ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
‘ವಿಧಾನಸಭೆ ಸ್ಪೀಕರ್ ಆಗಿ ಐದು ವರ್ಷಗಳ ಕಾಲ ಮುಂದುವರಿಯಲಿದ್ದೇನೆಯೇ ಎಂಬುದು ನನಗೆ ಗೊತ್ತಿಲ್ಲ. ಹಣೆಬರಹ ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಗೊತ್ತಿಲ್ಲ.’ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಚಿವರಾಗುವ ಸಾಧ್ಯತೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ನಮಗೆ ದೊರಕುವ ಸ್ಥಾನಮಾನ ಆಶೀರ್ವಾದಕ್ಕಿಂತಲೂ ಹೆಚ್ಚಿನದ್ದು ಎಂಬ ಭಾವನೆ ಇತ್ತು. ಆದರೆ, ಆಶೀರ್ವಾದವೇ ಮುಖ್ಯ ಎಂಬುದು ನನಗೀಗ ಮನವರಿಕೆ ಆಗಿದೆ. ಶಾಸಕ, ಮಂತ್ರಿ, ಸ್ಪೀಕರ್ ಯಾವುದೇ ಸ್ಥಾನದಲ್ಲಿಯೂ, ಸ್ಥಾನ ಇಲ್ಲದೆಯೂ ನಾನು ಖುಷಿಯಾಗಿರುತ್ತೇನೆ. ನನಗೆ ಸ್ಥಾನ ಮುಖ್ಯವಲ್ಲ, ನಾವು ಕೆಲಸ ಮಾಡುವುದು ಮುಖ್ಯ. ನನಗೆ ಅಧಿಕಾರ ಶಾಶ್ವತ ಅಲ್ಲ ಎಂಬ ಅರಿವಿದೆ ಎಂದರು.ನನ್ನ ಕ್ಷೇತ್ರದಲ್ಲಿ ದಂಧೆಗಳಿಗೆ ಅವಕಾಶ ಇಲ್ಲ: ಜಿಲ್ಲೆಯಲ್ಲಿ ಜೂಜಾಟ, ಮಸಾಜ್ ಪಾರ್ಲರ್‌ಗಳು, ವೀಡಿಯೋ ಗೇಮ್, ಅಕ್ರಮ ಮರಳು ದಂಧೆ ಹೆಚ್ಚಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 2018 ರಿಂದ 20ರ ಅವಧಿಯಲ್ಲಿ ಉಸ್ತುವಾರಿ ಸಚಿವನಾಗಿದ್ದಾಗ ಈ ಎಲ್ಲವನ್ನೂ ಬಂದ್ ಮಾಡಿಸಿದ್ದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಎಲ್ಲವೂ ಮತ್ತೆ ತೆರೆಯಿತು. ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲಾಗಿತ್ತು. ಮತ್ತೆ ಅದು ಬಂದ್ ಆಯಿತು ಎಂದು ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.
ಶಾಸಕರು ಅನುದಾನ ಬಾರಿದಿದ್ದರೆ ಅದನ್ನು ಮುಖ್ಯಮಂತ್ರಿಗಳಿಗೆ ತಿಳಿಸಬೇಕು. ವಿಪಕ್ಷದ ಯಾವ ಶಾಸಕರೂ ಅನುದಾನ ಬಂದಿಲ್ಲ ಎಂದು ನನ್ನ ಬಳಿ ಹೇಳಿಲ್ಲ. ಹೇಳಿದರೆ ಮುಖ್ಯಮಂತ್ರಿಗೆ ತಿಳಿಸುವ ಕೆಲಸ ಮಾಡುವೆ ಎಂದು ಪ್ರಶ್ನೆಯೊಂದಕ್ಕೆ ಯು.ಟಿ. ಖಾದರ್ ಉತ್ತರಿಸಿದರು.ಕರ್ನಾಟಕ ವಿಧಾನಸಭಾ ಅಧಿವೇಶವನ್ನು ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಸುವ ಇರಾದೆ ಇದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವುದು.
-ಯು.ಟಿ.ಖಾದರ್, ಸ್ಪೀಕರ್