ಸಾರಾಂಶ
ಕೊಪ್ಪಳ : ನಾನು ದ್ವೇಷ ರಾಜಕಾರಣ ಮಾಡಲ್ಲ, ಶಾಸಕ ಮುನಿರತ್ನ ಮೇಲೆ ಜಾತಿ ನಿಂದನೆ, ಅತ್ಯಾಚಾರ ಸೇರಿದಂತೆ ಮೂರು ಕೇಸ್ ಇವೆ. ಹೀಗಿದ್ದಾಗ್ಯೂ ಏನು ಮಾಡಬೇಕು ನೀವೇ ಹೇಳಿ? ಇದರಲ್ಲಿ ದ್ವೇಷ ಏನು ಬಂತು? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಕೊಪ್ಪಳ ಬಳಿಯ ಖಾಸಗಿ ವಿಮಾನ ತಂಗುದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಶಾಸಕರು ಬಂದು ಮುನಿರತ್ನ ಅವರ ವಿರುದ್ಧ ಎಸ್ಐಟಿ ತನಿಖೆ ಮಾಡಿಸಿ ಎಂದರು, ಅದಕ್ಕೆ ಅನುಮತಿ ನೀಡಿದ್ದೇನೆ. ತಪ್ಪು ಮಾಡದಿದ್ದರೆ ಅವರ ಮೇಲೆ ಹೇಗೆ ಕ್ರಮಕೈಗೊಳ್ಳಲು ಆಗುತ್ತದೆ ಎಂದರು.
ಮುನಿರತ್ನ ಅವರಿಗೆ ತಪ್ಪು ಮಾಡಿ ಅಂತಾ ನಾನು ಹೇಳಿದ್ದಿನಾ? ಅವರು ತಪ್ಪು ಮಾಡಿದರೆ ಕ್ರಮವಹಿಸುವುದು ದ್ವೇಷನಾ? ಎಂದು ಕಿಡಿಕಾರಿದರು.
ರೀಡು ನಾನು ಮಾಡಿದ್ದಲ್ಲ:
ಅರ್ಕಾವತಿ ಬಡಾವಣೆಯಲ್ಲಿ ರೀಡು ನಾನು ಮಾಡಿದ್ದಲ್ಲ, ಅದನ್ನು ಸುಪ್ರೀಂ ಕೋರ್ಟ್ ಹೇಳಿದ್ದು, ಅದನ್ನು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ? ರಾಜ್ಯಪಾಲರು ಈ ಕುರಿತು ಪತ್ರ ಕಳುಹಿಸಿದ್ದರೆ ನೋಡುತ್ತೇನೆ, ನಾನಿನ್ನು ನೋಡಿಲ್ಲ ಎಂದರು.
ಸೋರಿಕೆ:
ರಾಜ್ಯಪಾಲರ ಪತ್ರದ ಸೋರಿಕೆ ರಾಜಭವನದಲ್ಲಿಯೇ ಯಾಕೆ ಆಗಿರಬಾರದು? ನಮ್ಮ ಕಡೆಯಿಂದ ಯಾಕೆ ಆಗಿದೆ ಅಂತಾ ಹೇಳುತ್ತಾರೆ? ಈ ಬಗ್ಗೆ ತನಿಖೆ ಮಾಡಿಸಿದರೆ ಎಲ್ಲಿ ಸೋರಿಕೆಯಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಹದಗೆಟ್ಟ ರಸ್ತೆಗಳು:
ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ರಸ್ತೆ ರಿಪೇರಿಯೇ ಮಾಡಿಲ್ಲ. ಹೀಗಾಗಿ ಈ ವರ್ಷ ಅತಿಯಾಗಿ ಮಳೆಯಾಗಿದ್ದರಿಂದ ಹಾಳಾಗಿವೆ. ಆದರೂ ಮಳೆ ನಿಂತ ತಕ್ಷಣ ಎಲ್ಲ ರಸ್ತೆಗಳ ದುರಸ್ತಿಗೂ ಕ್ರಮವಹಿಸಲಾಗುವುದು ಎಂದರು.
ಗೋವಿಂದರಾವ್ ವರದಿ ಜಾರಿ:
ಪ್ರಾದೇಶಿಕ ಅಸಮಾನತೆ ಅಧ್ಯಯನ ಮಾಡಲು ಈಗಾಗಲೇ ಗೋವಿಂದರಾವ್ ಸಮಿತಿಯಿಂದ ಅಧ್ಯಯನ ಮಾಡಿಸಲಾಗುತ್ತಿದೆ. ಸಮಿತಿ ವರದಿ ನೀಡುತ್ತಿದ್ದಂತೆ ಜಾರಿ ಮಾಡುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನು ಸಹ ಪ್ರದೇಶವಾರು ಅಸಮಾನತೆ ಇದೆ. ಹೀಗಾಗಿ, ಇದನ್ನು ಸರಿಪಡಿಸುವ ದಿಸೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದರು.
ಈಗಿರುವ ಹಾಲಿನ ದರ ಹೆಚ್ಚಳ ಮಾಡಲಾಗಿದೆ. ಆದರೆ, ಅದನ್ನು ಸಂಪೂರ್ಣವಾಗಿ ರೈತರಿಗೆ ನೀಡುವಂತೆ ಹೇಳಿದ್ದೇನೆ. ಮಾಗಡಿಯಲ್ಲಿ ರೈತರು ಹಾಲಿನ ದರ ಹೆಚ್ಚಳ ಕುರಿತು ಪ್ರಸ್ತಾಪ ಮಾಡಿದ್ದರು, ಸಮಸ್ಯೆ ತೋಡಿಕೊಂಡಿದ್ದರು. ಹೀಗಾಗಿ, ಅವರಿಗೆ ಭರವಸೆ ನೀಡಿದ್ದು, ಅದರಂತೆ ನಡೆದುಕೊಳ್ಳುವುದಾಗಿ ಹೇಳಿದರು.