸಿಸಿ, ಕೆಪಿಸಿಸಿ ಅಧ್ಯಕ್ಷರು ಎಲ್ಲರೂ ಸೇರಿ, ಈ ನಿಟ್ಟಿನಲಲಿ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಮಗೆಲ್ಲರಿಗೂ ಕಡ್ಡಾಯವಾಗಿ ಹಾಜರಾಗಿ ಇರಬೇಕೆಂಬ ಕಟ್ಟುನಿಟ್ಟಿನ ಸೂಚನೆ ಇದೆ. ಹಾಗಾಗಿಯೇ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಎಂ. ಶಾಮನೂರು ಸಹ ಅಲ್ಲಿಯೇ ಇದ್ದಾರೆ. ರಾಜ್ಯದ ಜನತೆಗೆ ಒಳ್ಳೆಯ ಮಳೆ, ಬೆಳೆಯಾಗಲಿ, ಎಲ್ಲರಿಗೂ ಸಮೃದ್ಧಿ ಸಿಗಲಿ. ಸರ್ಕಾರ ಉತ್ತಮವಾಗಿ ನಡೆಯಲಿ ಎಂಬುದೇ ನನ್ನ ಹಾರೈಕೆಗಳಾಗಿವೆ ಎಂದು ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.

- - -

-17ಕೆಡಿವಿಜಿ14: ದಾವಣಗೆರೆಯಲ್ಲಿ ದಿವಂಗತ ಶಾಮನೂರು ಶಿವಶಂಕರಪ್ಪ ಭಾವಚಿತ್ರಕ್ಕೆ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪೂಜೆ ಸಲ್ಲಿಸಿದರು.