ಸಾರಾಂಶ
ಕನ್ನಡಪ್ರಭ ವಾರ್ತೆ ಶೃಂಗೇರಿ
ಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಷು ಕದಾಚರ ಎಂಬ ಶ್ಲೋಕದಂತೆ ನಮ್ಮ ಪ್ರಯತ್ನ ನಾವು ಮಾಡೋಣ. ಫಲಾಫಲ ದೇವರಿಗೆ ಬಿಡೋಣ. ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಒಪ್ಪಂದ ಕುರಿತಂತೆ ನಡೆದಿರುವ ಚರ್ಚೆ, ಡಿನ್ನರ್ ಮೀಟಿಂಗ್, ಶುಕ್ರವಾರವಷ್ಟೇ ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಕೆ.ಎನ್. ರಾಜಣ್ಣ ಅವರು ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಂದು ಬ್ಯಾಟಿಂಗ್ ಮಾಡಿರುವ ನಡುವೆಯೇ ಶನಿವಾರ ಶಿವಕುಮಾರ್ ಇಲ್ಲಿಗೆ ಭೇಟಿ ನೀಡಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಎಂದು ಘೋಷಣೆ ಕೂಗಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ಅವರು, ನನ್ನ ಪರವಾಗಿ ಯಾರೂ ಒತ್ತಾಯ ಮಾಡುವುದು ಬೇಡ. ಈ ವಿಚಾರದಲ್ಲಿ ಯಾವುದೇ ಶಾಸಕರು ನನಗೆ ಬೆಂಬಲ ನೀಡುವುದು ಬೇಡ. ನಾನುಂಟು, ಕಾಂಗ್ರೆಸ್ ಪಕ್ಷವುಂಟು. ಪಕ್ಷದ ನಾಯಕರು ಹೇಳಿದಂತೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ. ನನ್ನ ಪರವಾಗಿ ಶಾಸಕರು, ಕಾರ್ಯಕರ್ತರು ಕೂಗುವುದು ಬೇಡ. ನಾನು ನನ್ನ ಕರ್ತವ್ಯ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸಿ.ಟಿ.ರವಿ ಡ್ರಾಮಾ ಮಾಸ್ಟರ್:ಸಿ.ಟಿ. ರವಿ ಒಬ್ಬ ದೊಡ್ಡ ಡ್ರಾಮಾ ಮಾಸ್ಟರ್. ಸುಳ್ಳಿಗೆ ಸುಳ್ಳು ಪೋಣಿಸಿ ಕತೆ ಹೆಣೆಯುವುದರಲ್ಲಿ ನಿಸ್ಸೀಮ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿ.ಟಿ. ರವಿಗೆ ಪ್ರಾಣ ಬೆದರಿಕೆ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಶೃಂಗೇರಿಯಲ್ಲಿ ಶನಿವಾರ ಮಾಧ್ಯಮದವರೆದುರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಸಿ.ಟಿ.ರವಿ ಅವರಿಗೆ ಬೆದರಿಕೆ ಪತ್ರ ಬಂದಿರುವ ಬಗ್ಗೆ ಪ್ರತಿಕ್ರಿಯಿಸಿ, ಸಿ.ಟಿ. ರವಿ ಅವರನ್ನು ರಾಷ್ಟ್ರೀಯ ನಾಯಕರು, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿ ಎಂದು ಭಾವಿಸಿದ್ದೆ. ಅವರ ಮಾತು, ವಿಚಾರ ನೋಡಿ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಎಂದರು.ಈ ಪ್ರಕರಣದಲ್ಲಿ ಅವರು ಬೇರೆ ಯಾರ ಮಾತು ಕೇಳಬೇಕಿಲ್ಲ. ಅವರ ಆತ್ಮಸಾಕ್ಷಿ ಮಾತನ್ನು ಕೇಳಲಿ. ಆ ರೀತಿ ಮಾತನಾಡ ಬಾರದಿತ್ತು ಎಂದು ಅವರ ಪಕ್ಷದ ನೂರು ನಾಯಕರು ನನ್ನ ಬಳಿ ಹೇಳಿದ್ದಾರೆ. ಅಚಾತುರ್ಯವಾಗಿ ಆ ರೀತಿ ಮಾತಾಡಿದ್ದೇನೆ. ಕ್ಷಮೆ ಕೇಳುತ್ತೇನೆ ಎಂದಿದ್ದರೆ ಪ್ರಕರಣ ಮುಗಿಯುತ್ತಿತ್ತು. ಅದನ್ನು ಬಿಟ್ಟು ಸುಳ್ಳಿಗೆ ಸುಳ್ಳು ಸೇರಿಸಿಕೊಂಡು ಹೋದರೆ ಪ್ರಯೋಜನವಿಲ್ಲ. ಅವರ ಆರೋಪ ಸುಳ್ಳು. ಅವರದ್ದೇ ಅನೇಕ ತನಿಖಾ ತಂಡಗಳಿವೆಯಲ್ಲ ತನಿಖೆ ಮಾಡಿಸಲಿ ಎಂದರು.